ಮಹಿಳೆ ಸಹಿತ ಮೂವರಿಂದ ಹನಿಟ್ರ್ಯಾಪ್: ಸಂತ್ರಸ್ತ ಆತ್ಮಹತ್ಯೆಗೆ ಯತ್ನ

KannadaprabhaNewsNetwork | Published : Apr 19, 2025 12:34 AM

ಸಾರಾಂಶ

ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ ಅಕ್ಬರ್ ಸಿದ್ಧಿಕ್ (28) ಹನಿಟ್ರ್ಯಾಪ್ ಭೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಮಾಜ ಸೇವೆ ಸೋಗಿನ ಆಸಿಫ್ ಆಪತ್ಬಾಂಧವ, ರವೂಫ್ ಬೆಂಗರೆ ಮತ್ತು ಮಿನಾಜ್ ಎಂಬವರ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಡ ಯುವತಿಯೋರ್ವಳಿಗೆ ಮದುವೆ ಮಾಡುವ ಉದ್ದೇಶದಲ್ಲಿ ಕ್ರೌಡ್ ಫಂಡಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಮಹಿಳೆಯೋರ್ವಳ ಸಹಿತ ಮೂವರು ಹನಿಟ್ರ್ಯಾಪ್ ಮಾಡಿದ್ದು, ಇದರಿಂದ ನೊಂದ ಸಂತ್ರಸ್ತ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ ಅಕ್ಬರ್ ಸಿದ್ಧಿಕ್ (28) ಹನಿಟ್ರ್ಯಾಪ್ ಭೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಮಾಜ ಸೇವೆ ಸೋಗಿನ ಆಸಿಫ್ ಆಪತ್ಬಾಂಧವ, ರವೂಫ್ ಬೆಂಗರೆ ಮತ್ತು ಮಿನಾಜ್ ಎಂಬವರ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಯುವತಿಯೋರ್ವಳ ಮದುವೆ ಉದ್ದೇಶಕ್ಕಾಗಿ ಅಲ್ ಮದೀನಾ ಟ್ರಸ್ಟ್ ಹೆಸರಿನಲ್ಲಿ ಅಕ್ಬರ್ ಸಿದ್ದಿಕ್ ಹಣ ಸಂಗ್ರಹ ಮಾಡುತ್ತಿದ್ದರು. ಆದರೆ ಹಣ ಹೆಚ್ಚು ಸಂಗ್ರಹವಾಗದೇ ಇದ್ದು, ಮದುವೆಯಾಗುವ ಯುವತಿಯ ಸೋದರಿ ಎಂಬ ಹೆಸರಲ್ಲಿ ಏ. 8ರಂದು ರಾತ್ರಿ ಮಿನಾಜ್ ಹೆಸರಿನ ಮಹಿಳೆ ವಾಟ್ಸಾಪ್ ಕರೆ ಮಾಡಿ ನೀವು ಇಷ್ಟು ಹಣ ಸಂಗ್ರಹ ಮಾಡಿದರೆ ಸಾಲದು. ದೊಡ್ಡ ಮೊತ್ತದ ಹಣ ಸಂಗ್ರಹ ಮಾಡಬೇಕು. ಇದಕ್ಕೆ ಬೇಕಾದರೆ ನಿಮ್ಮ ಜೊತೆಗೆ ಎಲ್ಲದಕ್ಕೂ ಸಹಕರಿಸುತ್ತೇನೆಂದು ಹೇಳಿದ್ದಲ್ಲದೆ, ವಾಟ್ಸಪ್ ಚಾಟಿಂಗ್ ಮತ್ತು ವಿಡಿಯೋ ಕರೆಯನ್ನೂ ಮಾಡಿದ್ದಳು.

ಮರುದಿನ ಆಸಿಫ್ ಆಪತ್ಪಾಂಧವ ಮತ್ತು ರವೂಫ್ ಬೆಂಗರೆ ಮಿನಾಜ್ ಎಂಬ ಮಹಿಳೆಯ ಜೊತೆಗಿನ ಚಾಟಿಂಗ್ ಮತ್ತು ವಿಡಿಯೋ ಕರೆಯ ಸ್ಕ್ರೀನ್ ಶಾಟ್ ಮುಂದಿಟ್ಟು ಅಕ್ಬರ್ ಸಿದ್ದಿಕ್ ಗೆ ಕರೆ ಮಾಡಿದ್ದು, ಮೂರು ಲಕ್ಷ ನಗದು ಮತ್ತು ಮೂರು ಪವನ್ ಚಿನ್ನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಏ. 10ರ ಒಳಗಾಗಿ ಹಣ ಸಂದಾಯ ಮಾಡದಿದ್ದರೆ ಚಾಟಿಂಗ್ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದು, ಇದರಿಂದ ಭೀತಿಗೊಳಗಾದ ಅಕ್ಬರ್ ಸಿದ್ದಿಕ್ ಏ.12 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

Share this article