ತಾಲೂಕು ಕೇಂದ್ರವಾದರೂ ಚೇಳೂರಿಗಿಲ್ಲ ಬಸ್‌ ನಿಲ್ದಾಣ

KannadaprabhaNewsNetwork |  
Published : Apr 11, 2025, 12:34 AM IST
ಚೇಳೂರು ಪಟ್ಟಣದ ಬಾಗೇಪಲ್ಲಿ ಮುಖ್ಯರಸ್ತೆಯಲ್ಲಿ ಪ್ರಯಾನಿಕರು ಮಕ್ಕಳನ್ನು ಹೋತ್ತು ಬಿಸಿಳಿನಲ್ಲಿ ಅಂಗಡಿಯ ಮುಂದೆ ಕುಳಿತು ಬಸ್ಸಿಗಾಗಿ ಕಾಯುತ್ತಿರುವುದು.  | Kannada Prabha

ಸಾರಾಂಶ

ಚೇಳೂರು ಪಟ್ಟಣದಿಂದ ಬಾಗೇಪಲ್ಲಿ ಮುಖ್ಯ ರಸ್ತೆ, ಚಿಂತಾಮಣಿ ರಸ್ತೆ ಹಾಗೂ ಆಂಧ್ರದ ಕಂದುಕೂರು ಕಡೆ ತೆರಳುವ ನಿಲುಗಡೆಯಲ್ಲಿ ಬಸ್ ತಂಗುದಾಣ ಇಲ್ಲದೆ ಪ್ರಯಾಣಿಕರು ರಸ್ತೆಯ ಪಕ್ಕದ ಅಂಗಡಿಗಳ ಮುಂದೆ ಮಳೆ ಹಾಗೂ ಬಿಸಿಲಿಗೆ ಹಿರಿಯ ನಾಗರಿಕರು, ಪುಟ್ಟ ಮಕ್ಕಳನ್ನು ಕಂಕುಳಲ್ಲಿರಿಸಿ ತಲೆಯ ಮೇಲೆ ಸೆರಗನ್ನು ಹಾಕಿ ಬಸ್ಸಿಗಾಗಿ ಕಾಯುತ್ತಾ ನಿಲ್ಲುವಂತಾಗಿದೆ.

ಕನ್ನಡಪ್ರಭ ವಾರ್ತೆ ಚೇಳೂರು

ಪಟ್ಟಣದಲ್ಲಿ ಬಗೆದಷ್ಟು ಸಮಸ್ಯೆಗಳು ಹುಟ್ಟುತ್ತಲೇ ಇವೆ, ಅದರಲ್ಲೂ ಮುಖ್ಯವಾಗಿ ಸಾರ್ವಜನಿಕರ ಪ್ರಯಾಣಕ್ಕೆ ಬಸ್ ತಂಗುದಾಣ ನಿರ್ಮಿಸದೇ ಇರುವುದು ಬಹು ದೊಡ್ಡ ಸಮಸ್ಯೆಯಾಗಿದೆ.

ಚೇಳೂರು ಹೋಬಳಿಯನ್ನು ತಾಲೂಕಾಗಿ ಘೋಷಣೆ ಮಾಡಿದ್ದು, ಹೆಸರಿಗೆ ಮಾತ್ರ ತಾಲೂಕು ಕಚೇರಿ ಕೂಡ ಪ್ರಾರಂಭವಾಗಿದೆ. ಅತೀ ಹೆಚ್ಚು ವಾಹನ ಸಂಚಾರ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನೂತನ ತಾಲೂಕು ಕೇಂದ್ರ ಚೇಳೂರು ಪಟ್ಟಣಕ್ಕೆ ಬಸ್ ನಿಲ್ದಾಣವೇ ಇಲ್ಲ ಎಂಬುದು ಆಶ್ಚರ್ಯದ ಸಂಗತಿ.

ರಸ್ತೆ ಬದಿ ಬಸ್‌ ನಿಲುಗಡೆ

ಪಟ್ಟಣದಿಂದ ಬಾಗೇಪಲ್ಲಿ ಮುಖ್ಯ ರಸ್ತೆ, ಚಿಂತಾಮಣಿ ರಸ್ತೆ ಹಾಗೂ ಆಂಧ್ರದ ಕಂದುಕೂರು ಕಡೆ ತೆರಳುವ ನಿಲುಗಡೆಯಲ್ಲಿ ಬಸ್ ತಂಗುದಾಣ ಇಲ್ಲದೆ ಪ್ರಯಾಣಿಕರು ರಸ್ತೆಯ ಪಕ್ಕದ ಅಂಗಡಿಗಳ ಮುಂದೆ ಮಳೆ ಹಾಗೂ ಬಿಸಿಲಿಗೆ ಹಿರಿಯ ನಾಗರಿಕರು, ಪುಟ್ಟ ಮಕ್ಕಳನ್ನು ಕಂಕುಳಲ್ಲಿರಿಸಿ ತಲೆಯ ಮೇಲೆ ಸೆರಗನ್ನು ಹಾಕಿ ಬಸ್ಸಿಗಾಗಿ ಕಾಯುತ್ತಾ ನಿಲ್ಲುವಂತಾಗಿದೆ.

