ನನ್ನ ಉಸಿರಿರುವರೆಗೂ ರೈತರ ಪರ ಇರುವೆ

KannadaprabhaNewsNetwork | Published : Apr 22, 2024 2:23 AM

ಸಾರಾಂಶ

ನನ್ನ ಬಗ್ಗೆ ಏನಾದರೂ ತಪ್ಪು ತಿಳುವಳಿಕೆ ಇದ್ದರೆ ಅದನ್ನು ಸರಿಪಡಿಸಲೆಂದು ಖುದ್ದಾಗಿ ರೈತರನ್ನು ಭೇಟಿಯಾಗಲು ಬಂದಿದ್ದೇನೆ

ಕನ್ನಡಪ್ರಭ ವಾರ್ತೆ ಮುಧೋಳ

ಕಳೆದ 30 ವರ್ಷಗಳಿಂದ ನಾನು ರಾಜಕೀಯ ರಂಗದಲ್ಲಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಸದಾ ರೈತರಿಗಾಗಿ ಶ್ರಮಿಸಿದ್ದೇನೆ. ಉಸಿರಿರುವರೆಗೂ ನಾನು ರೈತರ ಪರವಾಗಿಯೇ ಕಾರ್ಯ ನಿರ್ವಹಿಸುತ್ತೇನೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಅವರು ನಗರದ ಜಮಖಂಡಿ ರಸ್ತೆಯಲ್ಲಿರುವ ಶ್ರೀ ಟ್ರಾನ್ಸ್‌ಪೋರ್ಟ್ ಕಂಪನಿಯ ಸಭಾ ಭವನದಲ್ಲಿ ಶುಕ್ರವಾರ ಸಂಜೆ ರೈತರ ಜೊತೆ ಸಮಾಲೋಚನೆ ಸಭೆಯಲ್ಲಿ ಮಾತನಾಡಿ, ಇತ್ತೀಚೆಗೆ ಪತ್ರಿಕೆಗಳಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸಕ್ಕರೆ ಸಚಿವರಿಗೆ ಘೇರಾವ್ ಹಾಕಲಾಗುವುದು ಎಂಬ ರೈತರ ಹೇಳಿಕೆಯ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ. ನನ್ನ ಬಗ್ಗೆ ಏನಾದರೂ ತಪ್ಪು ತಿಳುವಳಿಕೆ ಇದ್ದರೆ ಅದನ್ನು ಸರಿಪಡಿಸಲೆಂದು ಖುದ್ದಾಗಿ ರೈತರನ್ನು ಭೇಟಿಯಾಗಲು ಬಂದಿದ್ದೇನೆ ಎಂದರು.

ಇದು ಚುನಾವಣೆ ಸಂದರ್ಭ. ಆದ್ದರಿಂದ ರೈತರ ಸಮಸ್ಯೆಗಳ ಬಗ್ಗೆ ಯಾವುದೇ ಆಶ್ವಾಸನೆ, ಭರವಸೆ ನೀಡಲು ಬರುವುದಿಲ್ಲ. ಚುನಾವಣೆಯ ನಂತರ ರೈತರ ಸಮಸ್ಯೆಗಳ ಬಗ್ಗೆ ರೈತ ಮುಖಂಡರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳೋಣ. ಈಗ ನನ್ನ ಬಗ್ಗೆ ಇರುವ ತಪ್ಪು ತಿಳುವಳಿಕೆ ಹೋಗಲಾಡಿಸಲು ಬಂದಿದ್ದೇನೆಯೇ, ಹೊರತು ನನ್ನ ಮಗಳು ಸಂಯುಕ್ತಾ ಪಾಟೀಲ ಪರ ಮತ ಯಾಚನೆ ಮಾಡಲು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಬಿ. ತಿಮ್ಮಾಪೂರ ಮಾತನಾಡಿ, ನಾನು ತಮ್ಮೆಲ್ಲರ ಆಶೀರ್ವಾದದಿಂದ ಸಚಿವನಾಗಿದ್ದೇನೆ. ನಾನು ಯಾವಾಗಲೂ ಮುಧೋಳ ಮತಕ್ಷೇತ್ರದ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತ ಬಂದಿದ್ದೇನೆ. ಬಾಗಲಕೋಟೆ ಮತಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ನ ಸಂಯುಕ್ತಾ ಪಾಟೀಲ ಅವರಿಗೆ ನನಗೆ ಆಶೀರ್ವಾದ ಮಾಡಿದಂತೆ, ಅವರಿಗೂ ಮಾಡಬೇಕು ಎಂದು ಮನವಿ ಮಾಡಿದರು.

ಬಾಗಲಕೋಟ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಕಬ್ಬು ಬೆಳೆಗಾರರ ಪ್ರಮುಖ ಐದು ಬೇಡಿಕೆಗಳು ಇವೆ. ಎಸ್‌ಎಪಿ ಕಾನೂನಿನ ಪ್ರಕಾರ ಸೂಕ್ತ ಸೌಲಭ್ಯಗಳು ದೊರಕಬೇಕು, ಸರ್ಕಾರದ ವತಿಯಿಂದ ಹೈಟೆಕ್ ತೂಕದ ಯಂತ್ರ ಸ್ಥಾಪಿಸಬೇಕು ಮತ್ತು ಇನ್ನುಳಿದ ಬೇಡಿಕೆಗಳ ಬಗ್ಗೆ ಸಚಿವರಿಗೆ ವಿವರಿಸಿದರು. ಇಲ್ಲಿಯವರೆಗೆ ಅನೇಕ ಸರ್ಕಾರಗಳು ಬಂದವು. ಅನೇಕ ಮುಖ್ಯಮಂತ್ರಿಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿ ಹೋದರು, ಆದರೆ, ಇಲ್ಲಿಯವರೆಗೂ ರೈತರ ಸಂಕಷ್ಟಗಳು ಈಡೇರದೇ ನಾವು ಪ್ರತಿಬಾರಿ ಹೋರಾಟದ ಮೂಲಕ ನ್ಯಾಯ ಪಡೆಯಬೇಕಾಗುತ್ತಿದೆ. ಆದ್ದರಿಂದ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯವಾಗಬೇಕೆಂದು ವಿನಂತಿಸಿದರು.

ರೈತರ ಸಮಸ್ಯೆಗಳ ಬಗ್ಗೆ ಕೆಲ ರೈತರು ವಿವರಿಸಲು ಪ್ರಾರಂಭಿಸಿದಾಗ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಈಗ ಚುನಾವಣಾ ಸಂದರ್ಭವಾಗಿರುವುದರಿಂದ ಚುನಾವಣೆಯ ನಂತರ ಎಲ್ಲರೂ ಸೇರಿ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಬರುತ್ತದೆ ಎಂದು ರೈತ ಮುಖಂಡರುಗಳು ಪರಿಸ್ಥಿತಿ ತಿಳಿಗೊಳಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಉದಯಕುಮಾರ ಸಾರವಾಡ, ರಾಜುಗೌಡ ಪಾಟೀಲ, ಸದುಗೌಡ ಪಾಟೀಲ, ಪರಮಾನಂದ ಕುಟ್ರಟ್ಟಿ, ರೈತ ಮುಖಂಡ ದುಂಡಪ್ಪ ಯರಗಟ್ಟಿ, ಹನಮಂತ ನಬಾಬ, ಹನಮಂತಗೌಡ ಪಾಟೀಲ, ಸುರೇಶ ಚಿಂಚಲಿ ಸೇರಿದಂತೆ ಇನ್ನಿತರರು ಇದ್ದರು.

Share this article