ಬೀದರ್ : ಒಂದು ಸಮುದಾಯದ ಓಲೈಕೆಗಾಗಿ ರೈತರ ಕಣ್ಣಲ್ಲಿ ನೀರು ಬರುವಂತೆ ಮಾಡುವುದು ಸರಿಯಲ್ಲ. ಅಧಿಕಾರದ ಮದದಿಂದ ರೈತರ ಕಣ್ಣಲ್ಲಿ ನೀರು ಬಂದರೆ ಸರ್ಕಾರಕ್ಕೆ ಶಾಪ ತಟ್ಟುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನುಡಿದರು,
ಅವರು ಬುಧವಾರ ನಗರದ ಗಾಂಧಿಗಂಜ್‌ನಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ನಮ್ಮ ಭೂಮಿ ನಮ್ಮ ಹಕ್ಕು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ವಕ್ಫ್ ಹೆಸರಿನಲ್ಲಿ ಹಿಂದುಗಳನ್ನು ರಸ್ತೆಗೆ ತರುವ ಕೆಲಸವನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ಹೀಗಾಗಿ ರೈತರ ಪರವಾಗಿ ಬೀದಿಗಿಳಿದು ಹೋರಾಟ ಮಾಡುವ ಸಂದರ್ಭ ಬಂದಿದ್ದು, ರಾಜ್ಯದಲ್ಲಿ ಮೂರು ತಂಡಗಳ ಮೂಲಕ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ ಎಂದರು.
ಸಿದ್ದರಾಮಯ್ಯಗೆ ರೈತರ ಮೇಲೆ ಯಾಕಿಷ್ಟು ಸಿಟ್ಟು? ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನಗಳಿಗೆ ವಕ್ಫ್ ನೋಟಿಸ್ ಕೊಡಿಸುತ್ತಿದ್ದಾರೆ. ಸಿದ್ರಾಮಯ್ಯ ನಡವಳಿಕೆ ನೋಡಿದರೆ ಅವರು ಕೇವಲ ಅಲ್ಪಸಂಖ್ಯಾತ ಮತಗಳಿಂದ ಗೆದ್ದಿದ್ದಾರೆ ಎನ್ನುವ ಭಾವನೆಯಲ್ಲಿದ್ದಾರೆ ಎಂದು ವಿಜಯೇಂದ್ರ ಕಿಡಿ ಕಾರಿದರು.ಸಿದ್ರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಲೂಟಿ ಹೊಡೆದಿದ್ದರೂ ಅನುದಾನ ಲೂಟಿ ಆಗಿಲ್ಲ ಎಂದರು.
ಬಿಜೆಪಿ ಹೋರಾ ದ ಬಳಿಕ ಹಗರಣದ ಬಗ್ಗೆ ಸದನದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಒಪ್ಪಿಕೊಂಡರು. ಮುಡಾ ಹಗರಣದ ವಿರುದ್ಧ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಿದ್ದೇವೆ ಆಗಲೂ ಕೂಡ ಅಕ್ರಮ ನಡೆದಿಲ್ಲ ಎಂದರಾದರೆ, ಸೈಟು ಬದಲಿಗೆ 52 ಕೋಟಿ ರು. ಕೊಡಿ ಎಂದು ಕೇಳಿದ್ದು ಯಾರು ಎಂದು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.
ಬಿಜೆಪಿ ಹೋರಾಟದ ಬಳಿಕ ಸಿದ್ರಾಮಯ್ಯ ಗಾಬರಿಯಾಗಿ ಎಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರುತ್ತೋ ಎಂಬ ಭಯದಿಂದ ಅವರ ಧರ್ಮಪತ್ನಿ ಅವರಿಂದ ಒಂದು ರುಪಾಯಿ ಕೂಡ ಕೇಳದೇ ವಾಪಸ್ ಕೊಟ್ಟರು. ತಪ್ಪೇ ಮಾಡಿಲ್ಲ ಅಂದರೆ ಸೈಟ್ ವಾಪಸ್ ಕೊಟ್ಟಿದ್ದೇಕೆ ? ಎಂದು ಪ್ರಶ್ನಿಸಿ, ಬಿಜೆಪಿ ಹೋರಾಟದ ಫಲದಿಂದಾಗಿ ಮುಡಾಗೆ ನಿವೇಶನಗಳು ವಾಪಸ್ ಬಂದವು ಎಂದರು.
ಭ್ರಷ್ಟ, ರೈತ ವಿರೋಧಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತ ಜನರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಬಿಜೆಪಿ ಮಾಡ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರ ಆದೇಶ ಮೇರೆಗೆ ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಜಮೀರ್ ಅಹ್ಮದ್ ಪ್ರವಾಸ ಮಾಡಿ, ಜಿಲ್ಲಾಧಿಕಾರಿಗಳ ಸಭೆ ನಡೆಸಿ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಹೆಸರು ಸೇರಿಸಿದ್ದರು. ಅಲ್ಲದೇ, ರೈತರಿಗೆ ನೋಟೀಸ್‌ಗಳನ್ನು ಕೊಟ್ಟರು, ಹೀಗಾಗಿ ರಾಜ್ಯದ ಸಾವಿರಾರು ರೈತರನ್ನ ಒಕ್ಕಲೆಬ್ಬಿಸಿದ್ದರು ಎಂದು ಆರೋಪಿಸಿದರು.ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವತ ನಾರಾಯಣ, ಮಾಜಿ ಸಚಿವರಾದ ಭೈರತಿ ಬಸವರಾಜ, ಶ್ರೀರಾಮಲು, ಪ್ರಭು ಚವ್ಹಾಣ್, ಎಂ.ಪಿ.ರೇಣುಕಾ ಚಾರ್ಯ, ಮುರುಗೇಶ ನಿರಾಣಿ, ಶಾಸಕರಾದ ಪಿ.ರಾಜೀವ್, ಡಾ.ಸಿದ್ದು ಪಾಟೀಲ್, ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಎಂಜಿ ಮೂಳೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ರಘುನಾಥರಾವ್ ಮಲ್ಕಾಪೂರೆ, ಬಾಬು ವಾಲಿ, ವಿಜಯಕುಮಾರ ಪಾಟೀಲ್ ಗಾದಗಿ, ಶಶಿ ಹೊಸಳ್ಳಿ ಹಾಗೂ ಗುರುನಾಥ ರಾಜಗೀರಾ, ಸೇರಿದಂತೆ ಇನ್ನಿತರ ಮುಖಂಡರು ಇದ್ದರು.
ವಿಜಯೇಂದ್ರ ಎದುರು ಕಾರಂಜಾ ಸಂತ್ರಸ್ತರ ಅರೆಬೆತ್ತಲೆ ಪ್ರತಿಭಟನೆ
ಬೀದರ್: ಸುಮಾರು ಎರಡೂವರೆ ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿರುವ ಕಾರಂಜಾ ಸಂತ್ರಸ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ವಕ್ಫ್ ವಿರುದ್ಧದ ಪಾದಯಾತ್ರೆ ಪ್ರತಿಭಟನೆಯ ಸಂದರ್ಭ ಅರಬೆತ್ತಲೆ ಮೆರವಣಿಗೆ ನಡೆಸಿ ಗಮನ ಸೆಳೆದರು.ಸಂತ್ರಸ್ತರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಎದುರು ಅಳಲು ತೋಡಿಕೊಂಡ ಸಂತ್ರಸ್ತರು, 881 ದಿನಗಳಿಂದ ಹೋರಾಟ ಮಾಡುತ್ತ ಇದ್ದರೂ ನ್ಯಾಯ ದೊರೆಯುತ್ತಿಲ್ಲ. ರಾಜ್ಯೋತ್ಸವದ ಸಂದರ್ಭದಲ್ಲಿ ಮನವಿ ಕೊಡಲು ಹೋದರೆ, ನಮ್ಮ ಮೇಲೆ ಕೇಸ್ ಹಾಕ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ, ಸದನದಲ್ಲಿ ಈ ಕುರಿತು ಚರ್ಚೆ ಮಾಡುತ್ತೇನೆ ಎಂದು ಬಿ.ವೈ.ವಿಜಯೇಂದ್ರ ಭರವಸೆ ನೀಡಿದರು.
