ಬೆಂಗಳೂರು : ಸುಪ್ರೀಂ ಕೋರ್ಟ್ ಆದೇಶದಂತೆ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಬುಧವಾರ 5 ಪಾಲಿಕೆಯ ವ್ಯಾಪ್ತಿಯಲ್ಲೂ ಕಾರ್ಯಾಚರಣೆಗೆ ಮುನ್ನುಡಿ ಬರೆದಿದ್ದಾರೆ.
ಪಾದಚಾರಿ ಮಾರ್ಗ ಒತ್ತುವರಿ ಸ್ವಯಂ ತೆರವಿಗೆ ಜೂ.30 ರವರೆಗೂ ಕಾಲಾವಕಾಶ ನೀಡಿದ್ದ ಜಿಬಿಎ, ಬುಧವಾರದಿಂದ ಕಾರ್ಯಾಚರಣೆಗೆ ಇಳಿದಿದ್ದು ಜೊತೆಗೆ ಭಾರೀ ದಂಡ, ಲೈಸೆನ್ಸ್ ರದ್ದು ಮಾಡಲೂ ಮುಂದಾಯಿತು. ಸುಪ್ರೀಂ ಕೋರ್ಟ್ ಆದೇಶದಂತೆ ಫುಟ್‌ಪಾತ್ ಮೇಲಿನ ಹೋಟೆಲ್. ಅಂಗಡಿಗಳು, ಸರಕು, ಜಾಹೀರಾತು ಫಲಕ, ಶೆಡ್, ಸ್ಟ್ಯಾಂಡ್, ತಳ್ಳುವ ಗಾಡಿಗಳು ಸೇರಿದಂತೆ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲಾಯಿತು.
ಬಿಗಿ ಪೊಲೀಸ್ ಬಂದೋಬಸ್ತ್:
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ಬುಧವಾರದಿಂದ ಪ್ರಾರಂಭವಾಯಿತು. ಹಲವು ವರ್ಷಗಳಿಂದ ಪಾದಚಾರಿ ಮಾರ್ಗದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ವ್ಯಾಪಾರಿಗಳು, ಅದರಲ್ಲೂ ವೃದ್ಧರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂದೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಫುಟ್‌ಪಾತ್ ಮೇಲಿನ ಹೋಟೆಲ್, ಅಂಗಡಿಗಳನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ 75 ವರ್ಷದ ನಿರ್ಮಲಾ ಅವರು ಮಾತನಾಡಿ, ‘ನನಗೆ ವಯಸ್ಸಾಗಿದೆ. ಪತಿ ಇಲ್ಲ. ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಅಂಗೈ ಅಗಲದ ಜಾಗದಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿದ್ದೇನೆ. ಅಂಗಡಿ ಹಾಕಬೇಡ ಎಂದರೆ ನಾನು ಎಲ್ಲಿಗೆ ಹೋಗಲಿ, ಮನೆಯ ಬಾಡಿಗೆ ಹೇಗೆ ಕಟ್ಟಲಿ’ ಎಂದು ಅಳಲು ತೋಡಿಕೊಂಡರು.
ಅಶೋಕ ಪಿಲ್ಲರ್ ಬಳಿ ಫುಟ್‌ಪಾತ್ ಮೇಲೆ ನಿರ್ಮಿಸಿದ್ದ ಶೆಡ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿದರು. ಖಾಸಗಿ ಶಾಲೆಯ ಮುಂಭಾಗದಲ್ಲಿ ಅಳವಡಿಸಿದ್ದ ದೊಡ್ಡ ಪ್ರಮಾಣ ಶೆಡ್ ಸಹ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಕಾಮಾಗಾರಿಗಾಗಿ ಫುಟ್‌ಪಾತ್ ಮೇಲೆ ಹಾಕಿದ್ದ ಜಲ್ಲಿ, ಎಮ್ ಸ್ಯಾಂಡ್, ಕಬ್ಬಣದ ಸಾಮಗ್ರಿಯನ್ನೂ ಅಧಿಕಾರಿಗಳು ವಶಕ್ಕೆ ಪಡೆದರು.
