ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ‘ದಳಪತಿ’

KannadaprabhaNewsNetwork |  
Published : Jun 13, 2026, 02:00 AM IST
ಕೊಲ್ಲೂರಿಗೆ ವಿಜಯ್‌ ಭೇಟಿ | Kannada Prabha

ಸಾರಾಂಶ

ತಮಿಳುನಾಡು ಮುಖ್ಯಮಂತ್ರಿ, ‘ದಳಪತಿ’ ಖ್ಯಾತಿಯ ಜೋಸೆಫ್ ವಿಜಯ್ ಅವರು ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ತಮಿಳುನಾಡು ಮುಖ್ಯಮಂತ್ರಿ, ‘ದಳಪತಿ’ ಖ್ಯಾತಿಯ ಜೋಸೆಫ್ ವಿಜಯ್ ಅವರು ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದರು.

ತಮಿಳುನಾಡು ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಕೊಲ್ಲೂರಿಗೆ ಆಗಮಿಸಿದ ವಿಜಯ್‌ಗೆ ದೇವಸ್ಥಾನದ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿ ಸ್ತಂಭ ಗಣಪತಿ ಪೂಜೆ ನೆರವೇರಿಸಿದರು. ಬಳಿಕ ಗರ್ಭಗುಡಿಯಲ್ಲಿ ದೇವಿಯ ದರ್ಶನ ಮಾಡಿಸಿ ಫಲ ಸಮರ್ಪಿಸಲಾಯಿತು. ಈ ವೇಳೆ, ವಿಜಯ್‌ ಅವರು ದೇವಿಗೆ ಬೆಳ್ಳಿಯ ಖಡ್ಗವನ್ನು ಕೊಡುಗೆಯಾಗಿ ಸಮರ್ಪಿಸಿದರು. ಸುಮಾರು 30 ನಿಮಿಷ ದೇವಸ್ಥಾನದಲ್ಲಿ ಕಳೆದ ಅವರು ಯಾವುದೇ ವಿಶೇಷ ಸಂಕಲ್ಪ ಮಾಡದೆ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ, ವಿಜಯ್ ಅವರ ಕೈಗೆ ಶ್ರೀರಕ್ಷೆಯ ದಾರ ಕಟ್ಟಿ, ಅವರಿಗೆ ಪ್ರಸಾದ ನೀಡಿ ಆಶೀರ್ವದಿಸಲಾಯಿತು.

ಬಳಿಕ, ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು. ವಿಜಯ್ ಅವರನ್ನು ಗೌರವಿಸಲು ದೇವಸ್ಥಾನದ ವತಿಯಿಂದ ಆಸನಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಅವುಗಳನ್ನು ಬದಿಗಿರಿಸಿ, ನಿಂತುಕೊಂಡೇ ಗೌರವ ಸ್ವೀಕರಿಸಿ, ಸರಳತೆ ಮೆರೆದರು. ಬಳಿಕ, ಅವರು ಗರ್ಭಗುಡಿ ಸುತ್ತ ಪ್ರದಕ್ಷಿಣೆ ಬಂದು ಆದಿ ಶಂಕರಾಚಾರ್ಯ ಪೀಠ, ಚಿನ್ನದ ರಥ, ಶ್ರೀ ವೀರಭದ್ರ ಹಾಗೂ ಪರಿಹಾರ ದೇವತೆಗಳ ದರ್ಶನ ಪಡೆದರು.ಸ್ವತಃ ಕಾರು ಚಲಾಯಿಸಿದ ವಿಜಯ್:

ಕೊಲ್ಲೂರಿನಲ್ಲಿ ದೇವಿಯ ದರ್ಶನ ಪಡೆದ ಬಳಿಕ ದೇವಸ್ಥಾನದ ಮುಖ್ಯದ್ವಾರದಿಂದ ಹೊರ ಬಂದ ವಿಜಯ್, ಬೆಳಗ್ಗೆಯಿಂದಲೇ ಕಾದು ನಿಂತಿದ್ದ ಅಭಿಮಾನಿಗಳತ್ತ ಕೈ ಬೀಸಿ ಅವರ ಹರ್ಷೋದ್ಗಾರಕ್ಕೆ ಸ್ಪಂದಿಸಿದರು. ಬಳಿಕ ತಮ್ಮ ಕಾರಿನ ಚಾಲಕನ ಸ್ಥಾನದಲ್ಲಿ ತಾವೇ ಕುಳಿತು ವಾಹನ ಚಲಾಯಿಸುತ್ತಾ ಸುಮಾರು 130 ಕಿ.ಮೀ. ದೂರದ ಮಂಗಳೂರು ವಿಮಾನ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಿದರು. ಸುರಿವ ಮಳೆಯನ್ನೂ ಲೆಕ್ಕಿಸದೆ ಕೊಲ್ಲೂರಿನಿಂದ ಕುಂದಾಪುರದವರೆಗೆ ರಸ್ತೆ ಬದಿಯಲ್ಲಿ ನೆರೆದಿದ್ದ ಅಭಿಮಾನಿಗಳು ನೆಚ್ಚಿನ ನಟ ಹಾಗೂ ಮುಖ್ಯಮಂತ್ರಿಗೆ ಜಯಘೋಷ ಮೊಳಗಿಸಿದರು.

ಇದಕ್ಕೂ ಮೊದಲು, ಕೊಲ್ಲೂರಿಗೆ ತೆರಳಲು ಮಧ್ಯಾಹ್ನ 1.40ರ ಸುಮಾರಿಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದ ವಿಜಯ್‌ ಅವರನ್ನು ರಾಜ್ಯ ಸರ್ಕಾರದ ಪರವಾಗಿ ಆರೋಗ್ಯ ಸಚಿವ ಯು.ಟಿ.ಖಾದರ್‌ ಬರಮಾಡಿಕೊಂಡರು.

ಎಂಜಿಆರ್‌ರಿಂದ ಚಿನ್ನದ ಖಡ್ಗ:

ದೇವಸ್ಥಾನದ ಪುರೋಹಿತ ಸುರೇಶ್ ಭಟ್, 1977ರ ತನಕ ದೇವಸ್ಥಾನಕ್ಕೆ ಖಡ್ಗ ಸಮರ್ಪಿಸಿದ ಇತಿಹಾಸ ಇರಲಿಲ್ಲ. ಬಳಿಕ, ಎಂಜಿಆರ್ ಅವರು ಚಿನ್ನದ ಖಡ್ಗವನ್ನು ಮೂಕಾಂಬಿಕಾ ದೇವಿಗೆ ಸಮರ್ಪಿಸಿದ್ದರು. ನಂತರ ಅವರು ಮುಖ್ಯಮಂತ್ರಿ ಆಗಿದ್ದರು. ಆ ಬಳಿಕ ಸುಮಾರು ನೂರು ಬೆಳ್ಳಿಯ ಖಡ್ಗಗಳು ಹಾಗೂ ಮೂರು ಚಿನ್ನದ ಖಡ್ಗಗಳು ದೇವಸ್ಥಾನಕ್ಕೆ ಕೊಡುಗೆಯಾಗಿ ಬಂದಿವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ, ಕ್ರಮಕ್ಕೆ ಆಗ್ರಹ
ವಿದ್ಯಾರ್ಥಿಗಳು ತಂತ್ರಜ್ಞಾನ ಅಭಿವೃದ್ಧಿ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಿ