ಬೆಂಗಳೂರು : ನಗರದ ಐಟಿ ಕಂಪನಿಯೊಂದರ ಆವರಣದಲ್ಲಿರುವ ಡೇ-ಕೇರ್ ಕೇಂದ್ರದಲ್ಲಿ (ಬೇಬಿ ಕೇರ್‌ ಸೆಂಟರ್‌) ಎರಡು ವರ್ಷದ ಪುಟ್ಟ ಪುಟ್ಟ ಮಕ್ಕಳಿಗೆ ದೈಹಿಕ ಹಿಂಸೆ, ದೌರ್ಜನ್ಯ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರೂಕ್​ಫೀಲ್ಡ್​​ನ ಎಚ್‌ಎಎಲ್ ಆವರಣದಲ್ಲಿರುವ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್​ನಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಕ್ಕಳನ್ನು ವಾಷಿಂಗ್ ಮಷಿನ್ ಒಳಗೆ ಹಾಕುವುದು, ಬಲವಂತವಾಗಿ ಟಾಯ್ಲೆಟ್ ಜೆಟ್ ಸ್ಪ್ರೇ ಪೈಪ್​​ ನೇರವಾಗಿ ಮಕ್ಕಳ ಬಾಯಿಗೆ ತುರುಕಿ ನೀರು ಬಿಡುವ ಮೂಲಕ ಇಲ್ಲಿನ ಸಿಬ್ಬಂದಿ ಅತ್ಯಂತ ಅಮಾನುಷವಾಗಿ ನಡೆದುಕೊಂಡಿದ್ದಾರೆ.

ಮಕ್ಕಳ ಸಹಾಯವಾಣಿ ಅಧಿಕಾರಿ ತಿಲಕೇಶ್‌ ಕುಮಾರ್‌ ಎಂಬುವರು ನೀಡಿದ ದೂರಿನನ್ವಯ ಸೊಸೈಟಿ ಜನರಲ್‌ ಬೇಬಿ ಕೇರ್‌ ಸಂಸ್ಥೆ ಸಿಬ್ಬಂದಿ ಮಂಜುಳಾ, ವಿಜಯಲಕ್ಷ್ಮಿ, ಭವಾನಿ, ಸಿಂಧು ಮತ್ತು ಬಿಂದು ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆಯಾಗಳಿಂದ ಮಕ್ಕಳಿಗೆ ದೈಹಿಕ ಹಿಂಸೆ:

ಖಾಸಗಿ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಈ ಸೆಂಟರ್​ನಲ್ಲಿ ಬಿಟ್ಟು ಹೋಗುತ್ತಾರೆ. ಆದರೆ, ಅಲ್ಲಿನ ಆಯಾಗಳು ಮಾತ್ರ ಮಕ್ಕಳ ಮೇಲೆ ಮೃಗೀಯ ವರ್ತನೆ ತೋರಿದ್ದಾರೆ. ಮಕ್ಕಳು ಅಳುವಾಗ ಅಥವಾ ಗಲಾಟೆ ಮಾಡಿದಾಗ ಹಿಂಸೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಾಷಿಂಗ್ ಮಷಿನ್‌:

ಅಳುವ ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಹಾಕುವುದು, ಬಲವಂತವಾಗಿ ಟಾಯ್ಲೆಟ್ ಜೆಟ್ ಸ್ಪ್ರೇ ಪೈಪ್​​ ಅನ್ನು ನೇರವಾಗಿ ಮಕ್ಕಳ ಬಾಯಿಗೆ ತುರುಕಿ ನೀರು ಬಿಡುವ ಮೂಲಕ ಅತ್ಯಂತ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯದೊಳಗೆ ಕೂಡಿ ಹಾಕುವುದಲ್ಲದೆ ಕಿರುಚಾಡದಂತೆ ಹೆದರಿಸಿದ್ದಾರೆ. ಆಯಾಗಳ ಈ ಕ್ರೂರ ಕೃತ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?:

ಚಿಕ್ಕ ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದನ್ನು ಅಲ್ಲಿನ ಸಿಬ್ಬಂದಿಯೊಬ್ಬರು ರಹಸ್ಯವಾಗಿ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು ಬಳಿಕ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಚೈಲ್ಡ್ ಹೆಲ್ಪ್‌ಲೈನ್ ಅಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಕೂಡ ಸ್ಥಳ ಮಹಜರು ನಡೆಸಿದ್ದಾರೆ. ನಂತರ ಘಟನೆ ಸಂಬಂಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸೂಪರ್‌ವೈಸರ್‌ ಸೇರಿ ಐವರು ಸಿಬ್ಬಂದಿ ವಿರುದ್ಧ ಬಿಎನ್​​ಎಸ್​ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಐಟಿ ಕಂಪನಿಯೊಂದರ ಆವರಣದಲ್ಲಿರುವ ಡೇ ಕೇರ್‌ ಕೇಂದ್ರ

ಕಂಪನಿಗೆ ಕೆಲಸಕ್ಕೆ ಹೋಗುವ ಸಿಬ್ಬಂದಿ ಇಲ್ಲಿ ಮಕ್ಕಳನ್ನು ಬಿಟ್ಟು ಹೋಗುತ್ತಿದ್ದರು

ಮಕ್ಕಳು ಗಲಾಟೆ, ಹಠ ಮಾಡಿದಾಗ ಅಲ್ಲಿನ ಆಯಾಗಳಿಂದ ಮೃಗೀಯ ವರ್ತನೆ

ಮಕ್ಕಳನ್ನು ವಾಷಿಂಗ್‌ ಮಷಿನ್‌ಗೆ ಹಾಕುವುದು, ಶೌಚಾಲಯದಲ್ಲಿ ಕೂಡಿಟ್ಟು ಬೆದರಿಕೆ

ಟಾಯ್ಲೆಟ್ ಜೆಟ್ ಸ್ಪ್ರೇ ​ ನೇರವಾಗಿ ಮಕ್ಕಳ ಬಾಯಿಗೆ ತುರುಕಿ ನೀರು ಬಿಟ್ಟು ವಿಕೃತಿ

ಈ ವಿಕೃತಿಯನ್ನು ಅಲ್ಲಿನ ಸಿಬ್ಬಂದಿ ಮೊಬೈಲಲ್ಲಿ ಸೆರೆ ಹಿಡಿದ ಬಳಿಕ ಪ್ರಕರಣ ಬೆಳಕಿಗೆ

ಆಯಾಗಳ ದೈಹಿಕ ಹಿಂಸೆ ಬಗ್ಗೆ ಪೋಷಕರಿಂದ ಮಕ್ಕಳ ಸಹಾಯವಾಣಿಗೆ ದೂರು

ಈ ಹಿನ್ನೆಲೆಯಲ್ಲಿ ಸೊಸೈಟಿ ಜನರಲ್‌ ಬೇಬಿ ಕೇರ್‌ ಸಂಸ್ಥೆಯ ನಾಲ್ವರ ವಿರುದ್ಧ ಕೇಸ