ಕನ್ನಡಪ್ರಭ ವಾರ್ತೆ ಮುಳಬಾಗಿಲು
ಎಂ.ಅಗ್ರಹಾರದ ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯಲ್ಲಿ ೩೫ ವರ್ಷಗಳ ಶಿಕ್ಷಣ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯ ಕೆ.ಬಿ. ನಾರಾಯಣ ಸ್ವಾಮಿ ಅವರಿಗೆ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದಿಂದ ಬೀಳ್ಕೊಡುಗೆ ಸಮಾರಂಭ ಲಂಡನ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.
೧೯೯೧ರಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಕೆ.ಬಿ. ನಾರಾಯಣ ಸ್ವಾಮಿ ಶಾಲೆಯ ಬೆಳವಣಿಗೆಗೆ ಹಾಗೂ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದು ಶ್ಲಾಘನೀಯ. ಹಳೇ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಇಷ್ಟು ಅದ್ಧೂರಿ ಸಮಾರಂಭ ಮಾಡುತ್ತಿರುವುದನ್ನು ಗಮನಿಸಿದರೇ ಇವರ ಸಾಧನೆ ಏನೆಂಬುದು ತಿಳಿಯುತ್ತದೆ, ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಅನುಮಾನವಿಲ್ಲ, ಜಯಪ್ರಕಾಶ್ ನಾರಾಯಾಣ್ ಪ್ರೌಢಶಾಲೆಯಲ್ಲಿ ಕಟ್ಟಡ ನಿರ್ಮಾಣದ ಜವಾಬ್ದಾರಿ ತೆಗೆದುಕೊಳ್ಳುವುದಾಗಿಯೂ ಇದೇ ವೇಳೆ ಆಶ್ವಾಸನೆ ನೀಡಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಬಿ.ನಾರಾಯಣ ಸ್ವಾಮಿ, ಮಕ್ಕಳೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಿಂದ ರಕ್ತದಾನ ಶಿಬಿರದಡಿ ೫೦ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.