;Resize=(412,232))
ಬೆಂಗಳೂರು : ವಿದ್ಯುತ್ ವಿತರಣೆ ಖಾಸಗೀಕರಣ ಬೇಡ ಎಂಬ ವಿದ್ಯುತ್ ಪ್ರಸರಣ ನಿಗಮದ ನೌಕರರ ಬೇಡಿಕೆಗೆ ಸರ್ಕಾರ ಆದ್ಯತೆ ನೀಡಲಿದ್ದು, ವಿದ್ಯುತ್ ನಿಗಮಗಳನ್ನು ಟಾಟಾ ಕಂಪೆನಿಗೆ ವಹಿಸುವ ಪ್ರಸ್ತಾಪ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್ ಒಕ್ಕೂಟದವರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
2003ರಲ್ಲಿ ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡುವುದರ ಪರವಾಗಿ ಬಿಜೆಪಿ ಸರ್ಕಾರ ತಿರ್ಮಾನ ಕೈಗೊಂಡಿತ್ತು. ಆದರೆ, ಆಗ ವಿದ್ಯುತ್ ಇಲಾಖೆ ನೌಕರರು, ಅಧಿಕಾರಿಗಳು, ಸಂಘದ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿರಲಿಲ್ಲ. ಈಗ ನನ್ನ ಮತ್ತು ಸಚಿವ ಜಾರ್ಜ್ ಅವರ ಬಳಿಗೆ ಬಂದು ಖಾಸಗೀಕರಣ ಬೇಡ ಎಂದು ಹೇಳುತ್ತಿದ್ದೀರಿ. ನೂರಾರು ವರ್ಷಗಳಿಂದ ವಿದ್ಯುತ್ ಲೈನ್ ಎಳೆದವರು ನೀವು, ಬೆಂಬಲ ಕೊಟ್ಟಿದ್ದು ಸರ್ಕಾರ. ಈಗ ಖಾಸಗಿ ಕಂಪನಿಯವರು ದುಡ್ಡು ಮಾಡಲು, ಸಂಪರ್ಕ ನೀಡುವ ಅಧಿಕಾರ ಅವರಿಗೆ ನೀಡಬೇಕಂತೆ ಎಂದು ಹೇಳಿದರು.
ಇದೇ ವೇಳೆ ಸಭಿಕರು ತಮ್ಮ ಹೆಸರು ಕೂಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನೀವು ಡಿಕೆ, ಡಿಕೆ ಎಂದು ಕೂಗಿದಾಕ್ಷಣ ನಾನು ಹಿಗ್ಗುವುದಿಲ್ಲ, ಜಗ್ಗುವುದಿಲ್ಲ. ನಮ್ಮದು ಏನಿದ್ದರೂ ಗೀವ್ ಆ್ಯಂಡ್ ಟೇಕ್ (ಕೊಡು, ಕೊಳ್ಳುವ), ಶೇರಿಂಗ್ ಆ್ಯಂಡ್ ಕೇರಿಂಗ್ ಪದ್ಧತಿ. ನೀವು ನಮಗೆ ಕಾಳಜಿ ತೋರಬೇಕು, ನಾವು ನಿಮಗೆ ಕಾಳಜಿ ತೋರಬೇಕು. ಈ ಒಪ್ಪಂದಕ್ಕೆ ನೀವು ಬದ್ಧರಾಗಿರುತ್ತೀರಾ? 2028ರಲ್ಲಿ ನಿಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ನುಡಿದಂತೆ ನಡೆಯಬೇಕು, ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದರು.
