ಕನ್ನಡಪ್ರಭ ವಾರ್ತೆ ಪಾಂಡವಪುರ
ಕೋಳಿ ತುಂಬುವ ವೇಳೆ ತೂಕದಲ್ಲಿ ಮೋಸ ಮಾಡಿದ ಎನ್.ಆರ್.ಚಿಕನ್ ಕಂಪನಿ ಕೆಲಸಗಾರರನ್ನು ಕೋಳಿ ಫಾರಂ ಮಾಲೀಕ ಹಿಡಿದು ಕಂಬಕ್ಕೆ ಕಟ್ಟಿದ ಘಟನೆ ತಾಲೂಕಿನ ಚಿಕ್ಕಬ್ಯಾಡರಹಳ್ಳಿಯಲ್ಲಿ ಮಂಗಳವಾರ ನಡೆದಿದೆ.ಮೈಸೂರು ಮೂಲದ ಎನ್‌ಆರ್ ಕಂಪನಿ ಕೆಲಸಗಾರ ಲಕ್ಷಣ್ ತೂಕದಲ್ಲಿ ಮೋಸಮಾಡಿ ಸಿಕ್ಕಿಬಿದ್ದಿರುವ ವ್ಯಕ್ತಿ. ಗ್ರಾಮದ ರೈತ ಹನುಮಂತೇಗೌಡರ ಕೋಳಿ ಫಾರಂನಲ್ಲಿ ಆಟೋಗೆ ಕೋಳಿ ತುಂಬುವಾಗ ಸಿಕ್ಕಿಕೊಂಡಿದ್ದಾನೆ. ರೊಚ್ಚಿಗೆದ್ದ ಕೋಳಿ ಫಾರಂ ಮಾಲೀಕರು ವಂಚಕ ಲಕ್ಷಣ್‌ನನ್ನು ಹಿಡಿದು ಮರಕ್ಕೆ ಕಟ್ಟಿದ್ದಾರೆ.
ಮೈಸೂರು ಮೂಲದ ಎನ್‌ಆರ್ ಕಂಪನಿಯಿಂದ ಕೋಳಿ ಮರಿಗಳನ್ನು ಪಡೆದು ಸಾಕುತ್ತಿದ್ದ ಮಾಲೀಕ ಹನುವಂತೇಗೌಡ ಕೋಳಿ ದಪ್ಪ ಆದ ಬಳಿಕ ಮತ್ತೆ ಎನ್‌ಆರ್ ಕಂಪನಿಯವರಿಗೆ ಕೋಳಿ ನೀಡುತ್ತಿದ್ದರು. ಅದೇ ರೀತಿ ಎನ್‌ಆರ್ ಕಂಪನಿಯವರು ಸೂಚನೆಯ ಮೇರೆಗೆ ಮೈಸೂರು ಮೂಲಕ ಲಕ್ಷಣ್ ಎಂಬಾತನಿಗೆ ಕಳೆದ ಮೂರು ದಿನಗಳಿಂದ ಕೋಳಿ ತುಂಬಿದ್ದಾರೆ.ಇಷ್ಟು ದಿನ ಒಂದು ಕೋಳಿ 2.200 ಮತ್ತು 2.250 ಕೆಜಿ ತೂಕ ಬರುತ್ತಿದ್ದ ಕೋಳಿಗಳು ಲಕ್ಷಣ್ ತುಂಬುವಾಗ ಕೇವಲ 1.900, 1.950 ಕೆಜಿ ತೂಕ ಬಂದಿದೆ. ಅನುಮಾನಗೊಂಡ ಕೋಳಿ ಫಾರಂ ಮಾಲೀಕ ಹನುಮಂತೇಗೌಡ ಮೂರು ದಿನದ ಬಳಿಕ ಮೂರು ಬಾಕ್ಸ್ ಕೋಳಿ ತುಂಬುವರೆಗೂ ಸುಮ್ಮನಿದ್ದು ಬಳಿಕ ತೂಕ ಮಾಡುವುದನ್ನು ನಿಲ್ಲಿಸಿದ್ದಾನೆ.
ಬಳಿಕ ಆಟೋಕ್ಕೆ ತುಂಬಿದ್ದ ಕೋಳಿ ಬಾಕ್ಸ್‌ಗಳನ್ನು ಕೆಳಗೆ ಇಳಿಸಿ ಮತ್ತೆ ತೂಕ ಮಾಡಿದಾಗ ಒಂದು ಬಾಕ್ಸ್‌ಗೆ 4 ರಿಂದ 5 ಕೆಜಿ ತೂಕ ವ್ಯತ್ಯಾಸ ಕಂಡು ಬಂದಿದೆ. 10 ಬಾಕ್ಸ್ ಕೋಳಿ ತುಂಬಿದರೆ ಸುಮಾರು 30-40 ಕೆಜಿ ತೂಕ ಕಡಿಮೆಯಾಗಿದೆ.ಇದರಿಂದ ಆಕ್ರೋಶಗೊಂಡ ಕೋಳಿಫಾರಂ ಮಾಲೀಕ ಹನುಮಂತೇಗೌಡ ಲಕ್ಷಣ್‌ನನ್ನು ಹಿಡಿದು ಮರಕ್ಕೆ ಕಟ್ಟಿ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಎನ್‌ಆರ್ ಕಂಪನಿ ಮೇಲಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿ ಸ್ಥಳಕ್ಕೆ ಕರೆಹಿಸಿದ್ದಾರೆ.
ಸ್ಥಳಕ್ಕೆ ಬಂದು ಎನ್‌ಆರ್ ಕಂಪನಿ ಅಧಿಕಾರಿಗಳು ಕೋಳಿತುಂಬಿದ ಆಟೋ ಮಾಲೀಕನ ವಿರುದ್ದ ಆಕ್ರೋಶ ಹೊರಹಾಕಿ ಕೋಳಿ ಫಾರಂ ಮಾಲೀಕರಲ್ಲಿ ಕ್ಷಮೆಯಾಚಿಸಿ ವಂಚಕ ಲಕ್ಷಣ್‌ನಿಂದ ಕೋಳಿ ಫಾರಂ ಮಾಲೀಕನಿಗೆ 15 ಸಾವಿರ ದಂಡಕಟ್ಟುವುದಾಗಿ ತಿಳಿಸಿ ಸ್ಥಳದಿಂದ ತೆರಳಿದ್ದಾರೆ ಎಂದು ಮಾಲೀಕ ಹನುಮಂತೇಗೌಡ ತಿಳಿಸಿದ್ದಾರೆ.ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.