ಇತ್ತೀಚಿಗೆ ನಡೆದಿದ್ದ ರೌಡಿ ರಾಜು ಅಲಿಯಾಸ್ ‘ಹಲ್ಮುರಕ’ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕುಖ್ಯಾತ ಪಾತಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಜೆ.ಪಿ.ನಗರ ಪೊಲೀಸ್ ಠಾಣೆ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ ಬಂದೂಕಿನ ಮೂಲಕ ‘ಪಾಠ’ ಹೇಳಿದ್ದಾರೆ.

 ಬೆಂಗಳೂರು : ಇತ್ತೀಚಿಗೆ ನಡೆದಿದ್ದ ರೌಡಿ ರಾಜು ಅಲಿಯಾಸ್ ‘ಹಲ್ಮುರಕ’ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕುಖ್ಯಾತ ಪಾತಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಜೆ.ಪಿ.ನಗರ ಪೊಲೀಸ್ ಠಾಣೆ ಮಹಿಳಾ ಸಬ್ ಇನ್ಸ್‌ಪೆಕ್ಟರ್‌ ಬಂದೂಕಿನ ಮೂಲಕ ‘ಪಾಠ’ ಹೇಳಿದ್ದಾರೆ. ರೌಡಿ ಸಂತೋಷ್ ಅಲಿಯಾಸ್ ಬೆಟ್ಟಿಂಗ್ ಸಂತುಗೆ ಗುಂಡೇಟು ಬಿದ್ದಿದ್ದು, ಹತ್ಯೆ ಪ್ರಕರಣದ ಸಂಬಂಧ ಹೆಮ್ಮಿಗೆಪುರದ ನೈಸ್ ರಸ್ತೆ ಸಮೀಪ ಮಹಜರ್ ಪ್ರಕ್ರಿಯೆ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಆತ ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪೊಲೀಸರು ದಾಖಲಿಸಿದ್ದಾರೆ.

ಜೂ.27 ರಂದು ಕೆ.ಆರ್.ಪುರದಲ್ಲಿ ಮಹಿಳೆಯೊಬ್ಬರಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಸರ ಕದ್ದ ಬಳಿಕ ಅದೇ ದಿನ ರೌಡಿ ರಾಜು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರೌಡಿ ಸಂತು ಹಾಗೂ ಆತನ ಸಹಚರರು ಹತ್ಯೆ ಮಾಡಿದ್ದರು. ಈ ಕೊಲೆ ಬಳಿಕ ತಪ್ಪಿಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದರು.

ಸಂತುಗೆ ಗುಂಡು: 

ವೃತ್ತಿಪರ ಕ್ರಿಮಿನಲ್ ಆಗಿರುವ ಸಂತು ವಿರುದ್ಧ ಕೊಲೆ, ಸರಗಳ್ಳತನ ಹಾಗೂ ಕೊಲೆ ಯತ್ನ ಸೇರಿದಂತೆ 14 ಪ್ರಕರಣಗಳು ದಾಖಲಾಗಿವೆ. ಈ ಹಿನ್ನಲೆಯಲ್ಲಿ ಆತನ ವಿರುದ್ಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಹಲವು ವರ್ಷಗಳಿಂದ ರೌಡಿಗಳಾದ ಸಂತು ಹಾಗೂ ರಾಜು ಮಧ್ಯೆ ಘರ್ಷಣೆ ಇತ್ತು. ಈ ದ್ವೇಷಕ್ಕೆ ಪರಸ್ಪರ ಬಡಿದಾಟಗಳು ಸಹ ನಡೆದಿದ್ದವು. ಈ ಹಳೇ ದ್ವೇಷ ಹಿನ್ನೆಲೆಯಲ್ಲಿ ಜೂ.27 ರಂದು ರಾಜುನನ್ನು ಸಂತು ಹಾಗೂ ಆತನ ಸಹಚರರು ಕೊಂದಿದ್ದರು. ಹತ್ಯೆ ಬಳಿಕ ಹೆಮ್ಮಿಗೆಪುರದ ನೈಸ್ ರಸ್ತೆ ಸಮೀಪ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಆರೋಪಿಗಳು ಬಿಸಾಡಿದ್ದರು.

ಬಂಧಿಸಿದ ಬಳಿಕ ಆರೋಪಿಗಳನ್ನು ಮಹಜರ್ ಪ್ರಕ್ರಿಯೆ

ಈ ಪ್ರಕರಣದಲ್ಲಿ ಬಂಧಿಸಿದ ಬಳಿಕ ಆರೋಪಿಗಳನ್ನು ಮಹಜರ್ ಪ್ರಕ್ರಿಯೆಗೆ ಸಂಜೆ ಪೊಲೀಸರು ಕರೆದೊಯ್ದಿದ್ದರು. ಆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ತಪ್ಪಿಸಿಕೊಳ್ಳಲು ಸಂತು ಯತ್ನಿಸಿದ್ದಾನೆ. ಇದರಿಂದ ಇನ್ಸ್‌ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿಗೆ ಪೆಟ್ಟಾಗಿದೆ. ಕೂಡಲೇ ಆತನಿಗೆ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ತಮ್ಮ ಸರ್ವಿಸ್ ರಿವಾಲ್ವಾರ್ ಒಂದು ಸುತ್ತು ಗುಂಡು ಹಾರಿಸಿ ಸಬ್ ಇನ್ಸ್‌ಪೆಕ್ಟರ್ ಸವಿನಯ ಅವರುಸೂಚಿಸಿದ್ದಾರೆ. ಈ ಮಾತಿಗೆ ಕ್ಯಾರೇ ಎನ್ನದೆ ಮತ್ತೆ ದಾಳಿಗೆ ಮುಂದಾದ ರೌಡಿ ಕಾಲಿಗೆ ಪಿಎಸ್‌ಐ ಗುಂಡು ಹೊಡೆದಿದ್ದಾರೆ.