ಹತ್ತು ವರ್ಷಗಳ ಹಿಂದೆ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 17 ಮಂದಿ ಅಪರಾಧಿಗಳಿಗೆ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
---
ಮುಂದೇನು?1. ಶಿಕ್ಷೆ ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು2. ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಜಾಮೀನು ನೀಡುವಂತೆ ಕೋರಬಹುದು3. ಪ್ರಕರಣದ ತನಿಖಾಧಿಕಾರಿಗಳೂ ಇದಕ್ಕೆ ಆಕ್ಷೇಪಣೆಯನ್ನು ಸಲ್ಲಿಸಬಹುದು4. ಶಿಕ್ಷೆ ಅಮಾನತು, ಜಾಮೀನು ಮಂಜೂರು ಹೈಕೋರ್ಟ್ ವಿವೇಚನೆಗೆ5. ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದರೆ ವಿನಯ್ ಶಾಸಕತ್ವ ಸುರಕ್ಷಿತ--ಶಾಸಕ ಸ್ಥಾನದಿಂದ
ಶೀಘ್ರವೇ ಅನರ್ಹ
ಯಾವುದೇ ಶಾಸಕ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ತಕ್ಷಣ ಆತನ ಶಾಸಕನ ಸ್ಥಾನ ರದ್ದಾಗುತ್ತದೆ. ನ್ಯಾಯಾಲಯದ ತೀರ್ಪು ಪ್ರತಿ ವಿಧಾನಸಭಾ ಸ್ಪೀಕರ್‌ಗೆ ತಲುಪಿದ ತಕ್ಷಣ ಸ್ಪೀಕರ್ ಅವರು ವಿನಯ್ ಕುಲಕರ್ಣಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
--ಕನ್ನಡಪ್ರಭ ವಾರ್ತೆ ಬೆಂಗಳೂರು
ಹತ್ತು ವರ್ಷಗಳ ಹಿಂದೆ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 17 ಮಂದಿ ಅಪರಾಧಿಗಳಿಗೆ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಾಲಿ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ಒಬ್ಬ ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.ಪ್ರಕರಣದ 21 ಮಂದಿ ಆರೋಪಿಗಳ ಪೈಕಿ 17 ಮಂದಿಯನ್ನು ದೋಷಿ ಎಂದು ತೀರ್ಮಾನಿಸಿ ಏ.15ರಂದು ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್, ಶುಕ್ರವಾರ ತೆರೆದ ನ್ಯಾಯಾಲಯದಲ್ಲಿ 17 ಮಂದಿ ಅಪರಾಧಿಗಳಿಗೂ ಶಿಕ್ಷೆ ಪ್ರಮಾಣ ಪ್ರಕಟಿಸಿದರು.
ಶಿಕ್ಷೆ ಪ್ರಮಾಣ ಪ್ರಕಟವಾಗುವ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಹಾಗೂ ಪೊಲೀಸರು ಶುಕ್ರವಾರ ಬೆಳಗ್ಗೆ ಬಿಗಿ ಭದ್ರತೆಯಲ್ಲಿ 17 ಮಂದಿ ಅಪರಾಧಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆತಂದಿದ್ದರು. ಸಂಜೆ ಸುಮಾರು 4.10ಕ್ಕೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನ್ಯಾಯಾಲಯದ ಕೊಠಡಿ ಪ್ರವೇಶಿಸಿದರು. ಬಳಿಕ 17 ಮಂದಿ ಅಪರಾಧಿಗಳ ಹೆಸರು ಕೂಗಿದರು. ಈ ವೇಳೆ ವಿನಯ್ ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳು ನ್ಯಾಯಾಧೀಶರಿಗೆ ಕೈ ಮುಗಿದು ನಿಂತರು. ಈ ವೇಳೆ ನ್ಯಾಯಾಧೀಶರು ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಜೀವಾವಧಿ ಶಿಕ್ಷೆ ಎಂದು ಹೇಳುತ್ತಿದಂತೆ ವಿನಯ್ ಕುಲಕರ್ಣಿ ಸೇರಿ ಎಲ್ಲ ಆರೋಪಿಗಳು ಕಣ್ಣೀರಿಟ್ಟರು.