ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಶ್ರೀಗಳಲ್ಲಿ ಎಲ್ಲರನ್ನೂ ಸೆಳೆಯುವ, ಆಕರ್ಷಿಸುವ ಗುರುತ್ವಾಕರ್ಷಣಾ ಶಕ್ತಿ ಇತ್ತು ಎಂದು ಶ್ರೀ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಚಾರ್ಯವರ್ಯ ಮಹಾಸ್ಚಾಮೀಜಿ ಹೇಳಿದರು.ತಾಲೂಕಿನ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಪೂರ್ವ ಭಟ್ಟಾರಕ ಶ್ರೀಗಳವರ ನಿಷಿಧಿ ಮಂಟಪದಲ್ಲಿ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಚರಣಪೂಜೆ, ಫಲಪುಷ್ಟ ಸಮರ್ಪಣೆ, ಅಷ್ಟವಿಧಾರ್ಚನೆ ಬಳಿಕ ನಡೆದ ವಿನಯಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಶ್ರೀಗಳು ದೇಶದ ಜೈನ ಸಮಾಜದ ಗುರುಗಳು, ಮಾರ್ಗದರ್ಶಕರಾಗಿದ್ದರು, ಉತ್ತರ-ದಕ್ಷಿಣ ಜೈನ ಸಮಾಜದ ಸೇತುವೆ ಆಗಿದ್ದರು. ಬೆಳಗೊಳವನ್ನು ಉತ್ತುಂಗಕ್ಕೇರಿಸಿ, ದೇಶ-ವಿದೇಶಗಳಲ್ಲಿ ತನ್ನದೇ ಸ್ಥಾನ ಪಡೆಯುವಂತೆ ಮಾಡಿದವರು, ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಸಂದೇಶವನ್ನು ಮನೆ-ಮನಗಳಿಗೆ ತಲುಪಿಸಿದ ಪ್ರಾತಃಸ್ಮರಣೀಯರು ಎಂದು ಸ್ಮರಿಸಿದರು.
ಅವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಾವೆಲ್ಲರೂ ಸೇರಿ ಗುರುಗಳಿಗೆ ಭಕ್ತಿ ಸಮರ್ಪಣೆ ಮಾಡಿದ್ದೇವೆ. ಶ್ರೀಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಬರೆಯಲು ಕುಳಿತದೆ ಪುಟಗಳೇ ಸಾಲದು, ಅಂತಹ ಮೇರು ವ್ಯಕ್ವಿತ್ವ ಶ್ರೀಗಳದ್ದಾಗಿತ್ತು ಎಂದರು.ಗುರುವಾದವರಿಗೆ ಗುರುತ್ವಾಕರ್ಷಣ ಶಕ್ತಿ ಇರಬೇಕೆಂದು ಆಗಾಗ ಸ್ವಾಮೀಜಿ ಹೇಳುತ್ತಿದ್ದರು. ಅಂತಹ ಧೀ ಶಕ್ತಿ ಅವರಲ್ಲಿತ್ತು, ಆ ಕಾರಣದಿಂದಲೇ ಪರಮಪೂಜ್ಯರು ಶಿಷ್ಯರು, ಭಕ್ತರು, ರಾಜಕಾರಣಿಗಳು ಸೇರಿದಂತೆ ಎಲ್ಲರನ್ನೂ ಆಕರ್ಷಿಸುತ್ತಿದ್ದರು ಎಂದು ನುಡಿದರು.ತಮ್ಮ ದೀಕ್ಷಾ ಸಂದರ್ಭದಲ್ಲಿ ಅನೇಕ ಸಲ ನಾನು ವಾಪಸ್ ಹೋಗಬೇಕು ಅನ್ನಿಸಿದ್ದು ಉಂಟು, ಆದರೆ ಶ್ರೀಗಳನ್ನು ಎದುರುಗೊಂಡ ತಕ್ಷಣ, ಹತ್ತಿರ ಹೋದಾಗ ಬಿಟ್ಟು ಹೋಗಬೇಕು ಅನ್ನಿಸಲಿಲ್ಲ. ಆ ಮೂರು ತಿಂಗಳು ಶ್ರೀಗಳಿಂದ ತಾವು ಪಡೆದಿದ್ದು, ೩೦ ವರ್ಷಕ್ಕೆ ಆಗಲಿದೆ, ಅಷ್ಟು ಆಶೀರ್ವಾದ ಮಾಡಿದ್ದಾರೆ ಎಂದರು. ಶ್ರೀ ಕ್ಷೇತ್ರವನ್ನು ದೇಶ ಮಾತ್ರವಲ್ಲದೆ ವಿದೇಶಕ್ಕೂ ತಮ್ಮದೇ ಸಂದೇಶಗಳ ಮೂಲಕ ಪರಿಚಯಿಸಿದರು. ರಾಜಮನೆತನ, ಸರ್ಕಾರಗಳನ್ನು ಆಕರ್ಷಿಸಿ ಕ್ಷೇತ್ರಕ್ಕೆ ಆಗಬೇಕಾದ ಕೆಲಸ ಮಾಡಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಮಹನೀಯರು ಎಂದು ಸ್ಮರಿಸಿದರು. ೨ ವರ್ಷದಲ್ಲಿ ನಾವು ಏನೇ ಮಾಡಿದ್ದರೂ, ಅವರ ಆಶೀರ್ವಾದ, ಅನುಗ್ರಹ ಇದೆ ಎಂದುಕೊಂಡೇ ಮುನ್ನಡೆಯುತ್ತಿದ್ದೇವೆ. ಸ್ವಾಮೀಜಿ ಅವರ ಶ್ರೇಷ್ಠ ಸಂದೇಶವೊಂದಿದೆ. ಅದೇನೆಂದರೆ ಎಲ್ಲರೂ ಒಳ್ಳೆಯವರು, ನಾವು ಜಾಗೃತರಾಗಿರಬೇಕು ಎಂದು. ಅಂದರೆ ಎಲ್ಲರೂ ಒಳ್ಳೆಯವರು ಎಂದು ಭಾವಿಸಿದರೆ ವೈರತ್ವ ಬರಲ್ಲ, ಜೊತೆಗೆ ನಾವು ಜಾಗೃತರಾಗಿರುವುದನ್ನು ಮರೆಯಬಾರದು ಎಂದು ಶ್ರೀಗಳು ಹೇಳುತ್ತಿದ್ದರು ಎಂದು ಸ್ವಾಮೀಜಿ ನೆನಪು ಮಾಡಿಕೊಂಡರು. ಇದೇ ವೇಳೆ ನಿಷಿಧಿ ಮಂಟಪ, ಸೋಪಾನ ಮೆಟ್ಟಿಲು, ಸ್ವಾಗತ ಕಮಾನು ನಿರ್ಮಾಣ ಮಾಡಿದವರನ್ನು ಅಭಿನಂದಿಸಲಾಯಿತು.
ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲ. ಆದರೆ ದೇವರ ಸ್ವರೂಪಿಯಾಗಿ ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ ಎಂದರು. ಶ್ರೀ ಕ್ಷೇತ್ರವನ್ನು ಜಗತ್ತಿಗೆ ಪರಿಚಯಿಸಿ, ಕ್ಷೇತ್ರದ ಹಿರಿಮೆ-ಗರಿಮೆ ಉನ್ನತೀಕರಣ ಮಾಡಿದವರು, ೪ ಮಸ್ತಕಾಭಿಷೇಕ, ೮೧ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಯಾಗಿ ಸಾಕಾರಗೊಳಿಸಿ, ನಾಡಿಗೆ, ದೇಶಕ್ಕೆ, ಪ್ರಪಂಚಕ್ಕೆ ಸಂದೇಶ ನೀಡಿದವರು. ಸರ್ವ ಧರ್ಮೀಯರನ್ನೂ ಪ್ರೀತಿಸಿ, ಗೌರವಿಸಿ,ಆದರಿಸಿ, ಕ್ಷೇತ್ರದ ಗೌರವ ಹೆಚ್ಚು ಮಾಡಿದವರು. ಅವರ ಕಾರ್ಯ ತತ್ಪರತೆ, ಮುಂದಾಲೋಚನೆಯನ್ನು ಬೇರೆ ಯಾರಿಗೂ ಹೋಲಿಸಲು ಸಾಧ್ಯವಿಲ್ಲ. ಅವರ ಕಾರ್ಯವಿಧಾನದ ಬಗ್ಗೆ ನಾವೆಲ್ಲರೂ ಕಲಿಯುವುದು ಬಹಳ ಇದೆ. ಧಾರ್ಮಿಕ, ಆರೋಗ್ಯ, ಸಮಾಜ ಮುಖಿಯಾಗಿ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಸ್ವಾರ್ಥರಹಿತ ಯಾವುದಾದರೂ ಧಾರ್ಮಿಕ ಕ್ಷೇತ್ರ ಇದ್ದರೆ ಅದು ಶ್ರವಣಬೆಳಗೊಳ, ಇದಕ್ಕೆ ಕಾರಣ ಶ್ರೀಗಳು ಎಂದರು.ಕಾರ್ಯಕ್ರಮದಲ್ಲಿ ಕಂಬದಹಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಫ್ತಾಬ್ ಪಾಷಾ, ಚನ್ನರಾಯಪಟ್ಟಣ ಪುರಸಭೆ ಅಧ್ಯಕ್ಷ ಮಧುಕುಮಾರ್, ಅನಿಲ್ ಸೇಠಿ, ಶ್ರೀಮಠ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಚ್.ಪಿ.ಅಶೋಕ್ ಕುಮಾರ್, ಪಿಎಸ್‌ಐ ನವೀನ್ ಕುಮಾರ್ ಮುಂತಾದವರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು ಪರಮಪೂಜ್ಯರ ಸ್ಮರಿಸಿ ಗೌರವ ನಮನ ಸಲ್ಲಿಸಿದರು.