ಕನ್ನಡಪ್ರಭ ವಾರ್ತೆ ಚೇಳೂರು ತಾಲೂಕಿನ ನಾರೆಮದ್ದೆಪಲ್ಲಿ ಗ್ರಾಪಂ ವ್ಯಾಪ್ತಿಯ ರೇಚನಾಯಕನಹಳ್ಳಿ ಹಾಗೂ ಕಮಟಂಪಲ್ಲಿ ಗ್ರಾಮದ ಮಧ್ಯೆ ಮುಖ್ಯರಸ್ತೆ ಪಕ್ಕದಲ್ಲಿ ಉದ್ದಕ್ಕೂ ಕಾಲುವೆ ಗುಂಡಿ ತೆಗೆದಿದ್ದು ಇದು ಪ್ರಯಾಣಿಕರ ಜೀವಕ್ಕೇ ಅಪಾಯ ಉಂಟುಮಾಡುವ ಸಾಧ್ಯತೆ ಇದೆ.
ರಸ್ತೆಯು ಕಿರಿದಾಗಿದ್ದು ಗುಂಡಿಗೆ ವಾಹನಗಳು ಬಿದ್ದು ಅಫಘಾತಗಳಾಗುವ ಸಂಭವ ಹೆಚ್ಚು. ರಸ್ತೆ ಬದಿಯಲ್ಲಿಯೇ ಗುಂಡಿ ತೊಡಿದ್ದು, ಮಣ್ಣಿನ ರಾಶಿಯನ್ನು ರಸ್ತೆಗೆ ಸುರಿಯಲಾಗಿದೆ. ಇದರಿಂದ ರಸ್ತೆಯ ಎರಡು ಕಡೆಯಿಂದ ಒಂದೇ ಸಮಯದಲ್ಲಿ ಬಸ್ಸು ಹಾಗೂ ದ್ವಿಚಕ್ರ ವಾಹನ ಬಂದರೂ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಒಂದು ವೇಳೆ ಎರಡು ಕಡೆ ದೊಡ್ಡ ವಾಹನಗಳು ಬಂದಲ್ಲಿ ಸುಮಾರು ಒಂದು ಕಿಲೋಮೀಟರ್ ದೂರದಲ್ಲೇ ನಿಲ್ಲಬೇಕು ಇಲ್ಲವಾದಲ್ಲಿ ವಾಹನಗಳು ಹಿಂದೆ ಮುಂದೆ ಹೋಗದೆ ಪರದಾಡಬೇಕು.ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರಸ್ತೆಯ ಬದಿಯಲ್ಲಿ ತೊಡಲಾದ ಗುಂಡಿಗಳನ್ನು ಮುಚ್ಚಿಸಿ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಿಡಬ್ಲ್ಯುಡಿಯಿಂದ ಕ್ರಮಈ ಕುರಿತು ಪ್ರತಿಕ್ರಿಸಿದ ಲೋಕೋಪಯೋಗಿ ಇಲಾಖೆಯ ಎಇ ಪ್ರದೀಪ್ ಅವರು, ರಸ್ತೆಯ ಪಕ್ಕದಲ್ಲಿ ಬಿಎಸ್ಎನ್ಎಲ್ ಕೇಬಲ್ ವೈರ್ ಅಳವಡಿಸಲು ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ರಸ್ತೆಯ ಉದ್ದಕ್ಕೂ ಕಾಲುವೆ ಗುಂಡಿ ತೆಗೆದಿದ್ದು ಗುತ್ತಿಗೆದಾರ ವಿರುದ್ಧ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಪಟ್ಟ ಗುತ್ತಿಗೆದಾರರಿಗೆ ರಸ್ತೆಯ ಗುಂಡಿ ಮುಚ್ಚಿಸಲು ಸೂಚನೆ ನೀಡಲಾಗುವುದು. ಒಂದು ವೇಳೆ ಅವರು ಮುಚ್ಚಿಸದಿದ್ದರೆ ಜೆಸಿಬಿ ಮೂಲಕ ಗುಂಡಿಯನ್ನು ಮುಚ್ಚಿಸಲಾಗುವುದು ಎಂದರು.