ನ್ಯಾಯಾಲಯದ ತೀರ್ಪಿನ ಬಳಿಕ ಅಪರಾಧಿಗಳನ್ನು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಯಾವುದಕ್ಕೆ ಎಷ್ಟು ಶಿಕ್ಷೆ?:ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಜತೆಗೆ 120ಬಿ (ಪಿತೂರಿ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗಾಗಿ ವಿಕ್ರಮ್ ಬಳ್ಳಾರಿ (ಎ2), ಕೀರ್ತಿಕುಮಾರ್ ಬಸವರಾಜ ಕುರಹಟ್ಟಿ (ಎ3), ಸಂದೀಪ್ ಸವದತ್ತಿ (ಎ4), ವಿನಾಯಕ ಕಟಗಿ (ಎ5), ಮಹಾಬಲೇಶ್ವರ ಹೊಂಗಲ್ ಅಲಿಯಾಸ್ ಮುದುಕ (ಎ6), ಸಂತೋಷ್ ಸವದತ್ತಿ (ಎ7), ಎಂ. ದಿನೇಶ್ (ಎ8), ಅಶ್ವತ್ (ಎ9), ಸುನೀಲ್ (ಎ10), ನಜೀರ್ ಅಹಮದ್ (ಎ11), ಶಹನವಾಜ್ (ಎ12), ನೂತನ್ (ಎ13), ಹರ್ಷಿತ್ (ಎ14), ವಿನಯ ಕುಲಕರ್ಣಿ (ಎ15), ಚಂದ್ರಶೇಖರ್ ಇಂಡಿ (ಎ16) ಹಾಗೂ ವಿಕಾಸ್ ಕಲ್ಬುರ್ಗಿಗೆ (ಎ18) ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರು. ದಂಡ ವಿಧಿಸಿದೆ.
ಅಂತೆಯೇ ಐಪಿಸಿ ಸೆಕ್ಷನ್ 143 (ಅಕ್ರಮ ಕೂಟ) ಜತೆಗೆ 120ಬಿ (ಪಿತೂರಿ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಕ್ಕಾಗಿ 2 ರಿಂದ 14 ಹಾಗೂ 18ನೇ ಆರೋಪಿಗಳಿಗೆ ತಲಾ 2 ಸಾವಿರ ರು. ದಂಡದೊಂದಿಗೆ 6 ತಿಂಗಳ ಅವಧಿಗೆ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಐಪಿಸಿ ಸೆಕ್ಷನ್ 147 (ಗಲಭೆ) ಜತೆಗೆ 120ಬಿ ಅಡಿಯ ಅಪರಾಧಕ್ಕಾಗಿ ಆರೋಪಿ ಸಂಖ್ಯೆ 2 ರಿಂದ 14 ಹಾಗೂ 18ನೇ ಆರೋಪಿಗೆ ತಲಾ 2 ಸಾವಿರ ರು. ದಂಡದೊಂದಿಗೆ 1 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.ಐಪಿಸಿ ಸೆಕ್ಷನ್ 148 (ಮಾರಕಾಸ್ತ್ರ ಹಿಡಿದು ಗಲಭೆ) ಜತೆಗೆ 120ಬಿ ಅಡಿಯಲ್ಲಿನ ಅಪರಾಧ ಕೃತ್ಯಕ್ಕಾಗಿ 2 ರಿಂದ 14 ಮತ್ತು 18ನೇ ಆರೋಪಿಗಳಿಗೆ 1 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 2 ಸಾವಿರ ರು. ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 120ಬಿ (ಪಿತೂರಿ) ಅಡಿಯಲ್ಲಿನ ಅಪರಾಧಕ್ಕಾಗಿ 2 ರಿಂದ 16 ಹಾಗೂ 18ನೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರು. ದಂಡ ವಿಧಿಸಲಾಗಿದೆ.
