ಕನ್ನಡಪ್ರಭ ವಾರ್ತೆ ಟೇಕಲ್ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸುಮಾರು ೫೦೦ ಸುಸಜ್ಜಿತ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತಿದ್ದು, ಇದಕ್ಕೆ ೨೫೦೦ ಕೋಟಿ ರೂ.ಗಳ ವಿಶೇಷ ಅನುದಾನದ ಮೀಸಲಿಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.ಮಾಲೂರು ತಾಲೂಕಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ತವರೂರು ಮಾಸ್ತಿಯಲ್ಲಿ ಎಂಟು ಕೋಟಿ ವೆಚ್ಚದಲ್ಲಿ ಓಸಾಟ್ ಸಂಸ್ಥೆ ನವೀಕರಿಸಿರುವ ನೂರನೇ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡವನ್ನು ಅವರು ಉದ್ಘಾಟಿಸಿ ಮಾತನಾಡಿದರು.ದಾನಿಗಳ ಕೊಡುಗೆಗೆ ಶ್ಲಾಘನೆ
ದಾನಿಗಳಾದ ಲಿಂಡ ಮತ್ತು ಜನಾರ್ದನ್ ಟಕ್ಕರ್ ಫ್ಯಾಮಿಲಿ ಫೌಂಡೇಶನ್ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣಕ್ಕಾಗಿ ತಮ್ಮದೇಯಾದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ, ಯಾವುದೋ ರಾಜ್ಯದಲ್ಲಿ ಹುಟ್ಟಿ ಮೈಸೂರಿನಲ್ಲಿ ಶಿಕ್ಷಣ ಪಡೆದು ಮಕ್ಕಳಿಗಾಗಿ ಶಿಕ್ಷಣ ನೀಡಬೇಕೆಂಬ ಹಂಬಲ ನಿಜಕ್ಕೂ ಅಭಿನಂದನೀಯ. ಇವರ ಸಾಧನೆ ಅಮೋಘವಾಗಿದ್ದು ಶಿಕ್ಷಣಕ್ಕೆ ಇನ್ನು ಹೆಚ್ಚು ಇವರ ಸೇವೆ ನೀಡಲಿ ಎಂದು ಹಾರೈಸಿದರು. ರಾಜ್ಯದಲ್ಲಿ ಹೆಚ್ಚು ಸಮಸ್ಯೆಯಿರುವ ಇಲಾಖೆ ಎಂದರೆ ಶಿಕ್ಷಣ ಇಲಾಖೆ. ಅದನ್ನು ಸರಿದೂಗಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು, ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಎರಡನೇ ಪರೀಕ್ಷೆ ಮಾಡಿ ಎಷ್ಟೋ ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ, ದೇಶದ ಭವಿಷ್ಯವೇ ಮಕ್ಕಳು. ನಿಮ್ಮಗೆ ಉತ್ತಮ ವಿದ್ಯಾಭ್ಯಾಸ ನೀಡುವುದೇ ನಮ್ಮ ಧ್ಯೇಯ ಎಂದು ತಿಳಿಸಿದರು.ದಾನಿಗಳ ಸಹಕಾರ ಅಗತ್ಯಶಿಕ್ಷಣದೊಂದಿಗೆ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಸರ್ಕಾರದ ಧ್ಯೇಯವಾಗಿದೆ. ಅದಕ್ಕೆ ಅಜಿತ್ ಪ್ರೇಮ್‌ಜಿ ಫೌಂಡೇಶನ್ ನೀಡುವ ೧೫೯೧ ಕೋಟಿ ರು.ಗಳ ಕೊಡುಗೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳ ಸಹಕಾರ ಮುಖ್ಯವೆಂದು ತಿಳಿಸಿದರು.ಸಚಿವರಿಂದ ₹5 ಲಕ್ಷ ನೆರವು
ದಾನಿಗಳಾದ ಜನಾರ್ದನ್ ಠಕ್ಕರ್ ಕುಟುಂಬದಿಂದ ಕೆಪಿಎಸ್ ಶಾಲೆ ನವೀಕರಣವಾಗಿದ್ದು, ಇಂದು ಲೋಕಾರ್ಪಣೆಯಾಗಿದೆ ಇದರ ನಿರ್ವಹಣೆಗೆ ಗ್ರಾಮದ ಗ್ರಾಮದ ಹಲವಾರು ದಾನಿಗಳು ತಮ್ಮದೇ ಆದ ಸಹಾಯ ಹಸ್ತ ನೀಡಿದ್ದು ಅದಕ್ಕೆ ನನ್ನ ಸಂಬಳ ಹಣ ೫ ಲಕ್ಷ ರೂ.ಗಳನ್ನು ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು. ಲಿಂಡಾ, ಜನಾರ್ಧನ್ ಠಕ್ಕರ್ ದಂಪತಿಗಳು ಸೇವೆ ಹಾಗೂ ಅವರ ಟೀಮ್ ವರ್ಕ್ ಅನನ್ಯವಾಗಿದೆ ಎಂದು ತಿಳಿಸಿದರು.ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಮಾಲೂರು ತಾಲೂಕಿನ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹುಟ್ಟಿದ ಗ್ರಾಮದಲ್ಲಿ ವಿಶೇಷವಾದ ಕೆಪಿಎಸ್ ಶಾಲೆ ನವೀಕರಣಗೊಂಡಿದ್ದು ತಾಲೂಕಿಗೆ ಹೆಮ್ಮೆಯ ಸಂಗತಿ, ಅದಕ್ಕೆ ಮೂಲ ಕಾರಣರಾದ ಲಿಂಡಾ ಜನಾರ್ಧನ್ ಠಕ್ಕರ್ ದಂಪತಿ ಹಾಗೂ ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಎರಡು ವರ್ಷದಿಂದ ಪ್ರತಿಬಾರಿಯೂ ನನ್ನ ಬಳಿ ಬಂದಾಗ ಅವರಿಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಿದ್ದು, ಅದರಂತೆ ಮಾಸ್ತಿ ಗ್ರಾಪಂ, ಇಲ್ಲಿನ ಸಾರ್ವಜನಿಕರು, ಜನಪ್ರತಿನಿಧಿಗಳು, ಶಾಲಾ ಅಭಿವೃದ್ಧಿ ಸಮಿತಿ, ಅದಕ್ಕೆ ಪೂರಕವಾಗಿ ಸಹಕಾರ ನೀಡಿದ್ದಾರೆ ಎಂದರು.
