ತಾಯಿ ಭುವನೇಶ್ವರಿ ಪ್ರತಿಮೆ ವಿಧಾನಸೌಧದ ಎದುರು ಸ್ಥಾಪಿಸಲು ಆಗ್ರಹ ಕನ್ನಡಪ್ರಭ ವಾರ್ತೆ ಗಜೇಂದ್ರಗಡ ಜನತೆ ಹಾಗೂ ಜನಪ್ರತಿನಿಧಿಗಳ ಬಹು ವರ್ಷಗಳ ಒತ್ತಾಸೆಗೆ ಮನ್ನಣೆ ನೀಡುವ ಮೂಲಕ ಸಜ್ಜನ ರಾಜಕಾರಣಿ, ಕರ್ನಾಟಕ ಏಕೀಕರಣದ ಪ್ರಮುಖ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದು ಅಭಿನಂದನಾರ್ಹ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಚೇರ್‌ಮನ್, ಕಾಂಗ್ರೆಸ್ ಮುಖಂಡ ಶರಣಪ್ಪ ರೇವಡಿ ಸರ್ಕಾರದ ನಿಲುವನ್ನು ಸ್ವಾಗತಿಸಿದ್ದಾರೆ. ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ರಾಜಕಾರಣ ವ್ಯವಸ್ಥೆಯಲ್ಲಿ ಸರಳ ಹಾಗೂ ಸಜ್ಜನ ರಾಜಕಾರಣಿ ಎಂದು ಹೆಸರು ಮಾಡಿದ್ದ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದು ಜನತೆಯ ಒತ್ತಾಸೆ. ಹಾಗಾಗಿ ಹಲವಾರು ಬಾರಿ ದೊಡ್ಡಮೇಟಿ ಅವರ ಸ್ಮಾರಕ ನಿರ್ಮಾಣಕ್ಕೆ ಪ್ರಗತಿಪರರು ಮತ್ತು ಕನ್ನಡಪರ ಸಂಘಟನೆಗಳಿಂದ ಆಗ್ರಹಗಳು ಕೇಳಿ ಬಂದಿದ್ದವು. ಆದರೆ ಹಿಂದಿನ ಸರ್ಕಾರಗಳಿಂದ ಈ ಕುರಿತು ಯಾವುದೇ ನಿರ್ಧಾರ ಬಾರದಿದ್ದಾಗ ಸಹಜವಾಗಿ ಜನತೆಗೆ ನಿರಾಸೆ ಮೂಡಿಸಿತ್ತು ಎಂದಿದ್ದಾರೆ. ಇದೀಗ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣಗೊಂಡು ೫೦ ವರ್ಷ ಪೂರ್ಣವಾದ ಹಿನ್ನೆಲೆಯಲ್ಲೆ ರಾಜ್ಯ ಸರ್ಕಾರವು ೨೦೨೩ ನ. ೧ರಿಂದ ೨೦೨೪ರ ನ. ೧ರ ವರೆಗೆ ನಡೆವ ವಿವಿಧ ಕಾರ್ಯಕ್ರಮಗಳಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಮುಂದಾಗಿದ್ದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಹರಿಜನ ಚಳವಳಿಯನ್ನು ಧಾರವಾಡ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಲು ಶ್ರಮಿಸಿದ್ದ ದೊಡ್ಡಮೇಟಿ ಅವರ ಕಾರ್ಯಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಮಹಾತ್ಮಾ ಗಾಂಧೀಜಿ ಅವರು ೩ ಮಾರ್ಚ್ ೧೯೩೪ರಲ್ಲಿ ಜಕ್ಕಲಿ ಗ್ರಾಮಕ್ಕೆ ಆಗಮಿಸಿದ್ದರು. ವಾಹನ ಸೌಲಭ್ಯವಿಲ್ಲದ ದಿನಗಳಲ್ಲಿ ೧೨೦೦ಕ್ಕೂ ಎತ್ತಿನ ಗಾಡಿಗಳಲ್ಲಿ ೨೫ ಸಾವಿರಕ್ಕೂ ಅಧಿಕ ಜನರು ಗಾಂಧೀಜಿ ಅವರು ಗ್ರಾಮ ಚಾವಡಿಯಲ್ಲಿ ಮಾಡಿದ ಭಾಷಣವನ್ನು ಆಲಿಸಿದ್ದು ಇತಿಹಾಸ. ಮಾಜಿ ಸಚಿವ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕವನ್ನು ಜಕ್ಕಲಿ ಗ್ರಾಮದಲ್ಲಿ ಸ್ಥಾಪಿಸಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಶಾಸಕ ಜಿ.ಎಸ್. ಪಾಟೀಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವ ಜತೆಗೆ ದೊಡ್ಡಮೇಟಿ ಅವರ ಕಲ್ಪನೆಯ ಕರ್ನಾಟಕದ ಮೊಟ್ಟಮೊದಲ ಭುವನೇಶ್ವರಿ ತಾಯಿ ಭಾವಚಿತ್ರವನ್ನು ವಿಧಾನಸೌಧ ಮತ್ತು ಶಾಸಕರ ಭವನದ ಎದುರು ಪ್ರತಿಮೆಯಾಗಿ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ರೇವಡಿ ಆಗ್ರಹಿಸಿದ್ದಾರೆ.