ಕನ್ನಡಪ್ರಭ ವಾರ್ತೆ ಅರಸೀಕೆರೆ
ತೀರ್ಥಹಳ್ಳಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದನ್ನು ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಕಾರ್ಯಕಾರಿ ಸಂಕೇತ ಸಭೆ ನಡೆಸಿ ಘಟನೆಯನ್ನು ಖಂಡಿಸಿತಲ್ಲದೆ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೈಗೊಂಡಿತು.ನಗರದ ಶ್ರೀರಾಮ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡು, ತೀರ್ಥಹಳ್ಳಿಯ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯೊಬ್ಬನ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆದಿರುವ ಹೀನಾಯ ಘಟನೆ ನಡೆದಿದ್ದು, ಇದು ನಮ್ಮ ಸಮಾಜದ ವಿರುದ್ಧ ಎಸಗಿರುವ ತೀವ್ರ ಸ್ವರೂಪದ ಅವಮಾನವಾಗಿದೆ ಎಂದರು.
ಕೇವಲ ಬ್ರಾಹ್ಮಣರನ್ನು ಗುರಿಯಾಗಿಸಿ ಅಪಮಾನಿಸುವ ಷಡ್ಯಂತ್ರದ ಒಂದು ಭಾಗವಾಗಿರುವ ಇದು, ಶಾಂತಿಪ್ರಿಯರಾಗಿ ಸದಾ ಸಮಾಜದ ಹಿತ ಬಯಸುವ ಬ್ರಾಹ್ಮಣ ಸಮಾಜವನ್ನು ದುರ್ಬಲರೆಂದು ಭಾವಿಸಿ ದೌರ್ಜನ್ಯವೆಸಗುವ ಕೀಳು ಮನಸ್ಥಿತಿಯ ರಾಜಕೀಯ ವ್ಯಕ್ತಿಗಳ ತಾಳಕ್ಕೆ ಕುಣಿಯುವ ಅಧಿಕಾರಶಾಹಿಯ ದುರ್ವರ್ತನೆಗೆ ಹಿಡಿದ ಕನ್ನಡಿಯಾಗಿದೆ. ಇಂತಹ ಘಟನೆ ಈಗೀಗ ಹೆಚ್ಚಾಗಿ ಕಂಡು ಬರುತ್ತಿರುವುದು ತೀವ್ರ ವಿಷಾದನೀಯ. ಸಂವಿಧಾನವು ನೀಡಿರುವ ನಮ್ಮ ಧರ್ಮವನ್ನು ಪಾಲಿಸುವ ಮೂಲಭೂತ ಹಕ್ಕು ನಮ್ಮದಾಗಿದ್ದು ಇದನ್ನು ಮೊಟಕುಗೊಳಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಜನಿವಾರ ಕತ್ತರಿಸುವ ಅಧಿಕಾರ ಇವರಿಗೆ ಎಲ್ಲಿಂದ ಬಂತು? ಯಾವ ಕಾನೂನಿನನ್ವಯ ಇದು ಸಮರ್ಥನೀಯ ಎಂದು ಪ್ರಶ್ನಿಸಿದರು.ನಮ್ಮ ಸಮಾಜದವರ ವಿರುದ್ಧ ಒಂದಲ್ಲ ಒಂದು ರೀತಿಯ ಕಿರುಕುಳ ನೀಡುತ್ತಿರುವುದು ತೀವ್ರ ಖಂಡನಾರ್ಹ. ಈ ಘಟನೆಗೆ ಸಂಬಂಧಿಸಿದವರನ್ನು ಕೂಡಲೇ ಬಂಧಿಸಿ ಮುಂದಿನ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿತು.
ಬ್ರಾಹ್ಮಣ ಸಮಾಜದ ಮೇಲೆ ಪದೇ ಪದೆ ದೌರ್ಜನ್ಯ ಎಸಗಲಾಗುತ್ತಿದೆ. ರಾಜಕೀಯಪ್ರೇರಿತರಾಗಿ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರುವುದು ವಿಷಾದನೀಯ. ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ತಾಳಕ್ಕೆ ತಕ್ಕಂತೆ ಕುಣಿಯುವುದು ಬಿಡಬೇಕು. ಇಂತಹ ಘಟನೆಗಳು ಮರುಕಳಿಸಿದಂತೆ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಭೆ ಒತ್ತಾಯಿಸಿತು. ಧಾರ್ಮಿಕತೆಗೆ ಧಕ್ಕೆ ತರುವಂತ ಅನಗತ್ಯ ಕ್ರಮಗಳನ್ನು ಅಧಿಕಾರ ವರ್ಗ ಕೈಗೊಳ್ಳುತ್ತಿರುವುದು ನಮ್ಮ ಸಮಾಜದ ತಾಳ್ಮೆಯನ್ನು ಪರೀಕ್ಷಿಸುವಂತಿದೆ ಇಂದು ಸಭೆ ವಿಷಾದ ವ್ಯಕ್ತಪಡಿಸಿತು.ಸಂಘದ ಉಪಾಧ್ಯಕ್ಷ ನ್ಯಾಯವಾದಿ ಹಿರಿಯಣ್ಣಯ್ಯ ಕಾರ್ಯದರ್ಶಿ ಸುಬ್ರಹ್ಮಣ್ಯ, ಖಜಾಂಚಿ ಮೋಹನ್ ಕುಮಾರ್, ನಿರ್ದೇಶಕರಾದ ಅನಂತರಾಮ್, ಯುವಕ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ, ಅಶೋಕ್ ಗೋಪಾಲ್ ಹರೀಶ್, ಗಾಯತ್ರಿ ಪತ್ತಿನ ಸಹಕಾರ ಸಂಘ, ಚಂದ್ರಶೇಖರ ಭಾರತೀ ವಿದ್ಯಾಸಂಸ್ಥೆ, ಸೀತಾ ಮಹಿಳಾ ಸಂಘ, ಯುವಕ ಸಂಘ, ವಿಪ್ರ ನೌಕರರ ಸಂಘ, ಪಾಕ ತಜ್ಞರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.