ಶಾಸಕರಿಂದ 1 ವರ್ಷದ ವೇತನ ಕೊಡುಗೆನಾನು ಯಾವುದೇ ಸಮಯದಲ್ಲೂ ವಿಧಾನಸಭೆಯಲ್ಲಿ ನನ್ನ ಯಾವುದೇ ತಾಲೂಕಿನ ಕೆಲಸ ಕಾರ್ಯಗಳಿಗೆ ಹೋದಾಗ ಅತಿ ಹೆಚ್ಚು ಸಹಕಾರ ನೀಡುವುದು ನಮ್ಮ ಶಿಕ್ಷಣ ಸಚಿವ ಮಧುಬಂಗಾರಪ್ಪ. ಉತ್ತಮ ರೀತಿಯಿಂದ ಕಾರ್ಯನಿರ್ವಹಿಸುತ್ತಿದ್ದು ಶಿಕ್ಷಣ ಇಲಾಖೆಗೆ ತಮ್ಮದೇ ಆದ ಸೇವೆ ಮಾಡುತ್ತಿದ್ದಾರೆ, ಅದರಂತೆ ನೂತನ ಕೆಪಿಎಸ್ ಶಾಲೆಯ ಉದ್ಘಾಟನೆ ನಂತರ ಅದರ ನಿರ್ವಹಣೆಗೆ ಗ್ರಾಮದ ಜನರು ವಿವಿಧ ರೀತಿಯಲ್ಲಿ ತಮ್ಮ ಸಹಕಾರ ನೀಡುತ್ತಿದ್ದು ತಾವೂ ಕೂಡ ಶಾಸಕರ ಸಂಬಳದ ಒಂದು ವರ್ಷದ ಹಣ ನೀಡುವುದಾಗಿ ಘೋಷಿಸಿದರು. ದಾನಿಗಳಿಗೆ ಸನ್ಮಾನ:ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಕೆ.ವೈ.ನಂಜೇಗೌಡ, ದಾನಿಗಳಾದ ಲಿಂಡಾ ಜನಾರ್ದನ್ ಠಕ್ಕರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಬಿಇಓ ಎಚ್.ಎಸ್.ಚಂದ್ರಕಾಲರಿಂದ ಪ್ರಾಸ್ತಾವಿಕ ಭಾಷಣ ಮಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ದಿನ್ನಳ್ಳಿ ರಮೇಶ್ ೧೬೫೦ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಶಿಕ್ಷಣ ಸಚಿವರಿಂದ ಮಕ್ಕಳಿಗೆ ವಿತರಿಸಿದರು.
ಎಂಎಲ್ಸಿಗಳಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಮಾಸ್ತಿ ಗ್ರಾಪಂ ಅಧ್ಯಕ್ಷೆ ರಾಜಮ್ಮ ಮುನಿಯಪ್ಪ, ಉಪಾಧ್ಯಕ್ಷ ಎಂ.ವಿ.ಚೇತನ್ ಕುಮಾರ್, ಕೆಪಿಎಸ್ಸಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಕ್ರಂಪಾಷ, ಡಿಡಿಪಿಐ ಕೃಷ್ಣಮೂರ್ತಿ, ಕೆಪಿಎಸ್‌ಸಿ ಶಾಲಾ ಪ್ರಾಂಶುಪಾಲ ರವಿಕುಮಾರ್, ಉಪಪ್ರಾಂಶುಪಾಲ ವೆಂಕಟಪ್ಪ, ಮುಖ್ಯಶಿಕ್ಷಕಿ ಗೀತಾ, ತಹಸೀಲ್ದಾರ್ ಎಂ.ವಿ.ರೂಪ, ತಾ.ಪಂ ಇಓ ಕೃಷ್ಣಪ್ಪ, ಟ್ರಸ್ಟಿಗಳಾದ ಅಶೋಕ್ ಕುಮಾರ್, ಕೇದಾರ್, ಟ್ರಸ್ಟಿನ ಸಿ.ಇ.ಒ ಬಾಲಕೃಷ್ಣರಾವ್, ಭಾರದ್ವಾಜ್, ಹರೀಶ್, ಸುಧೀರ್ ಉಲ್ಲೇ ಮನೆ ಮತ್ತಿತರರು ಇದ್ದರು.