ಅರಣ್ಯ ಕಬಳಿಸಿದ ಸಚಿವ ಖಂಡ್ರೆ ಸಹೋದರ: ಖೂಬಾ ಆರೋಪ
ಬೀದರ್: ರಾಜ್ಯದ ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ಭ್ರಷ್ಟಾಚಾರ, ರೈತರ ಜಮೀನು ಕಸಿದುಕೊಳ್ಳುವುದರಲ್ಲಿ ತೊಡಗಿದ್ದಾರೆ ಅದರಂತೆ ಬೀದರ್‌ನ ಈಶ್ವರ್ ಖಂಡ್ರೆ ಅವರ ಸಹೋದರ ಅರಣ್ಯ ಭೂಮಿ ಕಬಳಿಸಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.ಅವರು ನಗರದಲ್ಲಿ ನಡೆದ ಬಿಜೆಪಿಯ ವಕ್ಫ್ ವಿರುದ್ಧದ ಸಮಾವೇಶದಲ್ಲಿ ಮಾತನಾಡಿ, ಈ ಬಗ್ಗೆ ರಾಜ್ಯ ಸರ್ಕಾರ, ರಾಜ್ಯಪಾಲರಿಗೆ ದೂರು ನೀಡಲಾಗಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಅರಣ್ಯ ಸಚಿವರಾಗಿರುವುದರಿಂದ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಅರಣ್ಯ ಭೂಮಿ ಕಬಳಿಕೆ ಆಗಿಲ್ಲ ಎಂದು ಅಧಿಕಾರಿಗಳಿಂದ ಮೂಕರ್ಜಿ ಬರೆಸಿದ್ದಾರೆ. ಸುಮಾರು 57 ಎಕರೆ ಅರಣ್ಯ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿ ಈ ಬಗ್ಗೆ ಜಿಲ್ಲೆಯ ನಾಲ್ವರೂ ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಸಲಹೆಯಿತ್ತರು.ಉಳ್ಳವರಿಗೆ ಮನೆ ಸಿಗ್ತಿದೆ, ಬಡವರಿಗೆ ಮನೆ ಸಿಗ್ತಿಲ್ಲ. ಬೀದರ್ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಬಿ.ವೈ. ವಿಜಯೇಂದ್ರ ಅವರಿಗೆ ಖೂಬಾ ಕೋರಿದರು.
1974ರ ವಕ್ಫ್ ಅಧಿಸೂಚನೆ ರದ್ದುಗೊಳಿಸಿ
ಬೀದರ್: ವಕ್ಫ್ ಮಂಡಳಿ ರಚನೆ ಕುರಿತಂತೆ 1974ರ ಗೆಜೆಟ್ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಹಾಗೂ ಕಣ್ಣೊರೆಸುವ ತಂತ್ರವನ್ನು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದ ತಂಡ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.ನಗರದಲ್ಲಿ ಬುಧವಾರ ಇಲ್ಲಿನ ಗಾಂಧಿಗಂಜ್‌ನಲ್ಲಿಯ ಗಾಂಧಿಚೌಕ್‌ನಲ್ಲಿ ನಡೆದ ಬಹಿರಂಗ ಸಭೆಯ ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿತು.
ರಾಜ್ಯ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರ, ಮಠ, ಮಂದಿರಗಳಷ್ಟೇ ಅಲ್ಲದೇ ಸರ್ಕಾರದ ಅಲ್ಪಸಂಖ್ಯಾತರ ಆಸ್ತಿಗಳನ್ನು ರಾತೋರಾತ್ರಿ ತನ್ನ ವಶಕ್ಕೆ ಪಡೆಯುತ್ತಿದೆ. ಸಾವಿರಾರು ಎಕರೆ ಕೃಷಿ ಭೂಮಿಯನ್ನು ವಕ್ಫ್ ಆಸ್ತಿ ಎಂದು ನೋಂದಾಯಿಸಲಾಗುತ್ತಿದೆ. ಜನರ ಬದುಕನ್ನು ಬೀದಿಗೆ ತಳ್ಳುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ. ವಕ್ಫ್ ಮಂಡಳಿಯ ಘೋರ ಅನ್ಯಾಯ ಖಂಡಿಸಿ ಹಾಗೂ ಜನರಿಗೆ ನ್ಯಾಯ ಒದಗಿಸಲು ಬಿಜೆಪಿ ನಿರಂತರ ಹೋರಾಟ ನಡೆಸಲಿದೆ. ವಕ್ಫ್ ಅನ್ಯಾಯಕ್ಕೆ ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.ಎತ್ತಿನ ಬಂಡಿಗಳ ಮೇಲೆ ಆಗಮಿಸಿ ಪ್ರತಿಭಟನೆ