ಚನ್ನಕೇಶವ ಟಿಂಗರೀಕರ್‌ಗೆ (ಎ19) ಐಪಿಸಿ ಸೆಕ್ಷನ್ 218 (ಸರ್ಕಾರಿ ಅಧಿಕಾರಿಯು ವ್ಯಕ್ತಿಯನ್ನು ಶಿಕ್ಷೆಯಿಂದ ಅಥವಾ ಆಸ್ತಿ ಮುಟ್ಟುಗೋಲಿನಿಂದ ರಕ್ಷಿಸಲು ಸುಳ್ಳು ದಾಖಲೆ ಸೃಷ್ಟಿ) ಅಡಿ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರು. ದಂಡ, ಐಪಿಸಿ ಸೆಕ್ಷನ್ 201 (ಸಾಕ್ಷ್ಯಗಳ ಕಣ್ಮರೆಗೆ ಕಾರಣ ಅಥವಾ ಅಪರಾಧಿ ರಕ್ಷಿಸಲು ಸುಳ್ಳು ಮಾಹಿತಿ ನೀಡುವುದು) ಜತೆಗೆ 120ಬಿ ಅಡಿಯಲ್ಲಿನ ಅಪರಾಧಕ್ಕಾಗಿ, 2 ರಿಂದ 16, 18 ಮತ್ತು 19ನೇ ಆರೋಪಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರು. ದಂಡ ವಿಧಿಸಿದೆ.ಐಪಿಸಿ ಸೆಕ್ಷನ್ 218 ಜತೆಗೆ 120ಬಿ ಅಡಿಯಲ್ಲಿನ ಅಪರಾಧಕ್ಕಾಗಿ ಎ19 ಚೆನ್ನಕೇಶವ ಟಿಂಗರೀಕರ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರು. ದಂಡ ವಿಧಿಸಲಾಗಿದೆ. ಮೇಲಿನ ಎಲ್ಲ ಪ್ರಕರಣಗಳಲ್ಲೂ ಅಪರಾಧಿಗಳು ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಯೋಗೇಶ್ ಗೌಡ ಮಕ್ಕಳಿಗೆ 16 ಲಕ್ಷ ರು. ಪರಿಹಾರ:ಅಪರಾಧಿಗಳು ದಂಡ ಪಾವತಿಸಲು ವಿಫಲವಾಗಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಿದರೂ ದಂಡ ಪಾವತಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧಿಗಳಿಗೆ ವಿಧಿಸಲಾಗಿರುವ ಎಲ್ಲ ಶಿಕ್ಷೆಗಳೂ ಏಕಕಾಲದಲ್ಲಿ ಜಾರಿಯಾಗಲಿವೆ. ವಿಚಾರಣಾಧೀನ ಕೈದಿಗಳಾಗಿ ಅನುಭವಿಸಿದ ಬಂಧನದ ಅವಧಿ ಜೈಲು ಶಿಕ್ಷೆಯಿಂದ ಕಡಿತಗೊಳ್ಳಲಿದೆ. ದಂಡದ ಒಟ್ಟು ಮೊತ್ತದಿಂದ ಮೃತ ಯೋಗೇಶ್ ಗೌಡ ಮತ್ತು ಗುರುನಾಥ ಗೌಡ ಅವರ ಮಕ್ಕಳಿಗೆ 16 ಲಕ್ಷ ರು. ಪರಿಹಾರ ನೀಡಬೇಕು. ಉಳಿದ ದಂಡದ ಮೊತ್ತವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಏನಿದು ಪ್ರಕರಣ?:ಧಾರವಾಡದ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು 2016ರ ಜೂ.15ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣವನ್ನು 2019ರಲ್ಲಿ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ಬೆಳಕಿಗೆ ಬಂದಿತ್ತು. ಇದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಸಿಬಿಐ ಅಧಿಕಾರಿಗಳು 2020ರ ನ.5ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು.
ಖುಲಾಸೆ ಗೊಂಡವರು ಯಾರು?ಪ್ರಕರಣದ 20ನೇ ಆರೋಪಿ ವಾಸುದೇವ ರಾಮ ನಿಲೇಕಣಿ, 21 ಆರೋಪಿ ಸೋಮಶೇಖರ್ ಬಸಪ್ಪ ನ್ಯಾಮನಗೌಡ, ಮಾಫಿ ಸಾಕ್ಷಿಯಾಗಿದ್ದ 1ನೇ ಆರೋಪಿ ಬಸವರಾಜ ಮುತ್ತಗಿ, 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ್.
17ನೇ ಆರೋಪಿ ವಿರುದ್ಧ ಕ್ರಮಕ್ಕೆ ಅವಕಾಶಈ ಪ್ರಕರಣದಲ್ಲಿ ಮೊದಲಿಗೆ ಮಾಫಿ ಸಾಕ್ಷಿಯಾಗಿ ನಂತರ ವಿಚಾರಣಾ ನ್ಯಾಯಾಲಯದ ಎದುರು ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ಪ್ರಕರಣದ 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ್ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.
