ಸುಭಾಶ್ಚಂದ್ರ ಎಸ್.ವಾಗ್ಳೆ ಕನ್ನಡಪ್ರಭ ವಾರ್ತೆ ಉಡುಪಿ ಉಡುಪಿ ಸಮೀಪದ ಹೆರ್ಗಾ ಗ್ರಾಮದ ಪ್ರಮಿಳಾ ಪ್ರಭು ಇಸ್ರೆಲ್ ದೇಶದ ದೊಡ್ಡ ನಗರವಾದ ಟೆಲ್ ಅವಿವಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಟೆಲ್ ಅವಿವಾದಲ್ಲಿ ಸರ್ಕಾರ ರೆಡ್ ಅಲರ್ಟ್ ಘೋಷಿಸಿದ್ದು, ಇಡೀ ನಗರವೇ ನಿರ್ಜನವಾಗಿದೆ ಎಂದವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ದೂರವಾಣಿ ಮೂಲಕ ಪತ್ರಿಕೆ ಜೊತೆ ಮಾತನಾಡಿದ ಅವರು, ಶನಿವಾರ ರಾತ್ರಿ ಇಲ್ಲಿಂದ ಕೇವಲ 1 ಕಿ.ಮೀ. ದೂರದಲ್ಲಿ ಹಮಾಸ್ ನಲ್ಲಿ ರಾಕೆಟ್ ಬಿದ್ದಿದೆ. ಪುಣ್ಯವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿಯಿಡೀ ರಾಕೆಟ್ ದಾಳಿ ಆಗಿದೆ, ನಾವು ಸುಮಾರು ನೂರಿನ್ನೂರು ರಾಕೆಟ್ ಗಳು ಆಕಾಶದಲ್ಲಿ ಹಾರಾಡುವುದನ್ನು ನೋಡಿದ್ದೇವೆ. ಇವತ್ತು ಇನ್ನೂ ಇಲ್ಲಿ ಪೂರ್ತಿ ಕತ್ತಲಾಗಿಲ್ಲ (‘ಕನ್ನಡಪ್ರಭ’ದೊಂದಿಗೆ ಅವರು ಬಾನುವಾರ ರಾತ್ರಿ 8 ಗಂಟೆಗೆ ಮಾತನಾಡುವಾಗ ಅಲ್ಲಿ 6 ಗಂಟೆಯಾಗಿತ್ತು), ಯಾವ ಹೊತ್ತಿಗೆ ರಾಕೆಟ್ ಹಾರಿ ಬರ್ತವೋ ಗೊತ್ತಿಲ್ಲ, ಎಲ್ಲಿ ಬೀಳ್ತವೋ ಎಂದು ಆತಂಕದಲ್ಲಿ ಹೇಳಿದರು. ಆದರೆ, ಪ್ರತಿ ರಾಕೆಟ್ ಬರುವಾಗಲೂ 15 ಸೆಕುಂಡು ಮುಂಚೆ ಸೈರನ್ ಆಗುವಂತಹ ತಾಂತ್ರಿಕ ವ್ಯವಸ್ಥೆ ಇಲ್ಲಿ ಇದೆ, ಇಲ್ಲಿನ ಪ್ರತಿ ನಗರದಲ್ಲಿಯೂ ಅಲ್ಲಲ್ಲಿ ಅಂಡರ್ ಗ್ರೌಂಡ್ ಬಂಕರ್ ಗಳಿವೆ, ಆದ್ದರಿಂದ ಸೈರನ್ ಆದ ತಕ್ಷಣ ಇಲ್ಲಿ ಮನೆಯಿಂದ ಹೊರಗೆ ಇರುವ ಜನರು ಬಂಕರ್ ಸೇರಿಕೊಳ್ಳುತ್ತೇವೆ, ಇದು ನಮಗೆ ಅಭ್ಯಾಸ ಆಗಿದೆ ಎಂದು ವಿವರಿಸಿದರು. ಈ ಹಿಂದೆ ಯಾವಾಗಲೋ ಒಮ್ಮೆ ರಾಕೆಟ್ ಗಳು ಆ ಕಡೆಯಿಂದ ಬರುತ್ತಿದ್ದವು, ಸೈರನ್ ಆಗುತ್ತಿತ್ತು, ನಾವು ಬಂಕರ್ ಸೇರಿಕೊಳ್ಳುತಿದ್ದೆವು, ಆದರೆ ನಿನ್ನೆ ಪ್ರಥಮ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ರಾಕೆಟ್ ಗಳು ಬಂದಿವೆ ಮತ್ತು ಕಿಡ್ನಾಪಿಂಗ್, ಕಿಲ್ಲಿಂಗ್ ಕೂಡ ಮಾಡಿದ್ದಾರೆ, ಇನ್ನೆನಾಗಲಿದೆಯೋ ಗೊತ್ತಿಲ್ಲ ಎಂದವರು ಹೇಳಿದರು. ಅವರಿಗೆ ಸಿಕ್ಕಿರುವ ಮಾಹಿತಿಯಂತೆ ಈಗಾಗಲೇ ಸುಮಾರು 600ಕ್ಕೂ ಹೆಚ್ಚು ಮಂದಿ ವೃದ್ಧರು, ಮಕ್ಕಳು ಮತ್ತು ಮಹಿಳೆರನ್ನು ಉಗ್ರರು ಕೊಂದಿದ್ದಾರೆ, 300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ, 1 - 2 ವರ್ಷದ ಮಕ್ಕಳನ್ನೂ ಕೂಡ ಅಪಹರಿಸಿದ್ದಾರೆ, ಅವರನ್ನೆಲ್ಲಾ ಮತ್ತೆ ಜೀವಂತ ನೋಡುವ ಅವಕಾಶ ಬಹಳ ಕಡಿಮೆ ಇದೆ ಎನ್ನುತ್ತಾರವರು. ಹಮಾಸ್ ಉಗ್ರರಿಗೆ ಇಸ್ರೆಲ್ ನ ಮೂಲನಿವಾಸಿ ಯಹೂದಿಗಳೇ ಟಾರ್ಗೆಟ್, ಅವರನ್ನೇ ಅಪಹರಿಸಿದ್ದಾರೆ, ಆದ್ದರಿಂದ ಇಲ್ಲಿರುವ ಭಾರತೀಯರಿಗೆ ಅಥವಾ ಬೇರೆ ದೇಶದವರಿಗೆ ಅಂತಹ ತೊಂದರೆಯಾಗಲಿಕ್ಕಿಲ್ಲ ಎಂದವರು ಭರವಸೆಯಲ್ಲಿದ್ದಾರೆ. ಸುರಕ್ಷಿತವಾಗಿದ್ದೇವೆ: ಗಡಿ ಪ್ರದೇಶದಲ್ಲಿ ಭಾರೀ ಹಾನಿಯಾಗಿರುವ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಮಾಹಿತಿ ಬರ್ತಿದೆ, ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ನಾವು ಭಾರತೀಯ ರಾಯಭಾರಿ ಕಚೇರಿಗೆ ನಮ್ಮೆಲ್ಲಾ ಮಾಹಿತಿಗಳನ್ನು ನೀಡಿದ್ದೇವೆ. ಒಟ್ಟಿನಲ್ಲಿ ಸುರಕ್ಷಿತವಾಗಿದ್ದೇವೆ. ಭಾರತ ಸರ್ಕಾರ ಇಸ್ರೆಲ್ ಗೆ ಪೂರ್ಣ ಬೆಂಬಲ ನೀಡುವ ನಿರೀಕ್ಷೆ ಇದೆ ಎಂದವರು ಹೇಳಿದ್ದಾರೆ. ಕಳೆದ 6 ವರ್ಷಗಳಿಂದ ಟೆಲ್ ಅವಿವಾ ಆಸ್ಪತ್ರೆಯಲ್ಲಿ ಕೇರ್ ಟೆಕರ್ ಆಗಿರುವ ಪ್ರಮೀಳಾ ಅವರ ಪತಿ ಮತ್ತು ಇಬ್ಬರು ಮಕ್ಕಳು ಊರಿನಲ್ಲಿದ್ದಾರೆ. ಮನೆಯವರು ಸತತವಾಗಿ ಅವರ ಸಂಪರ್ಕದಲ್ಲಿದ್ದಾರೆ. ಅವರ ತಂಗಿ ಪ್ರವೀಣಾ ಕೂಡ ಇಸ್ರೆಲ್ ನ ಜೆರುಸಲಂನಲ್ಲಿ ನರ್ಸ್ ಆಗಿ ದುಡಿಯುತಿದ್ದಾರೆ. ಅಲ್ಲಿಯೂ ಪರಿಸ್ಥಿತಿ ಇಸ್ರೆಲ್ ನಿಯಂತ್ರಣದಲ್ಲಿದೆ ಎಂದು ಪ್ರಮೀಳಾ ಹೇಳಿದ್ದಾರೆ.