ರಿಷಬ್‌ ಶೆಟ್ಟಿ ಬಹುನಿರೀಕ್ಷೆಯ ಸಿನಿಮಾ ‘ಜೈ ಹನುಮಾನ್‌’ ಆನೆಗುಂದಿಯ ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿದೆ. ಆಂಜನೇಯನ ಜನ್ಮಸ್ಥಳ ಎನ್ನಲಾಗುವ ಈ ಬೆಟ್ಟದಲ್ಲಿ ಶಾಸ್ತ್ರೋಕ್ತವಾಗಿ ಸಿನಿಮಾದ ಮುಹೂರ್ತ ನಡೆಯಿತು

ಸಿನಿವಾರ್ತೆ

ರಿಷಬ್‌ ಶೆಟ್ಟಿ ಬಹುನಿರೀಕ್ಷೆಯ ಸಿನಿಮಾ ‘ಜೈ ಹನುಮಾನ್‌’ ಆನೆಗುಂದಿಯ ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿದೆ. ಆಂಜನೇಯನ ಜನ್ಮಸ್ಥಳ ಎನ್ನಲಾಗುವ ಈ ಬೆಟ್ಟದಲ್ಲಿ ಶಾಸ್ತ್ರೋಕ್ತವಾಗಿ ಸಿನಿಮಾದ ಮುಹೂರ್ತ ನಡೆಯಿತು. ಟೀ ಸಿರೀಸ್‌ ಮುಖ್ಯಸ್ಥ ಭೂಷಣ್‌ ಕುಮಾರ್‌ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರೆ, ವಿತರಕ ಅನಿಲ್‌ ಥಡಾನಿ ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಮುಹೂರ್ತ ಸಮಾರಂಭ

ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ, ನಿರ್ದೇಶಕ‌ ಪ್ರಶಾಂತ್ ವರ್ಮಾ, ನಿರ್ಮಾಪಕರಾದ ನವೀನ್ ಯೆರ್ನೇನಿ ಹಾಗೂ ವೈ.ರವಿ ಶಂಕರ್‌, ನಟ ತೇಜಾ ಸಜ್ಜಾ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.‌

ಎರಡು ವರ್ಷಗಳ ಹಿಂದೆ ತೆರೆಕಂಡ ಸೂಪರ್‌ ಹಿಟ್‌ ಸಿನಿಮಾ ‘ಹನುಮಾನ್‌’ ನ ಮುಂದುವರಿದ ಭಾಗ ಇದಾಗಿದ್ದು, ಇದರಲ್ಲಿ ರಿಷಬ್‌ ಶೆಟ್ಟಿ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್‌ ಈ ಚಿತ್ರ ನಿರ್ಮಾಣ ಮಾಡುತ್ತಿದೆ.

ರಾವಣನ ಪಾತ್ರದಲ್ಲಿ ‘ಬಾಹುಬಲಿ’ ಚಿತ್ರದ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ನಟಿಸಲಿದ್ದಾರೆ ಎನ್ನಲಾಗಿದೆ.

ಆಸ್ಕರ್‌ ವಿಜೇತ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ಪ್ರಿ-ಪ್ರೊಡಕ್ಷನ್‌ ಕೆಲಸ ಮುಗಿದಿದ್ದು, ಏಪ್ರಿಲ್‌ ತಿಂಗಳಿನಿಂದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ.