‘ಕೋಮುಲ್ ಕ್ಷೇತ್ರ ಮರುವಿಂಗಡಣೆ ಅವೈಜ್ಞಾನಿಕ’

KannadaprabhaNewsNetwork | Published : Mar 12, 2025 12:48 AM

ಸಾರಾಂಶ

ಕೋಲಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಸ್ವಾಮಿ ರವರು ಷಡ್ಯಂತ್ರ ರೂಪಿಸಿ ಮನ ಬಂದಂತೆ ಕ್ಷೇತ್ರ ವಿಂಗಡಣೆ ಮಾಡಿದ್ದಾರೆ. ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದು ಅಲ್ಲಿ ಕ್ಷೇತ್ರ ವಿಂಗಡಣೆ ಬಗ್ಗೆ ಒಪ್ಪಿಗೆ ಪಡೆಯುವಂತೆ ನ್ಯಾಯಾಲಯ ಆದೇಶ ನೀಡಿದೆ. ಕ್ಷೇತ್ರದ ಡೇರಿ ಅಧ್ಯಕ್ಷರು ಕ್ಷೇತ್ರ ಉಳಿಸುವ ನಿಟ್ಟಿನಲ್ಲಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೋಲಾರ ಹಾಲು ಒಕ್ಕೂಟದ ಕ್ಷೇತ್ರ ಮರು ವಿಂಗಡಣೆಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರದಿಂದ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಹುತ್ತೂರು ಹೋಬಳಿ ಒಳಗೊಂಡಂತೆ ಕೆಲವು ಪ್ರದೇಶಗಳು ಕೋಲಾರ ಮತ್ತು ಕೆಜಿಎಫ್ ವಿಧಾನಸಭಾ ಕ್ಷೇತ್ರಗಳಿಗೆ ಸೇರ್ಪಡೆ ಮಾಡಲಾಗಿದೆ. ಇದನ್ನು ವಿರೋಧಿಸಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಹಾಲು ಡೇರಿ ಸಂಘದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಮಾ.13ರಂದು ನಡೆಯುವ ಒಕ್ಕೂಟದ ಸಾಮಾನ್ಯ ಸರ್ವ ಸದಸ್ಯರ ಸಭೆಯಲ್ಲಿ ಧ್ವನಿ ಎತ್ತಬೇಕೆಂದು ಶಾಸಕ ಎಸ್. ಎನ್ ನಾರಾಯಣಸ್ವಾಮಿ ಮನವಿ ಮಾಡಿದರು.ಪಟ್ಟಣದ ಎಸ್.ಎನ್ ರೆಸಾರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಸ್ವಾಮಿ ರವರು ಷಡ್ಯಂತ್ರ ರೂಪಿಸಿ ಮನ ಬಂದಂತೆ ಕ್ಷೇತ್ರ ವಿಂಗಡಣೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರ ವಿಂಗಡಣೆ ಅವೈಜ್ಞಾನಿಕ

ಅವೈಜ್ಞಾನಿಕವಾಗಿ ಕ್ಷೇತ್ರ ವಿಂಗಡಣೆಯನ್ನು ವಿರೋಧಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ನಮ್ಮ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಕೋಲಾರ ಜಿಲ್ಲೆ ಉಪ ವಿಭಾಗಾಧಿಕಾರಿಗಳು ಹಾಗೂ ಕೆ.ಎಂ.ಎಫ್. ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಕೋಲಾರ ,ಮಾಲೂರು, ಶ್ರೀನಿವಾಸಪುರ, ಮುಳಬಾಗಿಲು , ಬಂಗಾರಪೇಟೆ, ಕೆಜಿಎಫ್ ವಿಧಾನ ಸಭಾ ಕ್ಷೇತ್ರದ ಎಲ್ಲಾ ಡೇರಿ ಅಧ್ಯಕ್ಷರು, ಪ್ರತಿನಿಧಿಗಳ ಸಹಯೋಗದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದು ಅಲ್ಲಿ ಕ್ಷೇತ್ರ ವಿಂಗಡಣೆ ಬಗ್ಗೆ ಒಪ್ಪಿಗೆ ಪಡೆಯುವಂತೆ ಆದೇಶ ನೀಡಿದೆ ಎಂದರು.

ನ್ಯಾಯಾಲಯದ ಆದೇಶದಂತೆ ಉಪ ವಿಭಾಗಾಧಿಕಾರಿ ಮೈತ್ರಿ ರವರು ಕೋಲಾರದ ನಂದಿನಿ ಪ್ಯಾಲೇಸ್ ಸಭಾಂಗಣದಲ್ಲಿ ಮಾ.೧೩ ರಂದು ೬ ವಿಧಾನಸಭಾ ಕ್ಷೇತ್ರದ ಎಲ್ಲಾ ಅಧ್ಯಕ್ಷರು ಮತ್ತು ಪ್ರತಿನಿಧಿಗಳ ಹಾಗೂ ಸರ್ವ ಸದಸ್ಯರ ಸಭೆ ಕರೆದಿದ್ದಾರೆ ಎಂದು ಶಾಸಕರು ಹೇಳಿದರು.

ಕ್ಷೇತ್ರ ಉಳಿಸಿಕೊಳ್ಳಲು ಮನವಿ

ಆದ್ದರಿಂದ ಅಂದು ಕ್ಷೇತ್ರದ ಡೇರಿ ಅಧ್ಯಕ್ಷರು ಕ್ಷೇತ್ರ ಉಳಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಕ್ಷೇತ್ರ ವಿಂಗಡಣೆಯನ್ನು ವಿರೋಧಿಸಬೇಕು ಹಾಗೂ ಕ್ಷೇತ್ರದ ಯಾವ ಪ್ರದೇಶವೂ ಬೇರೆ ಕ್ಷೇತ್ರಗಳಿಗೆ ಹೋಗದಂತೆ ಉಳಿಸಿಕೊಳ್ಳಲು ಒತ್ತಾಯಿಸಿದರಲ್ಲದೆ ಕ್ಷೇತ್ರಕ್ಕೆ ಎರಡು ನಿರ್ದೇಶಕರ ಸ್ಥಾನ ನೀಡಲು ಆಗ್ರಹಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಭೂ ಬ್ಯಾಂಕಿನ ಅಧ್ಯಕ್ಷ ರಘುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಪಾರ್ಥಸಾರಥಿ, ಕೆಯುಡಿಎ ಅಧ್ಯಕ್ಷ ಗೋಪಾಲ ರೆಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದು ಕುಮಾರ್,ಪಿ. ಎಲ್. ಡಿ ಬ್ಯಾಂಕ್ ನಿರ್ದೇಶಕ ಹೆಚ್. ಕೆ ನಾರಾಯಣಸ್ವಾಮಿ ಇದ್ದರು.

Share this article