ಬೆಂಗಳೂರು : ರಾಜ್ಯಾದ್ಯಂತ ಮಳೆಯ ಅಬ್ಬರ ಕೊಂಚ ಇಳಿದರೂ, ಕಳೆದ 4-5 ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಇದರಿಂದಾಗಿ ಹಲವೆಡೆ ಪ್ರವಾಹ ಭೀತಿ ಇನ್ನೂ ಇದೆ.

ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಕೊಂಚ ಬಿಡುವು ನೀಡಿತು. ಆದರೂ, 5 ಮನೆಗಳು ಜಲಾವೃತಗೊಂಡಿವೆ. ಬೆಳಗಾವಿಯಲ್ಲಿ ಮಳೆ ಕ್ಷೀಣಗೊಂಡರೂ, ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಸೇತುವೆಗಳು ಮುಳುಗಡೆಯಾಗಿವೆ. ಇನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಗುಡ್ಡಕ್ಕೆ ನಿರ್ಮಿಸುತ್ತಿರುವ ತಡೆಗೋಡೆ ಬಿರುಕು ಬಿಟ್ಟಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ತಲಕಾವೇರಿ, ಬ್ರಹ್ಮಗಿರಿ ಬೆಟ್ಟ ಪ್ರದೇಶ ಹಾಗೂ ಭಾಗಮಂಡಲ ವ್ಯಾಪ್ತಿ ಮಳೆ ಸುರಿದ ಹಿನ್ನೆಲೆಯಲ್ಲಿ ಕರಡಿಗೋಡು, ಚಿಕ್ಕನಹಳ್ಳಿ ಪೈಸಾರಿ ಮತ್ತು ನೆಲ್ಯಹುದಿಕೇರಿ ಭಾಗಗಳಲ್ಲಿ ಪ್ರವಾಹದ ಆತಂಕ ಉಂಟಾಗಿದೆ. ಕರಡಿಗೋಡು ಗ್ರಾಮದಲ್ಲಿ 5 ಮನೆಗಳು ಜಲಾವೃತಗೊಂಡಿದೆ. ರಸ್ತೆ ಮೇಲೆ ಪ್ರವಾಹದ ನೀರು ಎರಡು ಅಡಿಯಷ್ಟು ಹರಿಯುತ್ತಿದೆ. ಕೊಡಗಿನ ಐಕೊಳ ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಭಾರಿ ಗಾತ್ರದ ಮರ ಬಿದ್ದಿದ್ದು, ಕಾರಲ್ಲಿದ್ದ ಅಲಿ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೊಡಗು ಜಿಲ್ಲೆಯಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 47.16 ಮಿ.ಮೀ. ಮಳೆಯಾಗಿದೆ.


ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಸದ್ಯ ತಗ್ಗಿದೆ. ಕಾಗವಾಡ ತಾಲೂಕಿನ ಉಗಾರ-ಕುಡಚಿ ಮಾರ್ಗದ ಸಂಪರ್ಕ ಕಲ್ಪಿಸುವ ಸೇತುವೆ ಸೇರಿದಂತೆ ಇನ್ನೂ ಏಳು ಸೇತುವೆಗಳು ಮುಳುಗಡೆಯಾಗಿವೆ. ಜತೆಗೆ ಖಾನಾಪುರ ತಾಲೂಕಲ್ಲೂ ಮಳೆ ಕ್ಷೀಣಗೊಂಡಿದೆ. ಆದರೂ ಅಲ್ಲಲ್ಲಿ ಕಡಿತಗೊಂಡಿದ್ದ ವಿದ್ಯುತ್‌ ಸಂಪರ್ಕ ಇನ್ನೂ ದುರಸ್ಥಿ ಆಗಿಲ್ಲ.

ತಡೆಗೋಡೆ ಬಿರುಕು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಹೃದಯ ಭಾಗದಲ್ಲಿ ತಾಲೂಕು ಕಚೇರಿ ಬಳಿಯ ಗುಡ್ಡಕ್ಕೆ ನಿರ್ಮಿಸುತ್ತಿರುವ ತಡೆಗೋಡೆ ನಾಲ್ಲೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಿರುಕು ಬಿಟ್ಟಿದ್ದು ಮನೆಗಳತ್ತ ವಾಲಿಕೊಂಡಿದೆ. ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಈಗಾಗಲೇ ಸ್ಥಳೀಯರು, ವರ್ತಕರು ಸ್ಥಳಾಂತರಗೊಳ್ಳುವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ. ಅತ್ತ ದಿನೇ ದಿನೇ ತಡೆಗೋಡೆ, ಗುಡ್ಡ ಕುಸಿಯುವ ಹಂತ ತಲುಪಿದ್ದರೆ ಇತ್ತ ರಸ್ತೆಯಲ್ಲಿ ಸಂಚರಿಸುವವರೂ ಸಹ ಭಯದಲ್ಲೆ ಓಡಾಡುವಂತಾಗಿದೆ.

ನೆರೆಯ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಆದಾಗ್ಯೂ, ಬೆಳಗಾವಿ ಜಿಲ್ಲೆಯ ಪ್ರಮುಖ ನದಿಗಳಾದ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ನೀರಿನ ಮಟ್ಟದಲ್ಲಿ ಸದ್ಯಕ್ಕೆ ಯಾವುದೇ ಗಣನೀಯ ಏರಿಳಿತ ಕಂಡುಬಂದಿಲ್ಲ. ಎಲ್ಲ ನದಿಗಳೂ ಯಥಾಸ್ಥಿತಿಯಲ್ಲಿದ್ದು, ಪ್ರವಾಹದ ಆತಂಕ ಎದುರಾಗಿಲ್ಲ.

ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.