ಕನ್ನಡಪ್ರಭ ವಾರ್ತೆ ಬೇಲೂರು
ಅಂಗ ವೈಫಲ್ಯದಿಂದ ಬಳಲುತ್ತಿರುವ ಅನಾಥ ಮಕ್ಕಳಿಗೆ ಸರ್ಕಾರದಿಂದ ದೊರಕುವಂತಹ ಅಗತ್ಯ ಸೌಲಭ್ಯವನ್ನು ಕೊಡಿಸುವುದಾಗಿ ತಹಸೀಲ್ದಾರ್ ಮಮತಾ ಎಂ ಹೇಳಿದರು.ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದ 13 ವರ್ಷದ ವೈಶಾಂತ್ ಹಾಗೂ 14 ವರ್ಷದ ವಿನಂತ್ ಎಂಬುವರು ಅಂಗ ವೈಫಲ್ಯ ಹೊಂದಿದ್ದು, ಚಿಕ್ಕ ವಯಸ್ಸಿನಲ್ಲಿ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡಿದ್ದರು. ಕಳೆದ ಆರೇಳು ವರ್ಷಗಳ ಹಿಂದೆ ಪೋಷಕರು ಅನಾರೋಗ್ಯದಿಂದ ಮರಣ ಹೊಂದಿದ್ದು ಇಬ್ಬರು ಮಕ್ಕಳ ಜವಾಬ್ದಾರಿಯಯನ್ನು ಅತ್ತೆ ಮಾವಂದಿರು ವಹಿಸಿಕೊಂಡಿದ್ದರು. ಆದರೆ ಇಬ್ಬರೂ ಮಕ್ಕಳ ದಾಖಲೆಗಳಲ್ಲಿ ಆಧಾರ್ ಕಾರ್ಡ್ ದಾಖಲೆ ಇಲ್ಲದೆ ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದರು. ಅಲ್ಲದೆ ಹಿರಿಯ ಮಗ ವಿನಂತ್ ಎಂಬುವವರಿಗೆ ಅಂಗವೈಫಲ್ಯ ಇದ್ದರೂ ಸಮರ್ಪಕವಾದ ಆಧಾರ್ ಕಾರ್ಡ್ ಇಲ್ಲದೇ ಸರ್ಕಾರದ ಯಾವುದೇ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಅವಿದ್ಯಾವಂತರಾದ ಪೋಷಕರು ಕಳೆದ ಒಂದು ವರ್ಷದಿಂದ ಇಬ್ಬರಿಗೂ ಆಧಾರ್ ಕಾರ್ಡ್ ಮಾಡಿಸಲು ತಾಲೂಕು ಹಾಗೂ ಜಿಲ್ಲೆಯ ವಿವಿಧೆಡೆ ಅಲೆದಾಡಿ ಹೈರಾಣಾಗಿದ್ದರು.
ಈ ವಿಷಯ ಸಮಾಜ ಸೇವಕ ಕಡೇಗರ್ಜೆ ವಿಜಯರಾಜುರವರ ಗಮನಕ್ಕೆ ಬಂದಿದ್ದು, ಅವರು ತಾಲೂಕಿನ ತಹಸೀಲ್ದಾರ್ ಮಮತಾರವರಿಗೆ ಮಾಹಿತಿ ರವಾನಿಸಿದ್ದರು. ಆ ಬಳಿಕ ಕೆಲವೇ ಘಂಟೆಗಳಲ್ಲಿ ತಹಸೀಲ್ದಾರ್ ಮಮತಾ ಅವರು ಮನೆಗೆ ಭೇಟಿ ನೀಡಿ ಇಬ್ಬರು ಮಕ್ಕಳನ್ನು ಖುದ್ದಾಗಿ ಪರಿಚಯ ಮಾಡಿಕೊಂಡು ಹತ್ತಿರದ ಆಧಾರ್ ಸೇವಾ ಸೆಂಟರ್‌ಗೆ ಕರೆದುಕೊಂಡು ಹೋಗಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿ ಅಂಗ ವೈಫಲ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರದಿಂದ ದೊರಕುವಂತಹ ಸೌಲಭ್ಯವನ್ನು ಕೊಡಿಸುವುದಾಗಿ ಭರವಸೆ ನೀಡಿದರು. ತಾಲೂಕಿನ ಬಡ ಜನತೆಯ ಹಾಗೂ ದೀನ ದಲಿತರ ಪರವಾಗಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಮಮತಾರಂತಹ ಅಧಿಕಾರಿಗಳು ಈ ತಾಲೂಕಿಗೆ ಬೇಕಾಗಿದ್ದಾರೆ ಎಂದು ಮಕ್ಕಳ ಸಂಬಂಧಿ ಭವ್ಯ ಶ್ಲಾಘನೆ ವ್ಯಕ್ತಪಡಿಸಿದರು.