ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ನಾಡಿನಲ್ಲಿ ದಲಿತ ಸಮುದಾಯ ಮೇಲಿನ ದೌರ್ಜನ್ಯ ತಡೆಗೆ ಮಹತ್ವದ ಹೆಜ್ಜೆ ಇಟ್ಟಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು (ಡಿಸಿಆರ್‌ಇ), ಶೋಷಿತರು ಹೆಚ್ಚು ಬಾಧನೆಗೊಳಗಾಗಿರುವ ನೆಲೆಗಳನ್ನು ‘ಸೂಕ್ಷ್ಮ ಪ್ರದೇಶಗಳೆಂದು’ ಗುರುತಿಸುವುದು ಹಾಗೂ ದಲಿತ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ‘ವಿಶೇಷ ಪೊಲೀಸ್ ಗಸ್ತು’ ವ್ಯವಸ್ಥೆ ಜಾರಿಗೊಳಿಸಲು ಯೋಜನೆ ರೂಪಿಸಿದೆ.
ರಾಜ್ಯ ವ್ಯಾಪಿ ಹೋಬಳಿ ಮಟ್ಟದಿಂದಲೇ ಪರಿಶಿಷ್ಟ ಜಾತಿ (ಎಸ್ಪಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಅವಲೋಕಿಸಿರುವ ಡಿಸಿಆರ್‌ಇ ಅಧಿಕಾರಿಗಳು, ಆಯಾ ಜಿಲ್ಲಾ ಪೊಲೀಸರ ಜತೆಗೂಡಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ‘ಸಹಬಾಳ್ವೆ ಹಾಗೂ ಸಾಮರಸ್ಯ ಜೀವನ’ ಧ್ಯೇಯದಡಿ ಅರಿವು ಕಾರ್ಯಕ್ರಮ ಆಯೋಜನೆ ಹಾಗೂ ಸಮುದಾಯಗಳ ನಡುವೆ ಶಾಂತಿ ನೆಲೆಗೊಳಿಸಲು ಸಮನ್ವಯಕ್ಕೆ ಮುಂದಾಗಿದ್ದಾರೆ.
ಅದೇ ರೀತಿ ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ವಿಶೇಷ ಗಸ್ತು ವ್ಯವಸ್ಥೆಯನ್ನು ಸ್ಥಳೀಯ ಪೊಲೀಸರ ಸಹಕಾರದಲ್ಲಿ ಡಿಸಿಆರ್‌ಇ ಜಾರಿಗೊಳಿಸಿದೆ. ಆ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಸುರಕ್ಷತಾ ಭಾವ ಮೂಡಿಸುವುದು ಗಸ್ತು ವ್ಯವಸ್ಥೆ ಹಿಂದಿರುವ ಸದುದ್ದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೂಕ್ಷ್ಮವಲಯಗಳ ಆಯ್ಕೆ ಹೇಗೆ?:
ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಮೇಲಿನ ಶೋಷಣೆ ತಡೆಗೆ ರಾಜ್ಯದಲ್ಲಿ ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ರಾಜ್ಯ ಸರ್ಕಾರ ಆರಂಭಿಸಿತು. ಈ ಠಾಣೆಗಳು ಎಸ್ಪಿ-ಎಸ್ಟಿ ದೌರ್ಜನ್ಯ ನಿರ್ಬಂಧ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತವೆ. ಶೋಷಿತ ವರ್ಗಗಳ ಮೇಲಿನ ಹಲ್ಲೆ, ಸಾಮಾಜಿಕ ಬಹಿಷ್ಕಾರ, ಜಾತಿ ತಾರತಮ್ಯ ಹಾಗೂ ನಿಂದನೆ ಸೇರಿ ದೌರ್ಜನ್ಯಗಳನ್ನು ತಳಹಂತದಿಂದಲೇ ನಿಯಂತ್ರಿಸಲು ಜಿಲ್ಲಾ ಪೊಲೀಸರ ಸಹಕಾರದಲ್ಲಿ ಡಿಸಿಇಆರ್ ಡಿಜಿಪಿ ಉಮೇಶ್ ಕುಮಾರ್ ಯೋಜಿಸಿದ್ದಾರೆ.
ಮೊದಲ ಹಂತದಲ್ಲಿ ಹೆಚ್ಚು ಶೋಷಣೆ ಬಾಧಿತ ವಲಯಗಳನ್ನು ಪತ್ತೆ ಹಚ್ಚಿ ಅಲ್ಲಿ ಭೀತಿಗೊಳಗಾಗಿರುವ ವರ್ಗಗಳಿಗೆ ಧೈರ್ಯ ತುಂಬುವ ಕೆಲಸ ಡಿಸಿಇಆರ್ ಕೈಗೆತ್ತಿಕೊಂಡಿದೆ. ಅಲ್ಲದೆ, ಸಮುದಾಯಗಳ ಮಧ್ಯೆ ಜಾತಿ ದ್ವೇಷದ ಅಗ್ನಿಜ್ವಾಲೆ ತಣ್ಣಗಾಗಿಸಿ ಸಾಮಾಜಿಕ ಸಾಮರಸ್ಯ ಹಾಗೂ ಸಹೋದರತೆ ಮೂಡಿಸಲು ಡಿಜಿಪಿ ಉಮೇಶ್ ಕುಮಾರ್ ಸೂಚಿಸಿದ್ದಾರೆ.