ಈಗಾಗಲೇ ಸಚಿವರಾದ ಜಾರ್ಜ್, ಎಲ್ಲಾ ಎಸ್ಕಾಂ ಅಧ್ಯಕ್ಷರು ಡಿ.ಕೆ.ಶಿವಕುಮಾರ್ ಕಾಲದಲ್ಲಿ ಯಾವುದೇ ಕಾರಣಕ್ಕೂ ಖಾಸಗೀಕರಣ ಆಗಬಾರದು ಎಂದು ಹೇಳಿದ್ದಾರೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ನೀವು ಮೋಸ ಮಾಡಿದರೆ ನಾನು ವಾಜಪೇಯಿ ಅವರ ಸರ್ಕಾರದ ತೀರ್ಮಾನದ ಕಡೆಗೆ ಮುಖ ಮಾಡುತ್ತೇನೆ ಎಂದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯದ ಜನರಿಗೆ ವಿದ್ಯುತ್ ಪೂರೈಸಲು ಇಂಧನ ಇಲಾಖೆ ಬಲಿಷ್ಠವಾಗಿದ್ದು, ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ. ಖಾಸಗೀಕರಣ ವಿಚಾರಕ್ಕೆ ಸಂಬಂಧಿಸಿ ಸೂಕ್ತ ನಿರ್ದೇಶನ ನೀಡಲಾಗಿದ್ದು, ಅದರಂತೆ ಎಸ್ಕಾಂಗಳು ಕೆಇಆರ್‌ಸಿ ಮುಂದೆ ಆಕ್ಷೇಪಣೆ ಸಲ್ಲಿಸಿವೆ. ನಾವು ಯಾವುದೇ ಖಾಸಗಿ ಕಂಪನಿಗೆ ಕಡಿಮೆ ಇಲ್ಲ. ನೌಕರರು ಮತ್ತು ಅಧಿಕಾರಿಗಳ ಬೇಡಿಕೆಗಳಿಗೆ ಸ್ಪಂದಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಇಂಧನ ಇಲಾಖೆ ಈಗಾಗಲೇ ದೂರದೃಷ್ಟಿಯ ಯೋಜನೆಗಳನ್ನು ಸಿದ್ಧಪಡಿಸಿದೆ, ಮುಂದಿನ 25 ವರ್ಷಗಳ ಅವಧಿಗೆ ವಿದ್ಯುತ್ ಭ್ರದತೆ ಒದಗಿಸಲು ಯೋಜನೆ ಸಿದ್ಧವಾಗಿದೆ. ರೈತರ ಜತೆಗೆ 10 ಸಾವಿರ ಎಕರೆಯಲ್ಲಿ ಸೌರ ಪಾರ್ಕ್ ಮಾಡಿದ್ದೇವೆ. ರೈತರು ಇನ್ನೂ 10 ಸಾವಿರ ಎಕರೆ ಕೊಡಲು ಮುಂದೆ ಬಂದಿದ್ದಾರೆ. ವಿದ್ಯುತ್ ಉತ್ಪಾದನೆ ಅತ್ಯುತ್ತಮವಾಗಿದೆ. ಪೀಕ್ ಅವರ್ ವಿದ್ಯುತ್ ಮಾರಾಟ ಹೆಚ್ಚಿಸಿರುವುದರಿಂದ ಇಲಾಖೆಗೆ ಲಾಭವಾಗಿದೆ. ವಿನಿಮಯದ ಆಧಾರದ ಮೇಲೆ ವಿದ್ಯುತ್ ಪಡೆಯುವುದು ಮತ್ತು ದೀರ್ಘಾವಧಿ ಒಪ್ಪಂದಗಳ ಮೂಲಕ ವಿದ್ಯುತ್ ಖರೀದಿ ಮೂಲಕ ಇಂಧನ ಭದ್ರತೆಗೆ ಕ್ರಮ ವಹಿಸಲಾಗಿದೆ ಎಂದರು
ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಅಧ್ಯಕ್ಷ ಕೆ.ಬಲರಾಮ್, ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಸಿ.ಬಸವಣ್ಣ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಬೆಸ್ಕಾಂ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಕಲಬುರ್ಗಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಸೇರಿ ಮತ್ತಿತರರು ಇದ್ದರು.
- ರಾಜ್ಯದ ಆಯ್ದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆ ವಹಿಸಿಕೊಳ್ಳಲು ಟಾಟಾ ಪವರ್ ಪ್ರಸ್ತಾಪ
- ಆದರೆ ಈ ಪ್ರಸ್ತಾಪಕ್ಕೆ ಬೆಸ್ಕಾಂ ಮತ್ತು ವಿದ್ಯುತ್ ಪ್ರಸರಣ ನಿಗಮದ ಸಿಬ್ಬಂದಿಗಳ ಆಕ್ಷೇಪ
- ಖಾಸಗಿ ಕಂಪನಿಗಳಿಗೆ ಇಂಥ ಅವಕಾಶ ನೀಡಿದರೆ ಇಡೀ ವ್ಯವಸ್ಥೆಗೆ ಧಕ್ಕೆ ಎಂದು ಆರೋಪ
- ಸಿಬ್ಬಂದಿಗಳ ಆಕ್ಷೇಪಕ್ಕೆ ಸ್ವತಃ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಂದಲೂ ಬೆಂಬಲ
- ಈ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ಸಿಎಂ ಭರವಸೆ