-ಬಾಕ್ಸ್-ಸುಳ್ಳು ಸಾಕ್ಷ್ಯ ಪ್ರಕರಣದಾಖಲಿಸಲು ನಿರ್ದೇಶನ
ವಿಚಾರಣಾ ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷ್ಯ ನೀಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳಾದ ಶಿವಾನಂದ ಚಲವಾದಿ, ಬಾಬು ಕಟಗಿ, ಶಂಕರಗೌಡ ಬಸನಗೌಡ ಪಾಟೀಲ್ ಹಾಗೂ ಇತರ ಸ್ವತಂತ್ರ ಸಾಕ್ಷಿಗಳಾದ ದತ್ತಾತ್ರೇಯ ಗುಡಗಂಟಿ, ಆನಂದ ಈರಪ್ಪ ಉದ್ದಣ್ಣವರ್, ವಿನಾಯಕ ಬಿಂಜಿಯವರ್, ಮೋಹನ್ ಈಚರಪ್ಪ ಮಲ್ಮುತ್ತಲ್, ವಿವೇಕಾನಂದ ದಳವಾಯಿ, ನಟರಾಜ್ ಸರದೇಸಾಯಿ ಮತ್ತು ವಿಜಯ್ ಕುಲಕರ್ಣಿ ವಿರುದ್ಧ ಸುಳ್ಳು ಸಾಕ್ಷ್ಯದ ಪ್ರಕರಣವನ್ನು ದಾಖಲಿಸಲು ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ನ್ಯಾಯಾಲಯ ನಿರ್ದೇಶಿಸಿದೆ.ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಕುಲಕರ್ಣಿ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ತೆರೆದ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸುವಾಗ ಕಟಕಟೆ ಎದುರು 17 ಮಂದಿ ಅಪರಾಧಿಗಳು ತಲೆ ಬಗ್ಗಿಸಿ ಮೌನವಾಗಿ ನಿಂತಿದ್ದರು. ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳುತ್ತಿದ್ದಂತೆ ಅಪರಾಧಿ ವಿನಯ್ ಕುಲಕರ್ಣಿ ಭಾವೋದ್ವೇಗಕ್ಕೆ ಒಳಗಾಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಉಳಿದ 16 ಮಂದಿ ಆರೋಪಿಗಳು ಭಾವುಕರಾಗಿ ಕಣ್ಣೀರು ಸುರಿಸಿದರು.ಹೈಕೋರ್ಟ್‌ನಲ್ಲಿ ಮೇಲ್ಮನವಿಗೆ ಅವಕಾಶ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ. ಈ ಪ್ರಕರಣದಲ್ಲಿ ಅಪರಾಧಿ ವಿನಯ್ ಕುಲಕರ್ಣಿ ಜನಪ್ರತಿನಿಧಿ ಆಗಿರುವುದರಿಂದ ಜನಪ್ರತಿನಿಧಿಗಳ ಹೈಕೋರ್ಟ್ ವಿಭಾಗೀಯ ಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಲಿದೆ.ಶಿಕ್ಷೆ ಅಮಾನತು, ಬೇಲ್ ಹೈಕೋರ್ಟ್ ವಿವೇಚನೆಗೆ:ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಈ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ತಮಗೆ ಜಾಮೀನು ನೀಡುವಂತೆ ಅಪರಾಧಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಸಿಬಿಐಗೂ ಅವಕಾಶವಿದೆ. ಅಂತಿಮವಾಗಿ ಶಿಕ್ಷೆ ಅಮಾನತುಗೊಳಿಸುವ ಮತ್ತು ಜಾಮೀನು ಮಂಜೂರು ಮಾಡುವುದು ಹೈಕೋರ್ಟ್ ವಿವೇಚನೆಗೆ ಒಳಪಟ್ಟಿರುತ್ತದೆ.
