ಅರಣ್ಯ ಅನುಮತಿ ಬಾಕಿ ಕೇಸ್‌ ಬಗೆಹರಿಸಿ : ಸಿಎಂ

Published : Jun 30, 2026, 11:50 AM IST
DK Shivakumar

ಸಾರಾಂಶ

ಶರಾವತಿ ಪಂಪ್‌ ಸ್ಟೋರೇಜ್‌ ಯೋಜನೆ ಸೇರಿ ರಾಜ್ಯ ಮತ್ತು ಕೇಂದ್ರ ಅರಣ್ಯ ಇಲಾಖೆಗಳಲ್ಲಿ ಅರಣ್ಯ ಅನುಮತಿ ಬಾಕಿ ಇರುವ ರಾಜ್ಯದ ಎಲ್ಲ ಪ್ರಕರಣಗಳನ್ನು ಜು.15 ರೊಳಗೆ ಇತ್ಯರ್ಥಪಡಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  ಬೆಂಗಳೂರು :  ಶರಾವತಿ ಪಂಪ್‌ ಸ್ಟೋರೇಜ್‌ ಯೋಜನೆ ಸೇರಿ ರಾಜ್ಯ ಮತ್ತು ಕೇಂದ್ರ ಅರಣ್ಯ ಇಲಾಖೆಗಳಲ್ಲಿ ಅರಣ್ಯ ಅನುಮತಿ ಬಾಕಿ ಇರುವ ರಾಜ್ಯದ ಎಲ್ಲ ಪ್ರಕರಣಗಳನ್ನು ಜು.15 ರೊಳಗೆ ಇತ್ಯರ್ಥಪಡಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಅರಣ್ಯ, ಪರಿಸರ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಶರಾವತಿ ಪಂಪ್ ಸ್ಟೋರೇಜ್‌, ಗೋವಾ ತಮ್ನೇರ್‌, ಕಳಸಾ ಬಂಡೂರಿ ಮತ್ತು ಬಿಡಿಎ ಫೆರಿಫೆರಲ್‌ ರಿಂಗ್‌ ರಸ್ತೆ ಸೇರಿ ರಾಜ್ಯದ ಹಲವು ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಅರಣ್ಯ ಇಲಾಖೆಗಳ ವಿವಿಧ ಹಂತಗಳಲ್ಲಿ ಅರಣ್ಯ ಅನುಮತಿ ಬಾಕಿ ಇದೆ. ಅವುಗಳಿಗೆ ಜು.15ರೊಳಗೆ ತ್ವರಿತ ಗತಿಯಲ್ಲಿ ಅನುಮತಿ ಪಡೆಯಲು ಕ್ರಮ ವಹಿಸಬೇಕು ಎಂದು ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್ ಅವರಿಗೆ ಸೂಚಿಸಿದರು.

ಅರಣ್ಯ ಭೂಮಿ ಒತ್ತುವರಿ ತೆರವು, ಮಾನವ-ವನ್ಯಜೀವಿ ಸಂಘರ್ಷ ತಡೆ ಹಾಗೂ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ಕ್ರಮಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ ಅವರು, ಅರಣ್ಯ ಪ್ರಾಣಿ ಸಂಪತ್ತು ಅಮೂಲ್ಯವಾದದ್ದು. ಅವುಗಳ ಸಂರಕ್ಷಣೆ ಪರಿಣಾಮಕಾರಿಯಾಗಿ ಆಗಬೇಕು. ನೆಡುತೋಪು ನಿರ್ಮಾಣ ಹಾಗೂ ಸಾರ್ವಜನಿಕರಿಗೆ ಸಸಿ ವಿತರಣೆ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆ, ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು. ಆ ಜನರ ಅರಣ್ಯ ಹಕ್ಕುಗಳನ್ನು ಯಾದೇವು ಕಾರಣಕ್ಕೂ ಕಡೆಗಣಿಸಬಾರದು. ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟು ಅವರಿಗೆ ತೊಂದರೆ ನೀಡಬಾರದು. ನಿಯಮಾನುಸಾರ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಸೂಚಿಸಿದರು.

ಇದೇ ವೇಳೆ ಎರಡೂ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಸಮಗ್ರ ಮಾಹಿತಿ ಪಡೆದ ಮುಖ್ಯಮಂತ್ರಿ ಅವರು, ಅಗತ್ಯ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಿದರು.