ಮುಖ್ಯವಾಗಿ ವಾರದ ಸಂತೆ ದಿನವಾದ ಶುಕ್ರವಾರವಂತೂ ಪಟ್ಟಣದ ಪರಿಸ್ಥಿತಿ ಹೇಳತೀರದು. ಕಂದುಕೂರು ರಸ್ತೆಯಲ್ಲಿ ಹಾಗೂ ಮುಖ್ಯ ವೃತ್ತದಲ್ಲಿ ಎಲ್ಲೆಂದರಲ್ಲಿ ವಾಹನಗಳದ್ದೇ ಕಾರುಬಾರು. ಇದರೊಂದಿಗೆ ಬಸ್ ನಿಲ್ದಾಣವಿಲ್ಲದೆ ಬಸ್‌ಗಳನ್ನು ರಸ್ತೆಯಲ್ಲೇ ನಿಲ್ಲಿಸಲಾಗುತ್ತಿದೆ, ಅದರಲ್ಲೂ ಅಂಗಡಿಯ ಜಾಹೀರಾತು ಫಲಕಗಳನ್ನು ರಸ್ತೆಗೆ ಹಾಕಿದ್ದಾರೆ, ಇದರಿಂದ ವಾಹನಗಳನ್ನು ರಸ್ತೆಯ ಮಧ್ಯಭಾಗದಲ್ಲಿ ನಿಲುಗಡೆ ಮಾಡುವುದರಿಂದ ವಾಹನ ನಿಯಂತ್ರಣ ವ್ಯವಸ್ಥೆ ಮತ್ತಷ್ಟು ಬಿಗಡಾಯಿಸಿದೆ.

ಬಿಸಿಲು, ಮಳೆಯಲ್ಲಿ ಪ್ರಯಾಣಿಕರು

ರಸ್ತೆ ಅಗಲೀಕರಣ ವೇಳೆ ಪಟ್ಟಣದ ಹೃದಯ ಭಾಗದಲ್ಲಿ ಹಾಗೂ ರಸ್ತೆಯ ಅಕ್ಕ ಪಕ್ಕದಲ್ಲಿ ಬೃಹತ್‌ ಮರಗಳನ್ನು ತೆರವುಗೊಳಿಸಲಾಯಿತು. ಆದರೆ ಅಂದಿನಿಂದ ಇಂದಿನವರೆಗೂ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಇದರ ಆಲೋಚನೆ ಇಲ್ಲದ ಪರಿಣಾಮ ಪ್ರಯಾಣಿಕರು ಮಳೆ, ಬಿಸಿಲೆನ್ನದೆ ಬಸ್ಸಿಗಾಗಿ ಬಿಸಿಲಲ್ಲಿ ಪರಿತಪಿಸುವಂತಾಗಿದೆ.

ಚೇಳೂರು ಪಟ್ಟಣ ತ್ವರಿತಗತಿಯಲ್ಲಿ ಬೆಳೆಯುತ್ತಿದ್ದು, ವಿವಿಧ ಊರುಗಳಿಂದ ಬಂದು ಹೋಗುವ ಬಸ್‌ಗಳ ಸಂಖ್ಯೆಯೂ ಅಧಿಕಗೊಂಡಿದೆ. ಪ್ರಯಾಣಿಕರೂ ಹೆಚ್ಚಾಗಿದ್ದಾರೆ. ಜೊತೆಗೆ ಚೇಳೂರು ಸುತ್ತಮುತ್ತಲಿನ ಊರುಗಳಿಂದ ಅಧಿಕ ಸಂಖ್ಯೆಯಲ್ಲಿ ವಾಹನಗಳು ಬರುತ್ತಿರುವುದರಿಂದ ನಿಲುಗಡೆಗೆ ಅವಕಾಶವಿಲ್ಲದಂತಾಗಿದೆ.

ವಾಹನಗಳ ಅಡ್ಡಾದಿಡ್ಡಿ ನಿಲುಗಡೆ

ಮುಖ್ಯ ರಸ್ತೆಗಳೇ ಬಸ್ ನಿಲ್ದಾಣಗಳಾಗಿ ಮಾರ್ಪಟ್ಟಿವೆ. ಇದರಿಂದ ಮುಖ್ಯರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ವಾಹನಗಳ ನಿಲುಗಡೆ ಹೆಚ್ಚಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯೂ ಅಪಘಾತಕ್ಕೆ ಎಡೆಮಾಡಿಕೊಡುವಂತಿದೆ.

ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪಟ್ಟಣದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ, ಪ್ರಯಾಣಿಕರಿಗೆ ಸುಸಜ್ಜಿತ ಬಸ್ ನಿಲ್ದಾಣದ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಿ ಅಪಘಾತ ಹಾಗೂ ಟ್ರಾಫಿಕ್ ಜಾಮ್ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.

ಕ.ದ.ಸಂ. ಸ.ತಾಲೂಕು ಸಂಚಾಲಕ ಜಿ ನರಸಿಂಹಪ್ಪ ಅಭಿಪ್ರಾಯ ವ್ಯಕ್ತಪಡಿಸಿ, ಪಟ್ಟಣದಿಂದ ಬಾಗೇಪಲ್ಲಿ, ಚಿಂತಾಮಣಿಗೆ ಹೋಗುವ ಮುಖ್ಯ ರಸ್ತೆಯ ಉದ್ದಕ್ಕೂ ಅಂಗಡಿಗಳಿಗೆ ಜಾಹೀರಾತು ಫಲಕ ಅಳವಡಿಸಲಾಗಿದೆ, ಇದರಿಂದ ಎಲ್ಲೆಂದರಲ್ಲಿ ವಾಹನಗಳನ್ನು ಸಹ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ.ಇಷ್ಟೆಲ್ಲಾ ನಿಯಮಗಳನ್ನು ಉಲ್ಲಂಘಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ತರಿಸಿದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