ಬೆಂಗಳೂರು : ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ್‌ ಕುಲಕರ್ಣಿ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅಧಿಕೃತ ಅಧಿಸೂಚನೆ

ಈ ಸಂಬಂಧ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಶನಿವಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. ಈ ಮುಖಾಂತರ ವಿಧಾನಸಭೆಯ ಒಂದು ಸ್ಥಾನ ಖಾಲಿಯಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದಾರೆ.

ವಿನಯ್‌ ಕಲುಕರ್ಣಿ ಅವರನ್ನು ದೋಷಿ ಎಂದು ನಿರ್ಧರಿಸಿ ಏ.15ರಂದು ಶಿಕ್ಷೆ ಪ್ರಕಟ

ನಗರದ 82ನೇ ಸಿಸಿಎಚ್‌(ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ನ್ಯಾಯಾಲಯವು ಕೊಲೆ ಪ್ರಕರಣ ಸಂಬಂಧ ವಿನಯ್‌ ಕಲುಕರ್ಣಿ ಅವರನ್ನು ದೋಷಿ ಎಂದು ನಿರ್ಧರಿಸಿ ಏ.15ರಂದು ಶಿಕ್ಷೆ ಪ್ರಕಟಿಸಿದೆ. ಶಿಕ್ಷೆ ಪ್ರಕಟವಾದ ದಿನದಿಂದಲೇ ವಿನಯ್‌ ಕುಲಕರ್ಣಿ ಅವರು ವಿಧಾನಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ.


ಈ ಶಿಕ್ಷೆಗೆ ನ್ಯಾಯಾಲಯ ತಡೆಯಾಜ್ಞೆ ನೀಡದಿದ್ದಲ್ಲಿ 1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್‌ 8 ಮತ್ತು ಸಂವಿಧಾನದ ಸೆಕ್ಷನ್‌ 191(1) (ಇ) ಪ್ರಕಾರ ಈ ಅನರ್ಹತೆ ವಿನಯ್‌ ಕುಲಕರ್ಣಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಆರು ವರ್ಷಗಳ ಅವಧಿಗೆ ಮುಂದುವರೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.