ವನ್ಯಜೀವಿ ತಡೆಯಲು ಹೊಸ ಮಾರ್ಗ ಅಧ್ಯಯನ ಮಾಡಿ:

ವನ್ಯ ಜೀವಿಗಳು ಕಾಡು ದಾಟಿ ನಾಡಿಗೆ ಬರುವುದನ್ನು ತಡೆಯಲು ಹೊಸ ಮಾರ್ಗೋಪಾಯಗಳ ಬಗ್ಗೆ ಅಧ್ಯಯನ ಮಾಡುವಂತೆ ಇದೇ ವೇಳೆ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಾನವ, ಅರಣ್ಯಜೀವಿ ಸಂಘರ್ಷ ತಪ್ಪಿಸಲು ರೇಲ್ವೇ ಬ್ಯಾರಿಕೇಡ್‌, ಆನೆತಡೆ ಕಂದಕ ಮತ್ತು ಸೌರತಂತಿ ಬೇಲಿಗಳನ್ನು ಅಳವಡಿಸಲಾಗುತ್ತಿರುವ ಬಗ್ಗೆ ಹಾಗೂ ಆನೆ ಕಾರ್ಯಪಡೆ, ಚಿರತೆ ಕಾರ್ಯಪಡೆ ಹಾಗೂ ಎಸ್‌ಎಂಎಸ್‌ ಮತ್ತು ಇತರೆ ಡಿಜಿಟಲ್‌ ಬೋರ್ಡ್‌ಗಳ ಮೂಲಕ ಅರಿವು ಮೂಡಿಸುತ್ತಿರುವ ಕುರಿತು ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳು, ಇಷ್ಟೆಲ್ಲಾ ಕ್ರಮಗಳ ನಡುವೆಯೂ 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ವನ್ಯ ಪ್ರಾಣಿಗಳಿಂದ ಆಗಿರುವ ಜನ, ಜಾನುವಾರುಗಳ ಜೀವಹಾನಿ, ಶಾಶ್ವತ ಅಂಗವಿಕಲತೆ, ಭಾಗಶಃ ಅಂಗವಿಕಲತೆ, ಮಾನವ ಗಾಯ, ಬೆಳೆ, ಆಸ್ತಿನಾಶಕ್ಕೆ ಒಟ್ಟು 63.06 ಕೋಟಿ ರು. ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪ್ರಾಣಿಗಳೂ ಸಹ ಈ ಎಲ್ಲಾ ಅಡೆತಡೆಗಳನ್ನು ದಾಟಲು ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತವೆ. ಹೀಗಾಗಿ ಅಧಿಕಾರಿಗಳು ಕೂಡ ಆಗಾಗ ಇತರೆ ಹೊಸ ಮಾರ್ಗೋಪಾಯಗಳ ಬಗ್ಗೆ ಅಧ್ಯಯನ ನಡೆಸಬೇಕು ಎಂದರು. ಇದೇ ವೇಳೆ, ಪ್ರಾಣಿ ಸಂಪತ್ತಿನ ಮೇಲೆ ನಿಗಾ ಇಡಲು ಥರ್ಮಲ್‌ ಡ್ರೋನ್‌ ವ್ಯವಸ್ಥೆ ಕುರಿತು ಚರ್ಚಿಸಲಾಯಿತು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ರಿತೇಶ್ ಕುಮಾರ್ ಸಿಂಗ್, ಅಂಜುಮ್ ಪರ್ವೇಜ್, ಕರ್ನಾಟಕ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಸಿಎಂ ಆರ್ಥಿಕ ಸಲಹೆಗಾರ ಎಲ್‌.ಕೆ ಅತೀಕ್ ಉಪಸ್ಥಿತರಿದ್ದರು.

ಸರ್ಕಾರದ ಜಾಗ ಪಡೆದು ಕೆಲಸ ಶುರು ಆಗದಿದ್ರೆ ಕ್ರಮ:

ಗಣಿಗಾರಿಕೆ ಸೇರಿ ನಾನಾ ಚಟುವಟಿಕೆಗಳಿಗೆ ಸರ್ಕಾರಿ ಜಾಗ ಪಡೆದು ವರ್ಷಗಳ ಕಾಲ ಚಟುವಟಿಕೆ ಆರಂಭಿಸದಿದ್ದರೆ ಆ ಭೂಮಿ ಸರ್ಕಾರಕ್ಕೆ ವಾಪಸ್‌ ಪಡೆಯಲು ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಹೋರಿ ಓಡಿಸುವಾಗ ಮಸೀದಿ ಬಳಿ ಪಟಾಕಿ ಸಿಡಿಸಿದ ಕಾರಣಕ್ಕೆ ರೈತರ ಕೈಯನ್ನೇ ಕಡಿದರು!
ನೀವು ಕೈಹಿಡಿದ್ರೆ ನಾವು ಕೈಬಿಡಲ್ಲ : ವಿದ್ಯುತ್‌ ನಿಗಮ ಸಿಬ್ಬಂದಿಗೆ ಡಿಕೆ