ಕನ್ನಡಪ್ರಭ ವಾರ್ತೆ ಮೂಡಲಗಿ
ನಾಡಿನ ಹಿರಿಯರ ಶಿಕ್ಷಣ ಪ್ರೀತಿ, ಸಾಮಾಜಿಕ ಕಾಳಜಿಯಿಂದ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳು ಸದೃಢವಾಗಿ ನೆಲೆಯೂರಿ ಸಮಾಜಕ್ಕೆ ಜ್ಞಾನದ ಬೆಳಕು ನೀಡಿವೆ ಎಂದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.ತಾಲೂಕಿನ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮದರ್ಜೆ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿಅವರ ಭವಿಷ್ಯ ನಿರ್ಮಿಸುತ್ತಿರುವ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯವು ಶ್ಲಾಘನೀಯ ಎಂದು ಹೇಳಿದರು.ಪಾಲಕರು ತಮ್ಮ ಮಕ್ಕಳ ಆಸಕ್ತಿ, ಇಚ್ಛೆಗೆ ಪೂರಕವಾಗಿ ಅವರ ಕಲಿಕೆಗೆ ಪ್ರಾಧಾನ್ಯತೆ ನೀಡಬೇಕು. ಮಕ್ಕಳ ಕಲಿಕೆಯು ಒತ್ತಾಯವಾಗಿರಬಾರದು, ಅವರು ಇಷ್ಟಪಟ್ಟು ಕಲಿಯುವಂತ ಅವಕಾಶ ಪಾಲಕರು ನೀಡಬೇಕು ಎಂದರು. ಮುಖ್ಯಅತಿಥಿ ಬೆಳಗಾವಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ಡಿ.ಕೆ. ಕಾಂಬಳೆ ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಓದಿ ತಂದೆ, ತಾಯಿ ಮತ್ತು ಶಿಕ್ಷಣ ಪಡೆದ ಸಂಸ್ಥೆಯ ಹೆಸರನ್ನು ಮುನ್ನೆಲೆಗೆ ತರಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಮಾತನಾಡಿ, ಆಡಳಿತ ಮಂಡಳಿಯವರ ಸಹಕಾರ, ಪ್ರೀತಿಯಿಂದಾಗಿ ರಾಮಲಿಂಗೇಶ್ವರ ಸಂಸ್ಥೆಯು ಬೆಳೆಯಲಿಕ್ಕೆ ಸಾಧ್ಯವಾಗಿದೆ. ಸದ್ಯ 3 ಸಾವಿರಕ್ಕೂ ವಿದ್ಯಾರ್ಥಿಗಳು ಓದುತ್ತಿರುವುದು ಹೆಮ್ಮೆ ತರುವಂತದ್ದು ಎಂದರು.ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ವಿ. ಹಿರೇಮಠ, ಮೂಡಲಗಿ ಬಿಇಒ ಅಜೀತ್ ಮನ್ನಿಕೇರಿ, ಪಿಎಸ್‌ಐಎಚ್.ವೈ.ಬಾಲದಂಡಿ, ಗಾಯಕ ರವೀಂದ್ರ ಸೋರಗಾಂವಿ, ಝೀಕನ್ನಡ ವಾಹಿನಿ ಸರಿಗಮ ಖ್ಯಾತಿಯ ಜ್ಞಾನೇಶ ಬಳ್ಳಾರಿ, ಸಾಕ್ಷಿ ಹಿರೇಮಠ ಅವರನ್ನು ಸನ್ಮಾನಿಸಿದರು.
ಪ್ರಾಚಾರ್ಯಡಾ.ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್.ಕಡಾಡಿ, ನಿರ್ದೇಶಕ ಡಾ.ಆರ್.ಎನ್. ಪಾಟೀಲ, ಬಿ.ಎಸ್. ಕಡಾಡಿ, ಎಸ್.ಎಂ.ಖಾನಾಪುರ, ಬಿ.ಎಸ್. ಗೋರೋಶಿ, ಬಿ.ಬಿ. ಬೆಳಕೂಡ, ಎಂ.ಡಿ.ಕುರಬೇಟ, ಎಂ.ಎಸ್. ಕಪ್ಪಲಗುದ್ದಿ, ಬಿ.ಕೆ. ಗೋರೋಶಿ, ಬಾಳವ್ವ ಕಂಕಣವಾಡಿ ವೇದಿಕೆಯಲ್ಲಿದ್ದರು. ಪ್ರೊ.ಶಂಕರ ನಿಂಗನೂರ, ಡಾ.ಕೆ.ಎಸ್. ಪರವ್ವಗೋಳ, ಪ್ರೊ.ಡಿ.ಎಸ್. ಹುಗ್ಗಿ ನಿರೂಪಿಸಿದರು. ವಿಲಾಸ ಕೆಳಗಡೆ ವಂದಿಸಿದರು.ಸಾಂಸ್ಕೃತಿಕ ಸಂಭ್ರಮ: ಸಾಂಸ್ಕೃತಿಕ ಸಂಭ್ರಮದಲ್ಲಿ ಹಿಂದೂಸ್ತಾನಿ ಗಾಯಕ ಮತ್ತು ಸಿನಿಮಾ ಹಿನ್ನೆಲೆ ಗಾಯಕ ರವೀಂದ್ರ ಸೊರಗಾಂವಿ ತಂಡದವರಿಂದ 3 ಗಂಟೆಯ ವರೆಗೆ ಜರುಗಿದ ಸಂಗೀತ ಕಾರ್ಯಕ್ರಮವು ಜನರನ್ನು ಮನಸೂರೆಗೊಳಿಸಿತು. ಹೊಂಬೆಗೌಡ, ಯತಿರಾಜ, ಝೀ ಕನ್ನಡದ ಸರಿಗಮಪ ಖ್ಯಾತಿಯ ಜ್ಞಾನೇಶ ಬಳ್ಳಾರಿ, ಸಾಕ್ಷಿ ಹಿರೇಮಠ, ಸುಷ್ಮಾ ನಂದಗಾಂವ, ಸುಪ್ರಿಯಾ ಮಠಪತಿ ಅವರ ಸುಶ್ರಾವ್ಯ ಗಾಯನ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿತು.