ಬಾಗಲಕೋಟೆ: ಬಸವೇಶ್ವರರಿಗೆ ಅವಮಾನ ಮಾಡಿದ ರವಿ ಹಂಜ್‌ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ಬುದ್ಧ, ಬಸವ, ಅಂಬೇಡ್ಕರ್ ಜಾಗೃತ ವೇದಿಕೆ ವತಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಕಚೇರಿಯ ಮುಂದೆ ಎಲ್ಲ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಬಸವಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಸವೇಶ್ವರರಿಗೆ ಅವಮಾನ ಮಾಡಿದ ರವಿ ಹಂಜ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ಬುದ್ಧ, ಬಸವ, ಅಂಬೇಡ್ಕರ್ ಜಾಗೃತ ವೇದಿಕೆ ವತಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಕಚೇರಿಯ ಮುಂದೆ ಎಲ್ಲ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಬಸವಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಸಂಘಟನೆಯ ಸಂಚಾಲಕರಾದ ಅರವಿಂದ ಮುಚಖಂಡಿ ಹಾಗೂ ಅರವಿಂದ ನಾವಲಗಿ ಮಾತನಾಡಿ, 12ನೇ ಶತಮಾನದಲ್ಲಿ ಎಲ್ಲ ಜಾತಿಗಳ ಜನರನ್ನು ಮೇಲುಕೀಳು ಎನ್ನದೆ ಒಗ್ಗೂಡಿಸಿ ಸಮಸಮಾಜ ನಿರ್ಮಿಸಿದ ಮಹಾನ್ ದಾರ್ಶನಿಕ ವಿಶ್ವಗುರು ಬಸವೇಶ್ವರರನ್ನು ಕಳ್ಳ, ಕೊಲೆಗಡಕ ಅಂತ ಹೇಳಿ ಬಸವೇಶ್ವರರ ಅವಮಾನಿಸಿದ ಲೇಖಕನ ವಿರುದ್ಧ ಕ್ರಮ ಆಗಲೇಬೇಕು ಎಂದರು.

ಲಿಂಗಾಯತ ಹಡಪದ ಸಮಾಜದ ಜಿಲ್ಲಾಧ್ಯಕ್ಷ ನಾಗಪ್ಪ ಹಡಪದ ಮಾತನಾಡಿ, ಎಲ್ಲ ಜಾತಿಯ ಜನರನ್ನ ಶರಣರನ್ನಾಗಿ ಮಾಡಿ, ಹಿರಿಯರು ಕಿರಿಯರು ಎನ್ನದೆ ಶರಣು ಶರಣಾರ್ಥಿ ಎಂದು ತಲೆಬಾಗಿದ ಮಹಾನ್ ದಾರ್ಶನಿಕ ಬಸವಣ್ಣವರನ್ನು ಅವಮಾನಿಸಿದ್ದನ್ನು ಉಗ್ರವಾಗಿ ಖಂಡಿಸಿದರು.

ಭೋವಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಪುರುಶುರಾಮ ಪಾತ್ರೋಟಿ ಮಾತನಾಡಿ, ಇವರ ಹೇಳಿಕೆಗೆ ನಮಗೆ ಅಪಾರ ನೋವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಂಚಮಸಾಲಿ ಸಮಾಜದ ಹಿರಿಯರಾದ ಗುರುಬಸವ ಸಿಂಧೂರ ಮಾತನಾಡಿ, ಲಿಂಗಾಯಿತರಲ್ಲಿ ಸಂಸ್ಕಾರದ ಕೂರತೆ ಹಾಗೂ ಎಲ್ಲ ಸಮಾಜದ ಜನರನ್ನು ಒಗ್ಗೂಡಿಸಿ ಕಾರ್ಯ ಮಾಡುವ ಮನೋಭಾವ ಕಡಿಮೆಯಾಗಿರುವುದರಿಂದ ಇಂತಹ ವ್ಯಕ್ತಿಗಳು ದಾರ್ಶನಿಕರು ಮತ್ತು ಸಿದ್ಧಾಂತಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು

ಫ ಗು. ಹಳಕಟ್ಟಿ ಪ್ರತಿಷ್ಠಾನ ಕಾರ್ಯದರ್ಶಿ ಬಸವರಾಜ ತಿಪ್ಪಶೆಟ್ಟಿ ಮಾತನಾಡಿ, ಲೇಖಕರ ನಡೆ ಮತ್ತು ನುಡಿ ಸಮಾಜಕ್ಕೆ ಮಾದರಿಯಾಗಬೇಕೆಂದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದಲ್ಲಿ ನಡೆಯುತ್ತಿದ್ದ ಈ ವಾದ ಪ್ರತಿವಾದವನ್ನು ಸರ್ಕಾರ ಮುನ್ನೆಚ್ಚರಿಕೆಯಾಗಿ ಸೂಕ್ತ ಕ್ರಮ ತೆಗೆದುಕೊಂಡಿದ್ದರೆ ಈ ಕೃತ್ಯ ತಡೆಯಬಹುದಿತ್ತು ಅಂತ ಹೇಳಿ ರವಿ ಹಂಜ ವಿರುದ್ಧ ದಿಟ್ಟ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದರು.

