ದುಬಾರಿ ಬೆಲೆಯ ಎರಡು ಇಂಜೆಕ್ಷನ್ಗಳನ್ನು ಖರೀದಿಸಿದರೆ ಔಷಧ ಕಂಪನಿಗಳು ನೀಡುತ್ತಿದ್ದ ಒಂದು ಉಚಿತ ಇಂಜೆಕ್ಷನ್ ಅನ್ನು ಗ್ರಾಹಕರಿಗೆ ವಂಚಿಸಿ ಹೆಚ್ಚಿನ ಬೆಲೆಗೆ ನಕಲಿ ಔಷಧ ಮಾರಾಟ ಜಾಲ ದಂಧೆಕೋರರು ಮಾರಾಟ ಮಾಡಿದ್ದರು
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ದುಬಾರಿ ಬೆಲೆಯ ಎರಡು ಇಂಜೆಕ್ಷನ್ಗಳನ್ನು ಖರೀದಿಸಿದರೆ ಔಷಧ ಕಂಪನಿಗಳು ನೀಡುತ್ತಿದ್ದ ಒಂದು ಉಚಿತ ಇಂಜೆಕ್ಷನ್ ಅನ್ನು ಗ್ರಾಹಕರಿಗೆ ವಂಚಿಸಿ ಹೆಚ್ಚಿನ ಬೆಲೆಗೆ ನಕಲಿ ಔಷಧ ಮಾರಾಟ ಜಾಲ ದಂಧೆಕೋರರು ಮಾರಾಟ ಮಾಡಿದ್ದರು ಎಂಬ ಸಂಗತಿ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯಿಂದ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬಿಡದಿ ಸಮೀಪ ಬೆಳಕಿಗೆ ಬಂದಿದ್ದ ನಕಲಿ ಔಷಧ ಮಾರಾಟ ದಂಧೆಯ ಕಿಂಗ್ಪಿನ್ ಪ್ರಶಾಂತ್ ಬಾಬುನ ವ್ಯವಹಾರಗಳನ್ನು ಶೋಧಿಸಿದಾಗ ಆತನ ಮತ್ತೊಂದು ಭಾನಗಡಿ ಬಯಲಾಗಿದೆ. ಈ ದಂಧೆಯಲ್ಲಿ ರೋಗಿಗಳಿಗೆ ಆತ ಅಸಲಿ ಔಷಧ ಮಾರಾಟ ಮಾಡಿದ್ದಾನೆ. ಆದರೆ ಕಂಪನಿಯ ‘ಉಚಿತ ಕೊಡುಗೆ’ಯನ್ನು ಹಣಕ್ಕೆ ಮಾರಿ ರೋಗಿಗಳಿಗೆ ವಂಚಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಕರ್ನಾಟಕ ಸೇರಿ ದಕ್ಷಿಣ ಭಾರತದ ಆರು ರಾಜ್ಯಗಳಿಗೆ ಪ್ರಶಾಂತ್ ಬಾಬು ಹಾಗೂ ಆತನ ಸಹಚರರಿಂದ ಪೂರೈಕೆಯಾಗಿದ್ದ ಔಷಧಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಹತ್ತಾರು ಆಸ್ಪತ್ರೆಗಳು ಹಾಗೂ ನೂರಾರು ಔಷಧ ಮಾರಾಟ ಮಳಿಗೆಗಳ ಮೂಲಕ ಸುಮಾರು 15 ಸಾವಿರಕ್ಕೂ ಅಧಿಕ ರೋಗಿಗಳಿಗೆ ಔಷಧ ಪೂರೈಕೆಯಾಗಿದೆ. ಈ ಪೈಕಿ ಕೆಲ ಕಡೆ ಅಸಲಿ ಔಷಧ ಸರಬಾರಜು ಮಾಡಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹೇಗೆ ವಂಚನೆ?:
ಕ್ಯಾನ್ಸರ್ ಕಾಯಿಲೆಗೆ 5 ಲಕ್ಷ ರು. ಮೌಲ್ಯದ ಇಂಜೆಕ್ಷನ್ ಇದೆ. ಇದರ ಎರಡು ಇಂಜೆಕ್ಷನ್ ಕೊಂಡರೆ ಒಂದನ್ನು ಕಂಪನಿ ಉಚಿತವಾಗಿ ನೀಡುತ್ತದೆ. ಆದರೆ ಈ ಸಂಗತಿಯನ್ನು ಪ್ರಶಾಂತ್ ಬಾಬು ಗೌಪ್ಯವಾಗಿಟ್ಟಿದ್ದ. ತನ್ನ ಗ್ರಾಹಕರ ಮೂಲಕ ರೋಗಿಗಳಿಗೆ ಆ ಉಚಿತ ಇಂಜೆಕ್ಷನ್ ಮಾರಾಟ ಮಾಡಿದ್ದ. ಈ ರೀತಿ ಹಲವು ಇಂಜೆಕ್ಷನ್ಗಳು ಬಿಕರಿಯಾಗಿದ್ದು, ಅವುಗಳ ಖಚಿತ ಲೆಕ್ಕ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆ
ಅಲ್ಲದೆ, ಕೆಲ ಬಾರಿ ಎರಡು ಇಂಜೆಕ್ಷನ್ಗಳನ್ನು ಖರೀದಿಸಿದ ರೋಗಿಗಳಲ್ಲಿ ಒಂದು ಇಂಜೆಕ್ಷನ್ ಬಳಕೆಯಾಗಿ ಮೃತಪಟ್ಟರೆ ಬಾಕಿ ಇಂಜೆಕ್ಷನ್ ಅನ್ನು ಮರಳಿ ಪಡೆದು ಬೇರೆಯವರಿಗೆ ಬಿಕರಿ ಮಾಡಿರುವ ಮಾಹಿತಿಯೂ ಇದೆ. ಈ ಕುರಿತು ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆ. ಉಚಿತ ಹಾಗೂ ರೋಗಿಗಳಿಂದ ಸಂಗ್ರಹಿಸಿದ ಇಂಜೆಕ್ಷನ್ಗಳನ್ನು ಮೂಲ ಬೆಲೆಗೆ ಆರೋಪಿಗಳು ಮಾರಾಟ ಮಾಡಿ ಲಾಭಗಳಿಸಿದ್ದಾರೆ. ಇದು ಅಸಲಿ ಔಷಧವಾದರೂ ರೋಗಿಗಳಿಗೆ ಮೋಸ ಮಾಡಿರುವುದು ಸ್ಪಷ್ಟ ಎಂದು ತಿಳಿದು ಬಂದಿದೆ.
