ಶಿವಮೊಗ್ಗ: ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದಿಂದ ಆ.16ರಂದು ಸಂಜೆ 5 ಗಂಟೆಗೆ ಕೃಷಿನಗರದಲ್ಲಿರುವ ತರಳಬಾಳು ಹಾಸ್ಟೆಲ್ ಹಿಂಭಾಗದಲ್ಲಿ “ಸಮರ್ಪಣೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭುತೋಂಟದಾರ್ಯ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಡಾ.ಬಸವಮರಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿದ್ಯಾರ್ಥಿನಿಲಯವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಶಾಸಕರಾದ ಬಿ.ಕೆ.ಸಂಗಮೇಶ್ವರ್, ಶಾಸಕ ಎಸ್.ಎನ್.ಚನ್ನಬಸಪ್ಪ, ಬಿ.ವೈ.ವಿಜಯೇಂದ್ರ, ಸಮಾಜದ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಗಣ್ಯರು, ಸಾಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜದ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು. ಈ ಸಮಾರಂಭದಲ್ಲಿ 2000ಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಸಿ.ಜಿ.ಪರಮೇಶ್ವರಪ್ಪ, ನಿರ್ದೇಶಕರಾದ ಕೆ.ಮೋಹನ್‍ಕುಮಾರ್, ಕೆ.ಪ್ರಸನ್ನ, ಕೆ.ವಿ.ಲೋಕೇಶಪ್ಪ, ಎ.ಜಿ.ಸಿದ್ಧಣ್ಣ, ಡಾ.ಟಿ.ಎಚ್.ನಟರಾಜ, ಎನ್.ಎಸ್.ಲವಕುಮಾರಸ್ವಾಮಿ, ಎಚ್.ಎಸ್.ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.
ಸಂಘದಿಂದ ಹಲವು ಸಮಾಜಮುಖಿ ಕಾರ್ಯಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ 2003ರಲ್ಲಿ ಆರಂಭಗೊಂಡಿದ್ದು, ಅಂದಿನಿಂದ ಇಂದಿನವರೆಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳು ಸಂಘದಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಕೃಷಿನಗರದಲ್ಲಿ ಸೂಡಾದಿಂದ ನಿವೇಶನ ಪಡೆದು, 2 ಕೋಟಿ ರು. ವೆಚ್ಚದಲ್ಲಿ ನಾಲ್ಕು ಮಹಡಿಯ 25 ಕೊಠಡಿಗಳುಳ್ಳ ಮಹಿಳಾ ವಿದ್ಯಾರ್ಥಿನಿಲಯಕ್ಕೆ 2020ರಲ್ಲಿ ಕಾಮಗಾರಿ ಆರಂಭಿಸಿ 2025ರಲ್ಲಿ ಕಾಮಗಾರಿ ಮುಗಿಸಿ ಈಗ ಉದ್ಘಾಟನೆಗೆ ಸಜ್ಜಾಗಿದೆ. ಜೊತೆಗೆ ಕಾರ್ಪೋರೇಟ್ ಮಾದರಿಯ ಕಚೇರಿ ಹಾಗೂ ಅತಿಥಿಗೃಹ ನಿರ್ಮಿಸಲಾಗಿದೆ. ಪ್ರತಿವರ್ಷವೂ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಸ್ಕೂಲ್ ಬ್ಯಾಗ್, ಶೂ, ಪುಸ್ತಕ-ನೋಟ್ ಪುಸ್ತಕಗಳನ್ನು ವಿತರಿಸಿ, ಪೋಷಕರ ಆರ್ಥಿಕ ಹೊರೆ ಕಡಿಮೆ ಮಾಡುವ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.