ಬೆಂಗಳೂರು : ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರು. ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರ ಸೊಸೆ ನಾಗವೇಣಿಯನ್ನು ದೋಷಿ ತೀರ್ಪು ಎಂದು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಅವರಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ.
2021 ರಲ್ಲಿ ಯಲಹಂಕ ಪೊಲೀಸ್ ಠಾಣೆಗೆ ದೂರು
ವೈದ್ಯ ಸೀಟು ಕೊಡಿಸುವುದಾಗಿ ವಂಚಿಸಿರುವ ಸಂಬಂಧ ಪ್ರಕಾಶ್ ಕುಮಾರ್ ಯರಪ್ಪ ಎಂಬುವವರು 2021 ರಲ್ಲಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೆಡಿಕಲ್ ಸೀಟ್ ಕೊಡಿಸುವುದಾಗಿ ಆರೋಪಿಗಳು ಹಂತ ಹಂತವಾಗಿ ಒಟ್ಟು 45 ಲಕ್ಷ ರು. ಹಣ ಪಡೆದು ನಂಬಿಕೆ ದ್ರೋಹ ಎಸಗಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಯಲಹಂಕ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರ ಪುತ್ರ ಹಾಗೂ ಮಾಜಿ ಶಾಸಕ ಜೆ.ನರಸಿಂಹ ಸ್ವಾಮಿ ಅವರು ಮೊದಲನೇ ಆರೋಪಿ (ಎ-1) ಆಗಿದ್ದರು. ಆದರೆ, ವಿಚಾರಣೆ ಬಾಕಿ ಇರುವಾಗಲೇ ಅವರು (2024 ರಲ್ಲಿ) ಮೃತಪಟ್ಟ ಕಾರಣ, ಅವರ ವಿರುದ್ಧದ ಪ್ರಕರಣವನ್ನು ಕೈಬಿಡಲಾಗಿತ್ತು. ಎರಡನೇ ಆರೋಪಿಯಾಗಿರುವ ನರಸಿಂಹ ಸ್ವಾಮಿ ಅವರ ಪತ್ನಿ ನಾಗವೇಣಿ ಅವರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ನ್ಯಾಯಾಧೀಶ ಸಂದೀಪ್ ಪಾಟೀಲ್ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ. ತೀರ್ಪು ಹೊರಬಿದ್ದ ಬೆನ್ನಲ್ಲೇ ಪೊಲೀಸರು ಅಪರಾಧಿ ನಾಗವೇಣಿ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
5 ವರ್ಷ ಜೈಲು, 10 ಸಾವಿರ ದಂಡ:
ಸೆಕ್ಷನ್ 420 (ವಂಚನೆ)- ಈ ಅಡಿಯಲ್ಲಿ ಅಪರಾಧಿ ನಾಗವೇಣಿ ಅವರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಲಾಗಿದೆ. ಸೆಕ್ಷನ್ 120ಬಿ (ಅಪರಾಧಿಕ ಸಂಚು)- ಈ ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚಿನ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
