ಕನ್ನಡಪ್ರಭ ವಾರ್ತೆ ಮಳವಳ್ಳಿ

ಬಿಸಿಯೂಟದಲ್ಲಿ ಆದ ವ್ಯತ್ಯಾಸದಿಂದ ತಾಲೂಕಿನ ರಾವಣಿ ಸರ್ಕಾರಿ ಪ್ರಾಥಮಿಕ ಶಾಲೆಯ 30ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಯಿತು.

ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ವಸ್ತುವೊಂದನ್ನು ಕಂಡಿದ್ದಾಗಿ ಮಗು ಕೂಗಿಕೊಂಡಿದೆ ಎನ್ನಲಾಗಿದೆ. ಇದ್ದರಿಂದ ಇತರೆ ಮಕ್ಕಳು ಸಹ ಆತಂಕಗೊಂಡಿದ್ದಾರೆ. ಕೂಡಲೇ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು 30ಕ್ಕೂ ಹೆಚ್ಚು ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಪರೀಕ್ಷಿಸಿ ಚಿಕಿತ್ಸೆ ಕೊಡಿಸಲಾಯಿತು.

ಮಾಹಿತಿ ತಿಳಿದು ಆಸ್ಪತ್ರೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ಮಕ್ಕಳ ಆರೋಗ್ಯ ವಿಚಾರಿಸಿ ಮಾತನಾಡಿ, ಮಕ್ಕಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್ ಮಾತನಾಡಿ, ಎಲ್ಲ ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಮನೆಗೆ ಕಳುಹಿಸಿ ಕೊಡಲಾಗಿದೆ ಎಂದರು.


ಆಸ್ಪತ್ರೆಗೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದರು.ಶಾಲೆ ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು: ಆಸ್ಪತ್ರೆಗೆ ದಾಖಲು

ಹಲಗೂರು: ಸಮೀಪದ ದಳವಾಯಿ ಕೋಡಿಹಳ್ಳಿಯ ಕೆಜಿವಿಕೆ ಬಾಲಕಿಯರ ವಿದ್ಯಾ ಶಾಲೆ ವಿದ್ಯಾರ್ಥಿಗಳು ಬೆಳಗ್ಗೆ ಉಪಾಹಾರ ಸೇವಿಸಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆ ದಾಖಲಿಸಲಾಗಿದೆ.ಗುರುವಾರ ಬೆಳಗ್ಗೆ ತಿಂಡಿ ಸೇವಿಸಿ ಶಾಲೆಗೆ ತೆರಳಿದ್ದ ಮಕ್ಕಳು ಸಂಜೆ 5:45 ಕ್ಕೆ ಸುಮಾರು 10 ಮಂದಿ ಹೆಣ್ಣುಮಕ್ಕಳು ಹೊಟ್ಟೆ ನೋವು ಮತ್ತು ಕೆಲವು ಮಕ್ಕಳಿಗೆ ಸುಸ್ತು ಕಂಡು ಬಂದಿದೆ. ಶಾಲೆ ಮುಖ್ಯ ಶಿಕ್ಷಕಿ ನಿರ್ಮಲಾ ತಕ್ಷಣ ಮಕ್ಕಳನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ಸೇರಿಸಿದ್ದಾರೆ. ಎಲ್ಲ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು ಕ್ಷೇಮವಾಗಿದ್ದಾರೆ ಎಂದು ತಿಳಿಸಿದ್ದಾರೆ.