ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಯಿ ಮಕ್ಕಳನ್ನು ಹೇಗೆ ಪ್ರೀತಿಯಿಂದ ಸಾಕಿ ಸಲಹುತ್ತಾಳೋ ಹಾಗೆಯೇ ಮರಗಳು ನಮಗೆ ನೆರಳು, ಹಣ್ಣು, ಆಮ್ಲಜನಕ ನೀಡಿ ರಕ್ಷಿಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಟ್ಟು ಅದನ್ನು ಮಗುವಿನಂತೆ ಪೋಷಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಶಿವಕುಮಾರ ಮಾಳಿ ಹೇಳಿದರು.ಏಕ್ ಪೇಡ್ ಮಾ ಕೆ ನಾಮ್ ರಾಷ್ಟ್ರೀಯ ಅಭಿಯಾನ ಅಂಗವಾಗಿ ಬಂಬರಗೆಯ ಭಗವಾನ್ ಮಹಾವೀರ ಜೈನ್ ಇಂಗ್ಲಿಷ್ ಮೀಡಿಯಂ ರೆಸಿಡೆನ್ಸಿಯಲ್ ಶಾಲೆ, ಕಾಕತಿಯ ಅರಣ್ಯ ಇಲಾಖೆ ಸಹಯೋಗದೊಂದಿಗೆ ಭಾನುವಾರ ಶಾಲಾ ಆವರಣದಲ್ಲಿ 1000 ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದು ಕೇವಲ ಸಸಿ ನೆಡುವ ಕಾರ್ಯಕ್ರಮವಲ್ಲ, ತಾಯಿ ಮತ್ತು ಪ್ರಕೃತಿ ಮಾತೆಗೆ ನಾವು ಸಲ್ಲಿಸುವ ಗೌರವ ಎಂದು ಪರಿಸರ ಮಹತ್ವ ವಿವರಿಸಿದರು.ಉಪ ವಲಯ ಅರಣ್ಯಾಧಿಕಾರಿ ಲೋಹಿತ್.ಎಚ್ ಮಾತನಾಡಿ, ಇಂದು ಪರಿಸರದ ಸಮತೋಲನ ತಪ್ಪಿದೆ. ಅತಿಯಾದ ಉಷ್ಣಾಂಶ, ಮಳೆ ಕೊರತೆ, ಅಂತರ್ಜಲ ಕುಸಿತಕ್ಕೆ ಅರಣ್ಯ ನಾಶವೇ ಕಾರಣ. ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಗಿಡ ನೆಡುವ ವೈಜ್ಞಾನಿಕ ವಿಧಾನ, ಜೀವವೈವಿಧ್ಯ ಸಂರಕ್ಷಣೆಯ ಮಹತ್ವ, ಹವಾಮಾನ ಬದಲಾವಣೆಯ ಸವಾಲುಗಳು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರದ ಕುರಿತು ವಿಸ್ತೃತವಾಗಿ ಅರಿವು ಮೂಡಿಸಿ ಪ್ಲಾಸ್ಟಿಕ್ ಬಳಕೆ ತಗ್ಗಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ 5ನೇ ತರಗತಿಯಿಂದ 10ನೇ ತರಗತಿವರೆಗಿನ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡರು. ಮಾವು, ಹೊಂಗೆ, ಬೇವು, ನೆಲ್ಲಿ, ತೆಂಗು ಸೇರಿದಂತೆ ಹಣ್ಣು, ನೆರಳು, ಔಷಧೀಯ ಗುಣವುಳ್ಳ ವಿವಿಧ ಜಾತಿಯ 1000 ಸಸಿಗಳನ್ನು ತಾಯಿಯ ಹೆಸರಿನಲ್ಲಿ ನೆಟ್ಟು ಪ್ರಕೃತಿಗೆ ಕೃತಜ್ಞತೆ ಸಲ್ಲಿಸಿದರು. ನಾವು ನೆಟ್ಟ ಸಸಿಗಳನ್ನು ಮಕ್ಕಳಂತೆ ಪೋಷಿಸುತ್ತೇವೆ ಎಂದು ಹಸಿರು ಭವಿಷ್ಯದ ಸಂಕಲ್ಪ ಮಾಡಿದರು.ಅರಣ್ಯ ಇಲಾಖೆಯ ಸಹಕಾರಕ್ಕೆ ಶಾಲಾ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿತು. ಶೈಕ್ಷಣಿಕ ಉತ್ಕೃಷ್ಟತೆಯ ಜೊತೆಗೆ ಪರಿಸರ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದು ನಮ್ಮ ಧ್ಯೇಯ ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದರು. ನೆಟ್ಟ ಪ್ರತಿ ಸಸಿಯ ಪಾಲನೆಗೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತಂಡಗಳನ್ನು ರಚಿಸಿ ಜವಾಬ್ದಾರಿ ವಹಿಸಲಾಯಿತು.ತಾಯಿ ಮಕ್ಕಳನ್ನು ಹೇಗೆ ಪ್ರೀತಿಯಿಂದ ಸಾಕಿ ಸಲಹುತ್ತಾಳೋ ಹಾಗೆಯೇ ಮರಗಳು ನಮಗೆ ನೆರಳು, ಹಣ್ಣು, ಆಮ್ಲಜನಕ ನೀಡಿ ರಕ್ಷಿಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಟ್ಟು ಅದನ್ನು ಮಗುವಿನಂತೆ ಪೋಷಿಸಬೇಕು. ಇದು ಕೇವಲ ಸಸಿ ನೆಡುವ ಕಾರ್ಯಕ್ರಮವಲ್ಲ, ತಾಯಿ ಮತ್ತು ಪ್ರಕೃತಿ ಮಾತೆಗೆ ನಾವು ಸಲ್ಲಿಸುವ ಗೌರವ.
-ಶಿವಕುಮಾರ ಮಾಳಿ, ವಲಯ ಅರಣ್ಯಾಧಿಕಾರಿ.ನಾವು ನೆಡುವ ಪ್ರತಿ ಸಸಿಯೂ ಮುಂದಿನ ಪೀಳಿಗೆಗೆ ಆಮ್ಲಜನಕದ ಕಾರ್ಖಾನೆ. ಮಕ್ಕಳೇ, ನೀವು ನೆಟ್ಟ ಈ ಸಸಿಗಳನ್ನು ಕನಿಷ್ಠ 3 ವರ್ಷ ಆರೈಕೆ ಮಾಡಿ. ನಿಮ್ಮ ಶಾಲೆ ಇಡೀ ಜಿಲ್ಲೆಗೆ ಹಸಿರು ಮಾದರಿಯಾಗಬೇಕು. ಪರಿಸರ ಉಳಿದರೇ ಮಾತ್ರ ನಾವು ಉಳಿಯುತ್ತೇವೆ ಎಂಬುವುದನ್ನು ಮರೆಯಬೇಡಿ.-ಲೋಹಿತ್.ಎಚ್,
ಉಪ ವಲಯ ಅರಣ್ಯಾಧಿಕಾರಿ.