;Resize=(412,232))
ಬೆಳಗಾವಿ: ಕಳೆದ 150 ವರ್ಷಗಳಲ್ಲಿ ಎಂದೂ ಕಂಡರಿಯದ ಬರ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರುವ ಸಂಭವವಿದೆ. ಮಳೆಯ ತೀವ್ರ ಕೊರತೆಯಿಂದ ಬೆಳಗಾವಿ ಕಂದಾಯ ವಿಭಾಗದ ಏಳು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದ್ದು, ಕುಡಿಯುವ ನೀರು ಹಾಗೂ ಬೆಳೆನಷ್ಟದ ಸಮಸ್ಯೆ ಎದುರಿಸಲು ಸರ್ಕಾರ ಸಮಗ್ರ ಕಾರ್ಯಯೋಜನೆ ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂನ್‌ನಲ್ಲಿ ವಾಡಿಕೆ ಮಳೆಯ ಶೇ.25ರಿಂದ ಶೇ.30ರಷ್ಟು ಮಾತ್ರ ಮಳೆಯಾಗಿದೆ. ಬೆಳಗಾವಿ ಸೇರಿದಂತೆ ಏಳು ಜಿಲ್ಲೆಗಳ ಜಲಾಶಯಗಳ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಗಂಭೀರ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಬರ ಘೋಷಣೆ ಕುರಿತು ಪ್ರತಿಕ್ರಿಯಿಸಿ, ಯಾವುದೇ ತಾಲೂಕು ಅಥವಾ ಜಿಲ್ಲೆಯನ್ನು ಮನಬಂದಂತೆ ಬರಪೀಡಿತ ಪ್ರದೇಶವೆಂದು ಘೋಷಿಸಲು ಸಾಧ್ಯವಿಲ್ಲ. ಮಳೆಯ ಪ್ರಮಾಣ, ಬೆಳೆನಷ್ಟ, ಜಲಾಶಯಗಳ ನೀರಿನ ಮಟ್ಟ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಆಧಾರದ ಮೇಲೆ ಮಾತ್ರ ಬರ ಘೋಷಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪ್ರತಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ತುರ್ತು ಕಾಮಗಾರಿಗಳಿಗಾಗಿ ತಲಾ ₹5 ಕೋಟಿ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಕಾರ್ಯಯೋಜನೆ ಜಾರಿಗೊಳಿಸಲಿದ್ದಾರೆ ಎಂದು ಹೇಳಿದರು. ಬರ ಪರಿಸ್ಥಿತಿ ಮುಂದುವರಿದರೆ ರೈಲು ಟ್ಯಾಂಕರ್ ಮೂಲಕ ನೀರು ಪಡೆಯುವ ಕುರಿತಾಗಿ ಯೋಚಿಸಿಲ್ಲ ಎಂದು ಇದೇ ವೇಳೆ ಅವರು ತಿಳಿಸಿದರು.
ಮೋಡ ಬಿತ್ತನೆ ಕುರಿತು ಪ್ರತಿಕ್ರಿಯಿಸಿ, ಸದ್ಯಕ್ಕೆ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವ ಇಲ್ಲ. ಮೋಡಗಳ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾದರೆ ಮಾತ್ರ ಆ ಕುರಿತು ಪರಿಶೀಲಿಸಲಾಗುವುದು ಎಂದರು.
ಬೆಳೆಹಾನಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ನೀಡುವ ಪರಿಹಾರ ಕಡಿಮೆ ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ವಿಷಯವನ್ನು ಹಿಂದೆಯೇ ಕೇಂದ್ರದೊಂದಿಗೆ ಚರ್ಚಿಸಿದ್ದೇವೆ ಎಂದರು.
ಮಳೆ ಕೊರತೆ ಹಿನ್ನೆಲೆಯಲ್ಲಿ ಬೆಳಗಾವಿ ಕಂದಾಯ ವಿಭಾಗದಲ್ಲಿ ಸಚಿವ ಪರಂ ಸಭೆ
ಈ ವೇಳೆ ಮಳೆ ಕೊರತೆ, ಜಲಾಶಯಗಳಲ್ಲಿ ನೀರಿನ ಪ್ರಮಾಣ ಇಳಿಕೆ ಬಗ್ಗೆ ಕಳವಳ
ಇದೇ ಪರಿಸ್ಥಿತಿ ಮುಂದುವರೆದರೆ 150 ವರ್ಷಗಳ ಭೀಕರ ಬರ ಎದುರಿಸುವ ಆತಂಕ
ಈ ಹಿನ್ನೆಲೆ ನೀರಿನ ಕೊರತೆ ಎದುರಾಗದಂತೆ ಹಲವು ಮುನ್ನೆಚ್ಚರಿಕಾ ಕ್ರಮ ಜಾರಿ
ಪ್ರತಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ತುರ್ತು ಕಾಮಗಾರಿಗೆ 5 ಕೋಟಿ ರು. ಜಮೆ
ಬರ ಎದುರಿಸಲು ಮೋಡ ಬಿತ್ತನೆ ಬಗ್ಗೆ ಚಿಂತನೆ ಇಲ್ಲ ಎಂದ ಸಚಿವ ಪರಮೇಶ್ವರ್