ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಯುಗ ಪ್ರವರ್ತಕ ಸಾಹಿತಿ, ನಾಡು ಕಂಡ ಅಪರೂಪದ ಲೇಖಕ, ಹತ್ತಾರು ಸಂಶೋಧನಾ ಆಧಾರಿತ, ಐತಿಹಾಸಿಕ ಕಾದಂಬರಿಗಳನ್ನು ರಚಿಸಿ, ದೇಶದ ಸಮಗ್ರತೆಗೆ ಕಾರಣರಾದ ಕವಿ ಕನ್ನಡ ಸಾಹಿತ್ಯ ಲೋಕದ ಹೆಮ್ಮರ.. ಡಾ ಎಸ್.ಎಲ್ ಭೈರಪ್ಪನವರು ಇನ್ನು ಮುಂದೆ ನಮ್ಮ ಮಧ್ಯೆ ದೈಹಿಕವಾಗಿ ಇರುವುದಿಲ್ಲ ಎಂಬ ಸಂಗತಿ ತುಂಬಾ ದುಃಖ ತರಿಸಿದೆ ಎಂದು ಖ್ಯಾತ ವೈದ್ಯ ಡಾ.ಕೆ.ನಾಗೇಶ್ ತಿಳಿಸಿದರು.ಅವರು ಮಾಧ್ಯಮದವರೊಂದಿಗೆ ಮಾತನಾಡಿ, ೨೦೧೩ರಲ್ಲಿ ಮೈಸೂರಿನ ಅವರ ನಿವಾಸಕ್ಕೆ ನಾನು ಭೇಟಿ ನೀಡಿದಾಗ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ನಮ್ಮೊಂದಿಗೆ ಮಾತನಾಡಿ ಚನ್ನರಾಯಪಟ್ಟಣದ ಅವರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿ ಮಾತನಾಡಿದ್ದು ನನ್ನ ವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ಹಾಗೆ ಪ್ರಥಮ ಬಾರಿಗೆ ನಮ್ಮ ಶಾಲೆಯ ಜ್ಞಾನಸಾಗರ ಪರಂಪರ ಕಾರ್ಯಕ್ರಮಕ್ಕೆ ಆಗಮಿಸಿದಾಗ ಅವರನ್ನು ಕಾರಿನಿಂದ ವೇದಿಕೆಗೆ ಕರೆದೊಯ್ಯುವಾಗ ಅವರ ನೂರಾರು ಅಭಿಮಾನಿಗಳು, ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದನ್ನು ಕಂಡಾಗ ಭೈರಪ್ಪನವರ ವ್ಯಕ್ತಿತ್ವದ ಪರಿಚಯ ಮನದಟ್ಟಾಗುವಂತಿತ್ತು. ಅಂದಿನ ಕಾರ್ಯಕ್ರಮದಲ್ಲಿ ಸುಮಾರು ಹತ್ತುಸಾವಿರಕ್ಕೂ ಹೆಚ್ಚುಜನ ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದು ಸ್ಮರಣೀಯ. ಅಲ್ಲದೆ ಭೈರಪ್ಪನವರ ಹಲವಾರು ಕಾರ್ಯಕ್ರಮಗಳಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ನನ್ನದಾಗಿದ್ದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ತಮ್ಮ ಹಲವಾರು ಕಾದಂಬರಿಗಳ ಮೂಲಕ ಈ ದೇಶದ ಸಮಗ್ರತೆ ಕಾರಣರಾಗಿದ್ದವರೂ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಓದುಗರನ್ನು ಹೊಂದಿದ ಲೇಖಕರು, ಎಂಬ ಖ್ಯಾತಿಗೆ ಪಾತ್ರರಾದ ಸನ್ಮಾನ್ಯ ಸರಸ್ವತಿ ಸಮ್ಮಾನ್ ಡಾ ಎಸ್.ಎಲ್ ಭೈರಪ್ಪನವರಿಗೆ ಎಂದಿಗೂ ಸಾವಿಲ್ಲ. ಅವರ ಬರಹಗಳ ಮೂಲಕ ಲಕ್ಷಾಂತರ ಕನ್ನಡ ಓದುಗರ, ಕನ್ನಡ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಡಾ. ಎಸ್.ಎಲ್ ಭೈರಪ್ಪನವರಂತಹ ಕನ್ನಡ ಸಾಹಿತ್ಯದ ಹೆಮ್ಮರ ನಮ್ಮ ತಾಲೂಕಿನವರು ಅಥವಾ ಅವರು ಹುಟ್ಟಿದ ತಾಲೂಕಿನಲ್ಲಿ ನಾವು ಹುಟ್ಟಿ ಬೆಳೆದಿದ್ದೇವೆ ಎಂಬುದು ನಮ್ಮ ಸೌಭಾಗ್ಯ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರ ಸ್ನೇಹಿತರು, ಓದುಗರು, ಗ್ರಾಮಸ್ಥರು ಮತ್ತು ಬಂಧು-ಮಿತ್ರರು ಹಾಗೂ ಸಹಸ್ರಾರು ಅಭಿಮಾನಿಗಳಿಗೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಆ ಪರಮಾತ್ಮನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.