ಚಾಮರಾಜಪೇಟೆಯಲ್ಲಿ ರಸ್ತೆಯ ಅಕ್ಕಪಕ್ಕ, ಫುಟ್‌ಪಾತ್ ಬಳಿ ವ್ಯಾಪಾರ ಮಾಡುತ್ತಿದ್ದವರನ್ನು ತೆರವುಗೊಳಿಸಲಾಯಿತು. ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ವ್ಯಾಪಾರಿಗಳು ತಳ್ಳುವ ಗಾಡಿಗಳನ್ನು ತೆಗೆದುಕೊಂಡು ಹೊರಟರು. ಯಲಹಂಕದ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿ ನರ್ಸರಿ ನಡೆಸುತ್ತಿದ್ದ ಜಾಗವನ್ನು ತೆರವು ಮಾಡಲಾಯಿತು.ವಿದ್ಯಾರಣ್ಯಪುರದ ನಂಜಪ್ಪ ಸರ್ಕಲ್ ಬಳಿ, ಮಾರತಹಳ್ಳಿಯಲ್ಲಿ ಫುಟ್‌ಪಾತ್ ಮೇಲೆ ಹೋಟೆಲ್ ನಡೆಸುತ್ತಿದ್ದವರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಯಿತು. ಎಂಜಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಟ್ರಿನಿಟಿ ಸರ್ಕಲ್‌ನಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೂ ರಸ್ತೆ ಪಕ್ಕ ಹಾಗೂ ಫುಟ್‌ಪಾತ್ ಮೇಲಿದ್ದ ಬೀಡ ಶಾಪ್. ಚಪ್ಪಲಿ ಅಂಗಡಿ, ಹೋಟೆಲ್ ಹಾಗೂ ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಯಿತು.ಮೆಜೆಸ್ಟಿಕ್ ಸುತ್ತಮುತ್ತ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದಾಗ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ನಾವು 30 ವರ್ಷದಿಂದ ಇಲ್ಲಿ ಅಂಗಡಿಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಇಷ್ಟು ದಿನ ಇಲ್ಲದ ರೂಲ್ಸ್ ಈಗ ಏಕಾಏಕಿ ಮಾಡಿದರೆ ಹೇಗೆ. ಒತ್ತಾಯದಿಂದ ತೆರವು ಮಾಡಿದರೆ ಪೆಟ್ರೋಲ್ ಸುರಿದುಕೊಂಡು ಸಾಯುತ್ತೇವೆ ಎಂದು ಎಚ್ಚರಿಸಿದರು.
ಹೆಬ್ಬಾಳದ ಜೆ.ಸಿ.ರಸ್ತೆ, ವಿಜಯನಗರ, ಮಲ್ಲೇಶ್ವರಂ 5ನೆ ಕ್ರಾಸ್‌ನಿಂದ 18ನೇ ಕ್ರಾಸ್‌ವರೆಗೆ, ಕಸವನಹಳ್ಳಿ ವೀರಪ್ಲ ರೆಡ್ಡಿ ಲೇಔಟ್, ಕೆ.ಆರ್.ಪುರಂ, ಜಯನಗರ ಸೇರಿದಂತೆ ಹಲವೆಡೆ ಜಿಬಿಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿದರು.
