;Resize=(412,232))
ಬೆಂಗಳೂರು : ಮಾರುಕಟ್ಟೆಯಲ್ಲಿ ಕೇವಲ 15 ದಿನಗಳ ಹಿಂದಷ್ಟೇ ಅಕ್ಕಿ ಬೆಲೆಯಲ್ಲಿ ₹6 ಏರಿಕೆಯಾಗಿತ್ತು. ಇದೀಗ ಮತ್ತೆ ವಿವಿಧ ತಳಿಯ ಅಕ್ಕಿ ಬೆಲೆಯಲ್ಲಿ ₹5 ಜಿಗಿತ ಕಂಡಿದೆ. ಈ ಮೂಲಕ ಒಂದೇ ತಿಂಗಳ ಅವಧಿಯಲ್ಲಿ ಕೆ.ಜಿ. ಅಕ್ಕಿ ದರದಲ್ಲಿ ಬರೋಬ್ಬರಿ ₹11-13 ಹೆಚ್ಚಳವಾದಂತಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ.
ಅಕ್ಕಿ ರಫ್ತು ನೀತಿಯಲ್ಲಿ ಆಗಿರುವ ಬದಲಾವಣೆಗಳು ದೇಶೀಯ ಮಾರುಕಟ್ಟೆ ಮೇಲೆ ಪ್ರಭಾವ ಬೀರಿವೆ. ಇಂಧನ ಹಾಗೂ ತೈಲ ದರಗಳು ನಿರಂತರವಾಗಿ ಏರಿಕೆ ಆಗುತ್ತಿವೆ. ಇದರಿಂದ ಸರಕು ಸಾಗಣೆ ವೆಚ್ಚ ದುಬಾರಿ ಆಗಿದೆ. ಮಾರುಕಟ್ಟೆಗೆ ಬರುತ್ತಿರುವ ಅಕ್ಕಿ ಪ್ರಮಾಣದಲ್ಲಿ ವ್ಯತ್ಯಾಸ ಆಗಿರುವುದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ಮಾರುಕಟ್ಟೆ ತಜ್ಞರು ಮತ್ತು ಸಗಟು ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಚಿಲ್ಲರೆ ಮಾರುಕಟ್ಟೆ ಮತ್ತು ಸಗಟು ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗಿದೆ. ಸೋನಾ ಮಸೂರಿ, ಸ್ಟೀಮ್ ಅಕ್ಕಿ, ಕೋಲಂ ಮತ್ತು ರಾ ರೈಸ್ ಸೇರಿ ಎಲ್ಲ ಮಾದರಿಯ ಅಕ್ಕಿಯ ಬೆಲೆ ಕೆ.ಜಿ.ಗೆ ₹4 ರಿಂದ ₹5 ಹೆಚ್ಚಳವಾಗಿದೆ. ಕಳೆದ 15 ದಿನಗಳ ಹಿಂದೆಯೇ ಅಕ್ಕಿ ದರ ಏರಿಕೆಯಾಗಿತ್ತು. ಪ್ರತಿ 26 ಕೇಜಿ ಅಕ್ಕಿ ಮೂಟೆ ಬೆಲೆ ಕನಿಷ್ಠ ₹155- 160 ಹೆಚ್ಚಳವಾಗಿದೆ.
ಪ್ರತಿ ಬೇಸಿಗೆಯಲ್ಲಿ ಅಕ್ಕಿ ದರ ಕೆ.ಜಿ.ಗೆ ₹1 ರಿಂದ ₹2 ಜಾಸ್ತಿ ಆಗುತ್ತಿತ್ತು. ಆದರೆ ಈ ಬಾರಿ ಮಧ್ಯಪ್ರಾಚ್ಯದ ಸಂಘರ್ಷ ಮತ್ತು ಕೇಂದ್ರ ಸರ್ಕಾರದ ರಫ್ತು ನೀತಿಯಿಂದಾಗಿ ಅಕ್ಕಿಯ ಬೆಲೆಯೂ ಹೆಚ್ಚಾಗುತ್ತಿದೆ. ಸೋನಾ ಸ್ಟೀಮ್ ರೈಸ್ ₹48 ನಿಂದ ₹53ಕ್ಕೆ ಹಾಗೂ ಸೋನಾ ರಾ ರೈಸ್ ₹55 ನಿಂದ ₹61ಕ್ಕೆ ಏರಿಕೆಯಾಗಿದೆ. ಸ್ಥಳೀಯವಾಗಿ ದಾಸ್ತಾನು ಕೊರತೆಯಿಂದಾಗಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಬೆಲೆ ಸ್ವಲ್ಪ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
- ಇದೀಗ ಮತ್ತೆ 5 ರು. ದರ ಹೆಚ್ಚಿಸಿದ ವ್ಯಾಪಾರಿಗಳು. ತಿಂಗಳಲ್ಲಿ 11-13 ರು.ವರೆಗೆ ಏರಿಕೆ
- ತೈಲ ದರ ನಿರಂತರ ಏರಿಕೆಯಿಂದಾಗಿ ಸಾಗಣೆ ವೆಚ್ಚ ಹೆಚ್ಚಳ. ಅದು ಗ್ರಾಹಕರಿಗೆ ವರ್ಗ
- ಜತೆಗೆ ಅಕ್ಕಿ ರಫ್ತು ನೀತಿಯಲ್ಲಿ ಬದಲಾವಣೆ ಹಾಗೂ ಮಧ್ಯಪ್ರಾಚ್ಯ ಯುದ್ಧದಿಂದಲೂ ಹೊಡೆತ
- ಸೋನಾ ಮಸೂರಿ, ಸ್ಟೀಮ್ ಅಕ್ಕಿ, ಕೋಲಂ, ರಾ ರೈಸ್ ಎಲ್ಲವುಗಳ ಬೆಲೆಯೂ ಹೆಚ್ಚಳ