ಎರಡು ಭಾಗಗಳಲ್ಲಿ ಅದ್ದೂರಿಯಾಗಿ ಮೂಡಿಬರಲಿರುವ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ ‘ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್’ ಐತಿಹಾಸಿಕ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೇವಲ ನಾಯಕನಾಗಿ ನಟಿಸುತ್ತಿರುವುದು ಮಾತ್ರವೇ ಅಲ್ಲ, ಜೊತೆಗೆ ಚಿತ್ರದ ಸಹ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.
ಸಿನಿವಾರ್ತೆ:
ಎರಡು ಭಾಗಗಳಲ್ಲಿ ಅದ್ದೂರಿಯಾಗಿ ಮೂಡಿಬರಲಿರುವ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ ‘ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್’ ಐತಿಹಾಸಿಕ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೇವಲ ನಾಯಕನಾಗಿ ನಟಿಸುತ್ತಿರುವುದು ಮಾತ್ರವೇ ಅಲ್ಲ, ಜೊತೆಗೆ ಚಿತ್ರದ ಸಹ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ಅವರು ಯಶ್ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ.
ಈ ಚಿತ್ರಕ್ಕೆ ಪ್ರಸ್ತುತ ಭರದಿಂದ ಪ್ರೀ-ಪ್ರೊಡಕ್ಷನ್ ಕೆಲಸಗಳು ಸಾಗುತ್ತಿದ್ದು, 2027ರ ಆರಂಭದಲ್ಲೇ ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಲಿದೆ. ಈ ಚಿತ್ರವನ್ನು ಟಿ-ಸೀರೀಸ್ ಹಾಗೂ ಲೆಜೆಂಡ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿವೆ.
ಅಪರೂಪದ ತೈಲವರ್ಣ ಚಿತ್ರ ಉಡುಗೊರೆ
ಪ್ರಾಜೆಕ್ಟ್ನ ಅಧಿಕೃತ ಘೋಷಣೆ ವೇಳೆ ನಿರ್ಮಾಪಕ ಭೂಷಣ್ ಕುಮಾರ್ ನಟ ರಿಷಬ್ ಶೆಟ್ಟಿಯವರಿಗೆ ಶಿವಾಜಿ ಮಹಾರಾಜರ ಶತಮಾನದಷ್ಟು ಹಳೆಯ ಅಪರೂಪದ ತೈಲವರ್ಣ ಚಿತ್ರವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಭೂಷಣ್ ಕುಮಾರ್, ‘ರಿಷಬ್ ಶೆಟ್ಟಿಯವರ ಆಕರ್ಷಕ ವ್ಯಕ್ತಿತ್ವ ಮತ್ತು ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬುವ ಅವರ ಅಸಾಧಾರಣ ಸಾಮರ್ಥ್ಯ ಶಿವಾಜಿ ಮಹಾರಾಜರ ಶೌರ್ಯವನ್ನು ತೆರೆಗೆ ತರಲು ಅತ್ಯಂತ ಸೂಕ್ತವಾಗಿದೆ’ ಎಂದಿದ್ದಾರೆ.
ಸಂದೀಪ್ ಸಿಂಗ್ ನಿರ್ದೇಶನ ಮಾಡುತ್ತಿದ್ದು, ರಿಷಬ್ ಶೆಟ್ಟಿ ಜೊತೆಗೆ ಶಿವ್ ಚನಾನಾ ಹಾಗೂ ಕಬೀರ್ ಸದಾನಂದ್ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.