ಹೇಗಿತ್ತು ಒತ್ತುವರಿ ತೆರವು ಕಾರ್ಯಾಚರಣೆ ?:
ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಆಯುಕ್ತ ರಮೇಶ್ ನೇತೃತ್ವದಲ್ಲಿ ಮಾರತಹಳ್ಳಿಯಿಂದ ಇಬ್ಲೂರು ಜಂಕ್ಷನ್, ಹೋಫ್ ಫಾರ್ಮ್‌ನಿಂದ ವರ್ತೂರು, ಐಟಿಪಿಎಲ್ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ, ಟಿನ್ ಫ್ಯಾಕ್ಟರಿ, ರಾಮಮೂರ್ತಿನಗರ ಮುಖ್ಯ ರಸ್ತೆ, ಕುಂದಲಹಳ್ಳಿ, ಹೂಡಿ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಕೇಂದ್ರ ನಗರ ಪಾಲಿಕೆಯಲ್ಲಿ ಆಯುಕ್ತ ಜಗದೀಶ್ ನೇತೃತ್ವದಲ್ಲಿ ಟ್ರಿನಿಟಿ ಜಂಕ್ಷನ್‌ನಿಂದ ಎಂಜಿ ಉದ್ಯಾನ, ಇಂದಿರಾ ನಗರದ 100 ಅಡಿ ರಸ್ತೆಯಿಂದ ದೊಮ್ಮಲೂರು ಮೇಲ್ಸೇತುವೆ, ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಬೆನಗನಹಳ್ಳಿ ರೈಲ್ವೇ ಸೇತುವೆ, ಅಶೋಕ್ ಪಿಲ್ಲರ್‌ನಿಂದ ಮಾಧವನ್ ಪಾರ್ಕ್ ವರೆಗೆ, 8ನೇ ಮುಖ್ಯ ಹಾಗೂ 9ನೇ ಮುಖ್ಯ ರಸ್ತೆ ಕನಕನಪಾಳ್ಯ ರಸ್ತೆಯಿಂದ 15ನೇ ಅಡ್ಡ ರಸ್ತೆ ಜಯನಗರವರೆಗೆ, ಆರ್.ವಿ.ರಸ್ತೆ ಟೀಚರ್ಸ್ ಕಾಲೇಜಿನಿಂದ ಸೌತ್ ಎಂಡ್ ಸರ್ಕಲ್, ಓಕಳೀಪುರಂ, ಮೆಜೆಸ್ಟಿಕ್ ಪ್ರದೇಶಗಳು.
ದಕ್ಷಿಣ ನಗರ ಪಾಲಿಕೆ ಆಯುಕ್ತ ರಮೇಶ್ ನೇತೃತ್ವದಲ್ಲಿ ಉತ್ತರಹಳ್ಳಿ, 80 ಅಡಿ ರಸ್ತೆ ಆರ್.ವಿ ಇನ್ಸ್‌ಟಿಟ್ಯೂಟ್, ಕೊತ್ತನೂರು, ವಿಶ್ವಪ್ರಿಯ ಲೇಔಟ್, ಪದ್ಮನಾಭ ನಗರದ ಗುರುರಾಜ ಲೇಔಟ್, ಜಯನಗರ ಆರ್.ವಿ.ರಸ್ತೆ, ಜೆಪಿ ನಗರ, ಹೆಚ್.ಎಸ್.ಆರ್ ಲೇಔಟ್, ಕೋರಮಂಗಲ, ಬಿಟಿಎಂ 2ನೇ ಹಂತ ಸೇರಿದಂತೆ ಇತರೆ ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ನೇತೃತ್ವದಲ್ಲಿ ಯಲಹಂಕ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಹೆಬ್ಬಾಳದ ಮುನಿರೆಡ್ಡಿ ಪಾಳ್ಯ ರಸ್ತೆ, ವಿದ್ಯಾರಣ್ಯಪುರ ಮುಖ್ಯ ರಸ್ತೆ, ಸಹಕಾರ ನಗರ(ರೈಲ್ವೆ ಪರ್ಯಾಯ ರಸ್ತೆ), ಕ್ಲಾರ್ಕ್ ರಸ್ತೆ, ಬಾಣಸವಾಡಿ ಮುಖ್ಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ.ರಾಜೇಂದ್ರ ನೇತೃತ್ವದಲ್ಲಿ ತುಮಕೂರು ಮುಖ್ಯ ರಸ್ತೆ, ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ, ಮಾಗಡಿ ಮುಖ್ಯ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎಂ.ಇ.ಐ ರಸ್ತೆ, ಎಂ.ಕೆ.ಕೆ ರಸ್ತೆ, ದಾಸರಹಳ್ಳಿ(ಲೇಕ್ ರಸ್ತೆ), ಚಂದ್ರ ಲೇಔಟ್, ಗೋವಿಂದರಾಜನಗರ, ಪಾಲಿಕೆ ಬಜಾರ್, ಸಂಪಿಗೆ ರಸ್ತೆ, ರಾಜಾಜಿನಗರ, ಡಿವಿಜಿ ರಸ್ತೆ, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ ರಸ್ತೆ, ಭುವನೇಶ್ವರಿ ನಗರದ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವುಗೊಳಿಸಲಾಯಿತು.