ಮಹಿಳಾ ಸದಸ್ಯರಾದಂತ ಜ್ಯೋತಿ ಕುಮಟಗಿ ಶಿವಲೀಲಾ ಪಟ್ಟಣಶೆಟ್ಟಿ ಮಾತನಾಡಿ, ಸ್ತ್ರೀಯರಿಗೆ ಸಮಾನತೆ ಕೊಟ್ಟ ಬಸವಣ್ಣವರ ಅಪಮಾನ ಮಾಡಿದ್ದು ನಮ್ಮ ಮಹಿಳಾ ಕುಲಕ್ಕೆ ಅಪಾರ ನೊವುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಲಿಂಗಾಯತ ಹಡಪದ ಸಮಾಜದ ಕಾರ್ಯದರ್ಶಿ ಹನುಮಂತ ಹೊಲ್ದುರ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಸುಳಿಕೇರಿ, ಬಣಗಾರ ಸಮಾಜದ ಉಪಾಧ್ಯಕ್ಷ ಈರಣ್ಣ ಬಣಗಾರ, ಬಣಜಿಗ ಸಮಾಜದ ಅಧ್ಯಕ್ಷ ವೀರಭದ್ರಪ್ಪ ಅಂಗಡಿ, ಉಪಾಧ್ಯಕ್ಷ ಪ್ರಭು ವೈಜಾಪುರ, ಬಸವದಳ ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿ, ಕಾರ್ಯದರ್ಶಿ ಚಂದ್ರಕಾಂತ ಲುಕ, ಬಣಜಿಗ ಸಮಾಜದ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ವಿನಯಕುಮಾರ ನಾವಲಗಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಲಮಾಣಿ, ಭೋವಿ ಸಮಾಜದ ಮಹಿಳಾ ಸದಸ್ಯೆ ಚನ್ನಮ್ಮ ವಡ್ಡರ, ಭಾರತೀಯ ಮಾನವ ಹಕ್ಕುಗಳು ಅಪರಾಧ ನಿರೋಧ ಹಾಗೂ ಭ್ರಷ್ಟಾಚಾರ ವಿರೋಧಿ ಒಕ್ಕೂಟದ ರಾಜ್ಯ ಕಾರ್ಯಧ್ಯಕ್ಷ ಭೀಮಪ್ಪ ಪೂಜಾರ, ವಚನ ಅಧ್ಯಯನ ವೇದಿಕೆ ಹಾಗೂ ಸಂಶೋಧನಾ ಕೇಂದ್ರದ ಸಲಾ ಸಮಿತಿ ಸದಸ್ಯರಾದ ಜೆ.ಕೆ. ನಾಶಿ, ರಾಷ್ಟ್ರೀಯ ಬಸವದಳ ಸದಸ್ಯರಾದ ರಶ್ಮಿ ನಾಯಕ, ಗೌರಮ್ಮ ಪೂಜಾರಿ, ವಿದ್ಯಾ ಹೊಗಿರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಯಕನಿಷ್ಠೆ ಬೆಳೆಸಿ ಗಳಿಸಿದ ಸಂಪತ್ತನ್ನು ಸಮಾಜಕ್ಕೆ ದಾಸೋಹದ ಮೂಲಕ ಹಂಚಿ ಕೂಡಿ ಬಾಳುವ ಉದಾತ್ತ ಮೌಲ್ಯ ನೀಡಿದ ಮತ್ತು ಅನುಭವ ಮಂಟಪ ಸ್ಥಾಪಿಸಿ ಜಗತ್ತಿಗೆ ಮೊತ್ತ ಮೊದಲ ಸಂಸತ್ತನ್ನು ನೀಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ನೀಡಿದ ಮಹಾನುಭಾವ ಬಸವೇಶ್ವರವರು ಬಿಜ್ಜಳನ ಖಜಾನೆ ದುರುಪಯೋಗಪಡಿಸಿಕೊಂಡ ಹಾಗೂ ಬಿಜ್ಜಳನ ಕೊಲೆ ಮಾಡಿದರು ಅಂತ ಹೇಳುವುದು ವ್ಯವಸ್ಥಿತವಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ, ಧಾರ್ಮಿಕ, ಐತಿಹಾಸಿಕ ಮೌಲ್ಯಗಳನ್ನು ಬುಡಮೇಲು ಮಾಡುವ ಸ್ಪಷ್ಟ ಕುತಂತ್ರವಾಗಿದೆ.

-ಅರವಿಂದ ಮುಚಖಂಡಿ, ಅರವಿಂದ ನಾವಲಗಿ ಬಸವಪರ ಸಂಘಟನೆ ಸಂಚಾಲಕ