ಈ ಸೂಕ್ಷ್ಮ ಪ್ರದೇಶಗಳ ಆಯ್ಕೆಗೆ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನೇ ಮಾನದಂಡವಾಗಿ ಡಿಸಿಇಆರ್ ಪರಿಗಣಿಸಿದೆ. ಅಂತೆಯೇ ಕಳೆದ 5 ವರ್ಷಗಳಲ್ಲಿ 3ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿರುವ ಹಳ್ಳಿ ಹಾಗೂ ನಗರದ ವಾರ್ಡ್‌ಗಳನ್ನು ‘ಸೂಕ್ಷ್ಮ ಪ್ರದೇಶಗಳು’ ಎಂದು ಗುರುತಿಸಲಾಗುತ್ತದೆ. ಬಳಿಕ ಆ ಪ್ರದೇಶಗಳಲ್ಲಿ ಹೆಚ್ಚಿನ ಒತ್ತು ಕೊಟ್ಟು ಜಾಗೃತಿ ಜತೆ ಶಾಂತಿ ನೆಲೆಗೊಳಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಪ್ರತಿ ಹೋಬಳಿಗಳ ವ್ಯಾಪ್ತಿಯಲ್ಲಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಾರಥ್ಯದಲ್ಲಿ ಡಿಸಿಆರ್‌ಇ ಡಿವೈಎಸ್ಪಿಗಳು ಶಾಂತಿ ಸಭೆ ನಡೆಸಲಿದ್ದಾರೆ. ಅಲ್ಲದೆ, ಪೊಲೀಸರ ಜೊತೆ ದೌರ್ಜನ್ಯ ನಿಯಂತ್ರಣಕ್ಕೂ ಅವರು ಕಾನೂನು ಕ್ರಮ ಜರುಗಿಸಲಿದ್ದಾರೆ. ಇನ್ನು ಪ್ರತಿ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಈ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಬಗ್ಗೆ ಡಿಸಿಇಆರ್ ಡಿಜಿಪಿ ಉಮೇಶ್ ಕುಮಾರ್ ಪರಿಶೀಲಿಸಲಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹಾಸ್ಟೆಲ್‌ಗಳ ಬೀಟ್ ಪೊಲೀಸ್
ಎಸ್ಸಿ-ಎಸ್ಟಿ ಸಮುದಾಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಲ್ಲಿ ವಿಶೇಷ ಪೊಲೀಸ್ ಗಸ್ತು ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಬೀಟ್ ಪಾಯಿಂಟ್‌ಗಳಲ್ಲಿ ನಿಯಮಿತವಾಗಿ ಪೊಲೀಸ್ ಹೊಯ್ಸಳ ವಾಹನಗಳು ಸಂಚರಿಸುತ್ತವೆ. ಅಲ್ಲದೆ. ಆ ಹಾಸ್ಟೆಲ್‌ಗಳ ಪ್ರವೇಶ ದ್ವಾರದಲ್ಲಿ ಗಸ್ತು ನಡೆಸಿರುವ ಬಗ್ಗೆ ಪೊಲೀಸರು ನಮೂದಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಿಕ್ಷೆ ಪ್ರಮಾಣ ಹೆಚ್ಚಳ
ಇನ್ನು ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣಗಳ ತನಿಖೆಗೂ ಗಮನಹರಿಸಲಾಗಿದ್ದು, ತಪ್ಪಿತಸ್ಥರನ್ನು ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಪಡಿಸಲು ಪ್ರಾಸಿಕ್ಯೂಷನ್ ಅನ್ನು ಸಶಕ್ತಗೊಳಿಸಲಾಗಿದೆ. ಇದರ ಪರಿಣಾಮ 2025ರಲ್ಲಿ ಶೇ.8ರಷ್ಟಿದ್ದ ಶಿಕ್ಷೆ ಪ್ರಮಾಣ 2026ರಲ್ಲಿ ಶೇ.17ರಷ್ಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳ ಮೇಲೆ ದೌರ್ಜನ್ಯ ತಡೆ ಹಾಗೂ ಆ ವರ್ಗಗಳ ರಕ್ಷಣೆಗೆ ಹೋಬಳಿ ಮಟ್ಟದಿಂದಲೇ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಡಿಸಿಇಆರ್ ಜಂಟಿಯಾಗಿ ಕೆಲಸ ಮಾಡುತ್ತವೆ.
- ಉಮೇಶ್ ಕುಮಾರ್, ಡಿಜಿಪಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ)