ವ್ಯಾಪಾರಿಗಳು ಸಹಕಾರ ನೀಡಬೇಕು: ಕೃಷ್ಣ
ಸುಪ್ರೀಂ ಕೋರ್ಟ್ ಆದೇಶದಂತೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ವ್ಯಾಪಾರಿಗಳು ಸಹಕಾರ ನೀಡಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮನವಿ ಮಾಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬೆಂಗಳೂರಿನ ನಾಗರಿಕರಿಗೆ ಸಮಸ್ಯೆ ಆಗುತ್ತಿರು ವುದರಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೇವಲ ಶೇ.15 ರಷ್ಟು ಮಾತ್ರ ಫುಟ್‌ಪಾತ್ ತೆರವು ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ 15 ಸಾವಿರ ಕಿ.ಮೀ. ಫುಟ್‌ಪಾತ್ ಇದೆ. ನಾವು 2 ಸಾವಿರ ಕಿ.ಮೀ. ತೆರವುಗೊಳಿಸಿ ಎಂದು ಮಾತ್ರ ಹೇಳಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಲ ಹೇಗೆ ತೀರಿಸಲಿ?: ವ್ಯಾಪಾರಿ
ಕರುಬರಹಳ್ಳಿಯಲ್ಲಿ ಕಾರ್ಯಾಚರಣೆಗೆ ಸ್ಥಳೀಯ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ನಮಗೆ ಮೊದಲು ಪರ್ಯಾಯ ಜಾಗ ನಿಗದಿ ಮಾಡಿ ಬಳಿಕ ತೆರವು ಕಾರ್ಯಾಚರಣೆ ನಡೆಸಲಿ. ಪಾಲಿಕೆಯಿಂದಲೇ ವ್ಯಾಪಾರಕ್ಕೆ ಲೈಸೆನ್ಸ್ ನೀಡಿದ್ದಾರೆ. ಈಗ ದಿಢೀರ್ ಎಂದು ತೆರವುಗೊಳಿಸಿದರೆ ನಾವು ಎಲ್ಲಿಗೆ ಹೋಗಬೇಕು. ಲೈಸೆನ್ಸ್ ಆಧಾರದಲ್ಲಿ ಸಾಲ ಪಡೆದಿದ್ದೇವೆ. ಈಗ ಸಾಲ ಹೇಗೆ ತೀರಿಸುವುದು ಎಂದು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು
ಅಂಬೇಡ್ಕರ್ ರಥ ತೆರವಿಗೆ ಆಕ್ಷೇಪ
ಶ್ರೀರಾಮಪುರದಲ್ಲಿ ಪುಟ್‌ಪಾತ್ ಮೇಲಿದ್ದ ಅಂಬೇಡ್ಕರ್ ರಥ ತೆರವು ಮಾಡಲು ಅಧಿಕಾರಿಗಳು ಮುಂದಾದಾಗ ಅಂಬೇಡ್ಕರ್ ಸಂಘಟನೆಯವರು ಅಡ್ಡಿಪಡಿಸಿದರು. ಏಕಾಏಕಿ ತೆರವು ಮಾಡುವುದು ಸರಿಯಲ್ಲ. ನಮಗೆ 1 ವಾರ ಕಾಲಾವಕಾಶ ನೀಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ವೇಲುಮಣಿ ಆಕ್ರೋಶ ವ್ಯಕ್ತಪಡಿಸಿದರು.