ಬೀದರ್: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಬುಧವಾರ ‘ವಕ್ಫ್ ಹಠಾವೋ ದೇಶ ಬಚಾವೋ’ ಪ್ರತಿಭಟನಾ ರ‍್ಯಾಲಿ ನಗರದ ಗಾಂಧಿ ಗಂಜ್‌ನಲ್ಲಿರುವ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಎತ್ತಿನ ಬಂಡಿಗಳ ಮೇಲೆ ಆಗಮಿಸಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಹಾಗೂ ಸಚಿವ ಜಮೀರ್ ಅವರ ರಾಜೀನಾಮೆಗೆ ಆಗ್ರಹಿಸಿ ಭಿತ್ತಿ ಪತ್ರಗಳ ಪ್ರದರ್ಶನ ಮಾಡಲಾಯಿತು. ನಗರದ ಭಗತ್ ಸಿಂಗ್ ವೃತ್ತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಇನ್ನಿತರ ಮುಖಂಡರಿಗೆ 5-6 ರೈತರ ಎತ್ತಿನ ಬಂಡಿಗಳ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ, ಬಿ.ವೈ.ವಿಜಯೇಂದ್ರ ಮತ್ತಿತರರು ಎತ್ತಿನ ಬಂಡಿ ಹತ್ತಿದ್ದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಸಿ.ಎಸ್. ಅಶ್ವತನಾರಾಯಣ, ಮಾಜಿ ಸಚಿವರಾದ ಶ್ರೀರಾಮಲು, ಭೈರತಿ ಬಸವರಾಜ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್, ಶರಣು ತಲ್ಲೆಕೇರಿ, ರುದ್ರೇಶ ಹಾಗೂ ಜಿಲ್ಲೆಯ ಬಿಜೆಪಿಯ ಎಲ್ಲಾ ಶಾಸಕರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರು ಅಲ್ಲದೇ ಚಟ್ನಳ್ಳಿ ಹಾಗೂ ಧರ್ಮಾಪೂರ ಗ್ರಾಮದ ಜನರು ಹಾಗೂ ರೈತರು, ಮಹಿಳೆಯರು ಭಾಗವಹಿಸಿದ್ದರು.
ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರ ಬಂದ್ ಮಾಡಲಾಗಿತ್ತು. ಪೊಲೀಸ್ ಬಂದೋಬಸ್ತ್ ಮಾಡಲಾ ಯಿತು. ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಗೇಟ್ ಹೊರಗೆ ಅಪರ ಜಿಲ್ಲಾಧಿಕಾರಿಗಳು ಆಗಮಿಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ಸ್ವೀಕರಿಸಿದರು.
ಯತ್ನಾಳ್‌ರ ಕುರಿತೇ ನಿತ್ಯ ಮಾತಾಡುವ ಅವಶ್ಯ ಇಲ್ಲ: ಬಿವೈ ವಿಜಯೇಂದ್ರಬೀದರ್: ಯತ್ನಾಳ್ ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಪ್ರತಿ ನಿತ್ಯ ಯತ್ನಾಳ್ ಅವರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಈಗಾಗಲೇ ಬಿಜೆಪಿ ಪಕ್ಷದಿಂದ ನೋಟಿಸ್ ಕೊಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.
ಅವರು ಬೀದರ್‌ಗೆ ಭೇಟಿ ನೀಡಿದ್ದ ಸಂದರ್ಭ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿ, ಇವತ್ತು ವಕ್ಫ್ ವಿರುದ್ಧ ಹೋರಾಟ ಮಾಡಲು ಬಂದಿದ್ದೇವೆ ಬೇರೆ ವಿಚಾರ ಎಂದು ಯತ್ನಾಳ್ ಕುರಿತಾಗಿ ಹೆಚ್ಚಿನ ಪ್ರತಿಕ್ರಿಯೆಗೆ ನಿರಾಕರಿಸಿದರಲ್ಲದೆ ಯತ್ನಾಳ್ ಅವರು ವಿಜಯೇಂದ್ರ ವಿರುದ್ಧ 6 ಪುಟಗಳ ಆರೋಪಗಳ ವರದಿ ನೀಡಿದ್ದಾರೆ ಎಂಬ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿ ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ, ಇನ್ನು ಸಂಸದರ ಸಭೆಯ ಬಗ್ಗೆ ನನಗೆ ಗೊತ್ತಿಲ್ಲ ಎಂದರು.