ರವಿ ಕಾಂಬಳೆ
ಸಂವಿಧಾನ ಪೀಠಿಕೆ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಇದಕ್ಕಾಗಿ ಸ್ತಬ್ಧ ಚಿತ್ರಗಳನ್ನೊಳಗೊಂಡ ವಿಶೇಷ ರಥಗಳೆರಡು ಏಕಕಾಲಕ್ಕೆ ಎರಡು ಮಾರ್ಗದಲ್ಲಿ ಸಂಚಾರ ಶುರು ಮಾಡಿವೆ.
ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ತಬ್ದಚಿತ್ರದ ಮೆರವಣಿಗೆಗೆ ಚಾಲನೆ ನೀಡಿದ್ದಾರೆ.ಸ್ತಬ್ದ ಚಿತ್ರಗಳ ನಿರ್ಮಾಣ, ಮೆರವಣಿಗೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಖರ್ಚುಗಳಿಗೆ ಸಮಾಜ ಕಲ್ಯಾಣ ಇಲಾಖೆಗೆ ₹45 ಲಕ್ಷ ಬಿಡುಗಡೆ ಮಾಡಿದೆ. ಸ್ಥಳೀಯ ಆಡಳಿತಗಳೂ ಹೆಚ್ಚುವರಿ ಖರ್ಚುಗಳನ್ನು ಭರಿಸಲಿವೆ. ಫೆ.23ರವರೆಗೆ ಜಿಲ್ಲೆಯ ಎಲ್ಲ 500 ಗ್ರಾ.ಪಂಗಳ ಹಾಗೂ 38 ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 538 ಆಡಳಿತ ಕಚೇರಿಗಳಿಗೆ ಮೆರವಣಿಗೆ ಸಾಗಲಿದೆ. ನಿತ್ಯ 10ಕ್ಕೂ ಹೆಚ್ಚು ಹಳ್ಳಿಗಳಿಗೆ ತೆರಳಿ, ವೇದಿಕೆ ಕಾರ್ಯಕ್ರಮ ನಡೆಸುವ ಗುರಿ ಹೊಂದಿದೆ.
ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧ ಚಿತ್ರದ ಮೆರವಣಿಗೆ ಆಯಾ ಗ್ರಾಪಂನಲ್ಲಿ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ಸ್ವಯಂ ಸೇವಾ ಸಂಘಟನೆಗಳು, ಸ್ಥಳೀಯ ಸಂಘ-ಸಂಸ್ಥೆಗಳು, ಒಕ್ಕೂಟದ ಸದಸ್ಯರು, ಮುಖಂಡರು ಸ್ವಾಗತಿಸಲಿದ್ದಾರೆ.
ಸ್ತಬ್ಧಚಿತ್ರದಲ್ಲಿ ಏನಿದೆ? :
ಸಂವಿಧಾನ ಜಾಗೃತಿ ಜಾಥಾದ ಯಶಸ್ವಿಗೆ ಸಮಿತಿಗಳನ್ನು ರಚಿಸಲಾಗಿದೆ. ಭವ್ಯತೆ, ನಾವೀನ್ಯತೆ, ಭಾಗವಹಿಸುವಿಕೆ ಪರಿಣಾಮಕಾರಿತ್ವ ಹಾಗೂ ಮಾಧ್ಯಮ, ಸಮಾಜದ ಪ್ರತಿಕ್ರಿಯೆ ಸೇರಿದಂತೆ ಹಲವು ಅಂಶಗಳನ್ನು ಆಧರಿಸಿ ಜಾಥಾದ ಮೌಲ್ಯಮಾಪನ ಮಾಡಲಾಗುತ್ತದೆ. ಅತ್ಯುತ್ತಮ ಸಾಧನೆ ತೋರಿದ ಮೂರು ಜಿಲ್ಲೆಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ನೀಡಲಿದ್ದಾರೆ.
ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಸ್ಥಬ್ಧ ಚಿತ್ರದ ಮೆರವಣಿಗೆಗೆ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗುವಂತೆ ಮಾರ್ಗವನ್ನು (ರೂಟ್‌ಮ್ಯಾಪ್) ರೂಪಿಸಲಾಗಿದೆ.
---------------