ಸಾಂಸ್ಕೃತಿಕ ನಾಯಕ‌ ಬಸವಣ್ಣನವರ ಬಗ್ಗೆ ಅವಹೇಳನಕರವಾಗಿ ಮಾತನಾಡಿರುವ ಲೇಖಕ ರವಿ ಹಂಜ್ ವಿರುದ್ಧದ ಆಕ್ರೋಶ ಮುಂದುವರಿದಿದ್ದು, ಪಕ್ಷಾತೀತವಾಗಿ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರು : ಸಾಂಸ್ಕೃತಿಕ ನಾಯಕ‌ ಬಸವಣ್ಣನವರ ಬಗ್ಗೆ ಅವಹೇಳನಕರವಾಗಿ ಮಾತನಾಡಿರುವ ಲೇಖಕ ರವಿ ಹಂಜ್ ವಿರುದ್ಧದ ಆಕ್ರೋಶ ಮುಂದುವರಿದಿದ್ದು, ಪಕ್ಷಾತೀತವಾಗಿ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದೇ ವೇಳೆ, ಅವರ ಬಂಧನಕ್ಕೆ ಆಗ್ರಹಿಸಿ ಭಾನುವಾರವೂ ರಾಜ್ಯದ ಕೆಲವೆಡೆ ಪ್ರತಿಭಟನೆಗಳು ನಡೆದವು.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ‘ಬಸವ ಮಂಟಪ’ ಕೃತಿಯಲ್ಲಿ ಲೇಖಕರು ತಮ್ಮ ವಿಕಾರ ಮನಸ್ಸನ್ನು ಕಕ್ಕಿಕೊಂಡಿದ್ದಾರೆ. ಕೃತಿಯುದ್ದಕ್ಕೂ ಲಿಂಗಾಯತ ಧರ್ಮದ ಅವಹೇಳನ ಮಾಡಲಾಗಿದೆ. ಇದು ಖಂಡನೀಯವಾಗಿದ್ದು, ಲೇಖಕ, ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕೃತಿಯನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರವಿ ಹಂಜ್‌ ಅವರು ಅಮೆರಿಕದಿಂದ ಬಂದು ಸಮಾಜದ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳ್ಳಾರಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ಎಲ್ಲಾ ಸಮುದಾಯದವರು ಒಟ್ಟಾಗಿ ರವಿ ಹಂಜ್‌ ವಿರುದ್ಧ ಹೋರಾಡಬೇಕು ಎಂದು ಒತ್ತಾಯಿಸಿದರು.

ಹಂಜ್‌ ವಿರುದ್ಧ ಪ್ರತಿಭಟನೆ:

ಈ ಮಧ್ಯೆ, ರವಿ ಹಂಜ್‌ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದಾವಣಗೆರೆ ಜಿಲ್ಲೆ ಚನ್ನಗಿರಿಯ ಗಾಂಧಿ ವೃತ್ತದಲ್ಲಿ ಖಡ್ಗ ಸಂಘಟನೆಯಿಂದ ಭಾನುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಾಂಡೋಮಟ್ಟಿ ವಿರಕ್ತ ಮಠದ ಶ್ರೀಗಳು ಮಾತನಾಡಿ, ಬಸವಣ್ಣನವರ ಬಗ್ಗೆ ಅವಹೇಳನ ಸರಿಯಲ್ಲ. ಅಂತಹ ಮಹಾನ್‌ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಿರುವ ಲೇಖಕ ರವಿ ಹಂಜ್‌ಗೆ ಕಠಿಣ ಕಾನೂನು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಕಲಬುರಗಿಯ ಜಗತ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಸವ ತತ್ವ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿಯ ಮುಖಂಡರು, ರವಿ ಹಂಜ್‌ ಅವರ ಪೋಸ್ಟರ್‌ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.ಇದೇ ವೇಳೆ, ಬೀದರ್‌, ರಾಯಚೂರಿನಲ್ಲೂ ಪ್ರತಿಭಟನೆಗಳು ನಡೆದವು.

ಹಂಜ್‌ ವಿರುದ್ಧ ದೂರು:

ಇದೇ ವೇಳೆ, ರವಿ ಹಂಜ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಕಲಬುರಗಿ ಜಿಲ್ಲೆ ಕಮಲಾಪುರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.