ಹಣಕಾಸಿನ ವಿಚಾರಕ್ಕೆ ಗ್ಯಾರೇಜ್ ಮೆಕಾನಿಕ್‌ನನ್ನು ಭೀಕರವಾಗಿ ಹತ್ಯೆಗೈದಿದ್ದ ಪ್ರಕರಣದ ಸಂಬಂಧ ಏಳು ಮಂದಿಯನ್ನು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಣಕಾಸಿನ ವಿಚಾರಕ್ಕೆ ಗ್ಯಾರೇಜ್ ಮೆಕಾನಿಕ್‌ನನ್ನು ಭೀಕರವಾಗಿ ಹತ್ಯೆಗೈದಿದ್ದ ಪ್ರಕರಣದ ಸಂಬಂಧ ಏಳು ಮಂದಿಯನ್ನು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ವಿಲ್ಸನ್ ಗಾರ್ಡನ್‌ನ ಬಡಾ ಮಖಾನ್ ನಿವಾಸಿ ಫರ್ವೀಜ್(36), ಸಮೀರ್(38) ಮತ್ತು ಅಫ್ರಿದಿ ಅಲಿಯಾಸ್ ಅಸ್ಗರ್ (39) ಹಾಗೂ ಇತರೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಮಾ.15ರಂದು ರಾತ್ರಿ 10 ಗಂಟೆ ಸುಮಾರಿಗೆ ಬಡಾ ಮಖಾನ್ ರಸ್ತೆಯಲ್ಲಿ ರಷೀದ್ ಪಾಷಾ(45) ಎಂಬಾತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಡಾ ಮಖಾನ್ ರಸ್ತೆಯಲ್ಲಿ ವಕ್ಫ್ ಬೋರ್ಡ್‌ಗೆ ಸೇರಿದ ವಾಣಿಜ್ಯ ಮಳಿಗೆಗಳಿದ್ದು, ಈ ಪೈಕಿ 10*10 ಜಾಗದಲ್ಲಿ ರಷೀದ್ ಪಾಷಾ ಬೈಕ್ ಗ್ಯಾರೇಜ್ ನಡೆಸುತ್ತಿದ್ದರು. ಮೇಲ್ಛಾವಣಿಗೆ ಶೀಟ್ ಅಳವಡಿಸಿದ್ದರಿಂದ ಮೋಲ್ಡ್ ಹಾಕಿಸಲು ರಷೀದ್ ಪಾಷಾ ಮುಂದಾಗಿದ್ದರು. ಈ ವಿಚಾರ ತಿಳಿದ ಇತರೆ ಅಂಗಡಿ ಮಾಲೀಕರು ಹಾಗೂ ಕೆಲ ಕಿಡಿಗೇಡಿಗಳು, ಅಂಗಡಿಗೆ ಸಿಮೆಂಟ್ ಮೋಲ್ಡ್ ಹಾಕಿಸುವಂತಿಲ್ಲ. ಇದು ವಕ್ಫ್ ಬೋರ್ಡ್‌ಗೆ ಸೇರಿದ ಜಾಗ. ಆ ರೀತಿ ಮಾಡುವಂತಿಲ್ಲ ಎಂದು ಜಗಳ ಮಾಡಿದ್ದರು. ಆದರೆ, ರಷಿದ್ ಪಾಷಾ, ಮಾ. 15 ರಂದು ರಾತ್ರಿ 10 ಗಂಟೆ ಸುಮಾರಿಗೆ ಏಕಾಏಕಿ ಮೋಲ್ಡ್ ಹಾಕಿಸಲು ಮುಂದಾಗಿದ್ದರು. ಅದನ್ನು ಗಮನಿಸಿದ ಕೆಲ ಅಂಗಡಿ ಮಾಲೀಕರು ಹಾಗೂ ಇತರರು ಬಂದು ಗಲಾಟೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳ ಎದುರೇ ತಂದೆ ಹತ್ಯೆಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಆಕ್ರೋಶಗೊಂಡ ಆರೋಪಿಗಳು, ಕ್ರಿಕೆಟ್ ಬ್ಯಾಟ್ ಮತ್ತು ದೊಣ್ಣೆಗಳಿಂದ ರಷಿದ್ ಪಾಷಾ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಆಗ ಕೆಳಗೆ ಬಿದ್ದ ರಷಿದ್ ಪಾಷಾನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದೆ. ಆದರೂ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ರಷಿದ್ ಪಾಷಾನ ಇಬ್ಬರು ಮಕ್ಕಳು ಜಗಳ ಬಿಡಿಸಲು ಮುಂದಾದರೂ ಅವರನ್ನು ಪಕ್ಕಕ್ಕೆ ತಳ್ಳಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂಬುದು ಗೊತ್ತಾಗಿದೆ.
50 ಸಾವಿರ ಹಫ್ತಾಕ್ಕೆ ಬೇಡಿಕೆವಕ್ಫ್ ಬೋರ್ಡ್‌ಗೆ ಸೇರಿದ ಜಾಗವಾಗಿದ್ದರಿಂದ ಗ್ಯಾರೇಜ್ ಮೇಲ್ಛಾವಣಿಗೆ ಮೋಲ್ಡ್ ಹಾಕಲು ವಕ್ಫ್ ಬೋರ್ಡ್ ಅನುಮತಿ ಬೇಕೆಂದು ಸ್ಥಳೀಯರು ಸೂಚಿಸಿದ್ದರು. ಬಳಿಕ ರಷಿದ್ ಪಾಷಾ, ಅನುಮತಿ ಕೂಡ ಪಡೆದುಕೊಂಡಿದ್ದ ಎಂದು ಹೇಳಲಾಗಿದೆ. ಆದರೂ ಕೆಲವರು ತಮಗೆ 50 ಸಾವಿರ ರು. ಹಫ್ತಾ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅದಕ್ಕೆ ರಷಿದ್ ಪಾಷಾ ನಿರಾಕರಿಸಿದ್ದರಿಂದ ಉದ್ದೇಶಪೂರ್ವಕವಾಗಿಯೇ ಗಲಾಟೆ ಮಾಡಿ ಹಲ್ಲೆ ನಡೆಸಿ ಹತ್ಯೆಗೈಯಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