-ಬಾಕ್ಸ್-ಬೇರೆ ಬಟ್ಟೆ ಧರಿಸಲು ಅವಕಾಶಕ್ಕೆ ಮನವಿ
ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಶಿಕ್ಷೆ ಪ್ರಮಾಣ ಪ್ರಕಟಿಸಿದ ಬಳಿಕ ಅಪರಾಧಿ ವಿನಯ್ ಕುಲಕರ್ಣಿ ಪರ ವಕೀಲರು, ಅಪರಾಧಿಗಳು ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿದ್ದಾರೆ. ಹೀಗಾಗಿ ಬೇರೆ ಬಟ್ಟೆ ಧರಿಸಲು ಅವಕಾಶ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಜೈಲು ಮ್ಯಾನುವೆಲ್‌ನಲ್ಲಿ ಇರುವ ಅವಕಾಶದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.-ಬಾಕ್ಸ್-ಇತ್ತೀಚಿನ 2ನೇ ಮಹತ್ವದ ತೀರ್ಪು:
ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಇತ್ತೀಚೆಗೆ ನೀಡಿದ ಎರಡನೇ ಮಹತ್ವದ ತೀರ್ಪು ಇದಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಿತಾವಧಿ ಜೈಲು ಶಿಕ್ಷೆ ನೀಡಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಹಾಲಿ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ.-ಬಾಕ್ಸ್-
ಸನ್ನಡತೆ ಮೇಲೆ ಬಿಡುಗಡೆಗೆ ಅವಕಾಶ:ಘೋರ ಅಪರಾಧ ಪ್ರಕರಣಗಳಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ ಜೀವ ಇರುವವರೆಗೂ ಜೈಲು ಶಿಕ್ಷೆ ಅನುಭವಿಸಬೇಕು. ಇದರಲ್ಲಿ ಅಪರಾಧಿಗೆ ಶಿಕ್ಷೆ ಕಡಿಮೆ ಮಾಡುವ ಅಥವಾ ಕ್ಷಮಾಧಾನಕ್ಕೆ ಅವಕಾಶವೇ ಇಲ್ಲ. ಆದರೆ, ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ 14 ವರ್ಷಗಳ ಶಿಕ್ಷೆ ಅನುಭವಿಸಿದ ಬಳಿಕ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಅವಕಾಶವಿದೆ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 16 ಮಂದಿ ಅಪರಾಧಿಗಳೂ ಸನ್ನಡತೆ ವ್ಯಾಪ್ತಿಗೆ ಬರುತ್ತಾರೆ.
-ಬಾಕ್ಸ್-ಶಾಸಕ ಸ್ಥಾನದಿಂದ ಅನರ್ಹತೆ ನಿಶ್ಚಿತ:ಯಾವುದೇ ಶಾಸಕ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ತಕ್ಷಣ ಆತನ ಶಾಸಕನ ಸ್ಥಾನ ರದ್ದಾಗುತ್ತದೆ. ಇದೀಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜೀವಾಧಿಗೆ ಶಿಕ್ಷೆಗೆ ಗುರಿಯಾಗಿರುವುದರಿಂದ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ. ನ್ಯಾಯಾಲಯದ ತೀರ್ಪು ಪ್ರತಿ ವಿಧಾನಸಭಾ ಸ್ಪೀಕರ್‌ಗೆ ತಲುಪಿದ ತಕ್ಷಣ ಸ್ಪೀಕರ್ ಅವರು ಶಾಸಕ ಸ್ಥಾನ ಅನರ್ಹ ಸಂಬಂಧ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
-----------------ವಿನಯ್ ಕುಲಕರ್ಣಿ ಮುಂದಿನ ಆಯ್ಕೆಗಳೇನು?ವಿನಯ್ ಕುಲಕರ್ಣಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಕೋರಬಹುದು ಅಥವಾ ದೋಷಿ ಎಂಬ ತೀರ್ಪಿಗೆ ತಡೆಯಾಜ್ಞೆ ಕೋರಬಹುದು. ಒಂದು ವೇಳೆ ಹೈಕೋರ್ಟ್ ತಡೆಯಾಜ್ಞೆ ನೀಡಿದರೆ ಶಾಸಕ ಸ್ಥಾನ ಉಳಿಯಲಿದೆ. ಇಲ್ಲವಾದರೆ, ಜೈಲುವಾಸದ ಜೊತೆಗೆ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಮುಂದೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಕಾನೂನಿನಲ್ಲಿ ಅವಕಾಶವಿದೆ.