‘ಸಚಿವ ಸುಧಾಕರ್‌ರಿಂದ ಶೇ.೧೦ ಕಮಿಷನ್‌ಗೆ ಬೇಡಿಕೆ’

KannadaprabhaNewsNetwork |  
Published : Apr 20, 2025, 01:53 AM IST
ಜೆ ಕೆ ಕೃಷ್ಣಾ | Kannada Prabha

ಸಾರಾಂಶ

ಸಚಿವರು ತಮ್ಮಿಂದ ೧೦ರಷ್ಟು ಕಮಿಷನ್ ಕೇಳುತ್ತಿದ್ದಾರೆಂದು ಹಲವು ಗುತ್ತಿಗೆದಾರರು ತಮಗೆ ತಿಳಿಸಿದ್ದು ಇದಕ್ಕೆ ಯಲುವಳ್ಳಿ ಸೊಣ್ಣೇಗೌಡರು ಸಾಕ್ಷಿ ಎಂದು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಹೇಳಿದ್ದಾರೆ. ಒಂದೊಮ್ಮೆ ಕಮಿಷನ್ ಹಣ ನೀಡದಿದ್ದರೆ ಟೆಂಡರ್ ರದ್ದು ಪಡಿಸುವ, ಮರು ಟೆಂಡರ್ ಮಾಡುವುದಾಗಿ ಗುತ್ತಿಗೆದಾರರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ತಮ್ಮ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ಮಂಜೂರಾದ ಕಾಮಗಾರಿಗಳಲ್ಲಿ ಶೇ.೧೦ರಷ್ಟು ಕಮಿಷನ್ ಹಣವನ್ನು ಗುತ್ತಿಗೆದಾರರಿಂದ ಸಚಿವ ಡಾ.ಎಂ.ಸಿ.ಸುಧಾಕರ್ ಪಡೆಯುತ್ತಿದ್ದಾರೆಂದು ಮಾಜಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ಆರೋಪಿಸಿದರು.

ನಗರದ ಜೆ ಕೆ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವ ಸುಧಾಕರ್ ಇಂದು ನಡೆಸುತ್ತಿರುವ ಗುದ್ದಲಿ ಪೂಜೆ ಮಾಡಿದ ಯೋಜನೆಗಳು ತಮ್ಮ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ಮಂಜೂರಾದ ಯೋಜನೆಗಳು ಎಂದರು.

ಹಣ ನೀಡದಿದ್ದರೆ ಗುತ್ತಿಗೆ ರದ್ದು

ಈ ವಿಚಾರವಾಗಿ ಗುತ್ತಿಗೆದಾರರು ಸಚಿವರು ತಮ್ಮಿಂದ ೧೦ರಷ್ಟು ಕಮಿಷನ್ ಕೇಳುತ್ತಿದ್ದಾರೆಂದು ಹಲವು ಗುತ್ತಿಗೆದಾರರು ತಮಗೆ ತಿಳಿಸಿದ್ದು ಇದಕ್ಕೆ ಯಲುವಳ್ಳಿ ಸೊಣ್ಣೇಗೌಡರು ಸಾಕ್ಷಿ. ಒಂದೊಮ್ಮೆ ಕಮಿಷನ್ ಹಣ ನೀಡದಿದ್ದರೆ ಟೆಂಡರ್ ರದ್ದು ಪಡಿಸುವ, ಮರು ಟೆಂಡರ್ ಮಾಡುವುದಾಗಿ ಗುತ್ತಿಗೆದಾರರನ್ನು ಬ್ಲಾಕ್‌ಮೇಲ್ ಮಾಡುವ ಮೂಲಕ ಸಚಿವರು ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಲೇವಡಿ ಮಾಡಿದರು.

ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಪ್ರಕರಣ

ಯಗವಕೋಟೆಯ ಶಿಕ್ಷಕಿ ಹೊಡೆತದಿಂದ ಕಣ್ಣು ಕಳೆದುಕೊಂಡಿರುವ ವಿದ್ಯಾರ್ಥಿಯ ನ್ಯಾಯ ಒದಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ಪೊಲೀಸರಿಗೆ ಹಲವು ಬಾರಿ ದೂರು ಸಲ್ಲಿಸಿದರು ಅಧಿಕಾರಿಗಳು ಸಚಿವರ ಅಣತಿಯಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಈ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗುವುದನ್ನು ಮನಗಂಡ ನೌಕರರ ಸಂಘದ ಅಧ್ಯಕ್ಷರಾದಿಯಾಗಿ ಹಲವರು ವಿದ್ಯಾರ್ಥಿಯ ಚಿಕಿತ್ಸೆಗಾಗಿ ೫೦ಸಾವಿರ ರೂಗಳನ್ನು ಸಂಗ್ರಹಿಸಿ ಅದರಲ್ಲಿ ೩೦ ಸಾವಿರ ಫೋನ್ ಪೇ ಮೂಲಕ ಪಾವತಿಸಿದ್ದು, ಉಳಿದ ೨೦ ಸಾವಿರ ರು.ಗಳು ಯಾರ ಪಾಲಾಗಿದೆಯೋ ಗೊತ್ತಿಲ್ಲ ಎಂದರು.

ಮಗುವಿಗೆ ಹೊಡೆದ ಪ್ರಕರಣ ತಮ್ಮ ಗಮನಕ್ಕೆ ತಂದು ಮಗುವಿಗೆ ನ್ಯಾಯ ದೊರಕಿಸಿಕೊಡುವಂತೆ ಪೋಷಕರು ವಿನಂತಿಸಿದಾಗ ಅನಿವಾರ್ಯವಾಗಿ ತಾವು ರಂಗ ಪ್ರವೇಶ ಮಾಡಬೇಕಾಗಿ ಬಂತು. ಅಧಿಕಾರಿಗಳು ಅಂದೇ ಕಾನೂನು ರೀತ್ಯಾ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರೆ ನಾನು ರಂಗ ಪ್ರವೇಶ ಮಾಡುವ ಸಂದರ್ಭವೇ ಬರುತ್ತಿರಲಿಲ್ಲ ಎಂದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