ಅಭಿವೃದ್ಧಿ ಪಥಕ್ಕೆ ಅಡಿಪಾಯ ಹಾಕಿದ ಅರಸು

KannadaprabhaNewsNetwork | Published : Aug 21, 2024 12:41 AM

ಸಾರಾಂಶ

ರಾಜ್ಯ ಕಂಡಂತಹ ಧೀಮಂತ ನಾಯಕ, ಹಿಂದುಳಿದ ವರ್ಗಗಳ ದೇವರು ಎಂದೇ ಕರೆಯಲಾಗುವ ಡಿ. ದೇವರಾಜ ಅರಸು ಅವರ ಆಡಳಿತ ಸೂರ್ಯ- ಚಂದ್ರ ಇರುವವರಗೂ ರಾಜ್ಯಕ್ಕೆ ಮಾದರಿ.

ಕನ್ನಡಪ್ರಭ ವಾರ್ತೆ ಮೈಸೂರು

ಇಡೀ ರಾಜ್ಯ ಅಭಿವೃದ್ಧಿ ಪಥದತ್ತ ಹೋಗಲು ಅಡಿಪಾಯ ಹಾಕಿಕೊಟ್ಟವರು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮೈಸೂರು ಮಹಾನಗರ ಪಾಲಿಕೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸುರವರ 109ನೇ ಜನ್ಮ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಕಂಡಂತಹ ಧೀಮಂತ ನಾಯಕ, ಹಿಂದುಳಿದ ವರ್ಗಗಳ ದೇವರು ಎಂದೇ ಕರೆಯಲಾಗುವ ಡಿ. ದೇವರಾಜ ಅರಸು ಅವರ ಆಡಳಿತ ಸೂರ್ಯ- ಚಂದ್ರ ಇರುವವರಗೂ ರಾಜ್ಯಕ್ಕೆ ಮಾದರಿ. ಅವರ ಆಡಳಿತವನ್ನು ಇಂದಿಗೂ ರಾಜ್ಯ ಸರ್ಕಾರ ನೆನೆದು ನಡೆಯುತ್ತಿದೆ. ನಮ್ಮ ಮೈಸೂರು ಹೆಮ್ಮೆಯಾಗಿರುವ ಡಿ. ದೇವರಾಜ ಅರಸು ಅವರು ತಂದಂತಹ ಸುಧಾರಣೆಗಳನ್ನು ನಾವು ಇಂದು ಆಡಳಿತದಲ್ಲಿ ಅಳವಡಿಸಿಕೊಂಡು ಹೋಗುತ್ತಿದ್ದೇವೆ ಎಂದು ಅವರು ಹೇಳಿದರು.

ಅರಸು ಅವರ ಆಡಳಿತ ಅವಧಿಯಲ್ಲಿ ಭೂ ಸುಧಾರಣೆ, ಜೀತ ಪದ್ಧತಿ, ಪರಿಶಿಷ್ಟ ಜಾತಿ/ ಪಂಗಡದವರಿಗೆ ತಂದಂತಹ ಕಾಯ್ದೆಗಳು, ಅಂಗವಿಕಲರಿಗೆ ಮಾಸಿಕ ವೇತನ, ವಿಧವಾ ವೇತನ ಇವುಗಳು ಅವರು ತಂದಂತಹ ಸಾಮಾಜಿಕ ಸುಧಾರಣೆಗಳಾಗಿವೆ. ಆಶ್ರಯ ಯೋಜನೆಯಡಿ ನಿವೇಶನ ಇಲ್ಲದಿರುವವರಿಗೆ ಮನೆ ನೀಡುವ ಯೋಜನೆ ಇವೆಲ್ಲವೂ ಮರೆಯಲಾಗದಂತಹ ಕೊಡುಗೆಗಳು ಎಂದರು.

ಸಣ್ಣ ಗ್ರಾಮದಲ್ಲಿ ಹುಟ್ಟಿದ ಅವರು ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿ ಸ್ಥಾನ ತಲುಪಿದ್ದರು. ಇಂತಹ ಮುಖ್ಯಮಂತ್ರಿ ಪಡೆಯಲು ನಾವು ಪುಣ್ಯ ಮಾಡಿದ್ದೆವು. ಅವರು ಹಾಕಿ ಕೊಟ್ಟಿರುವ ಮಾರ್ಗಗಳು ನಮಗೆ ಮಾದರಿ ಅವುಗಳನ್ನು ರಾಜಕೀಯದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಅಭಿವೃದ್ಧಿಯ ಹರಿಕಾರ

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್ ಮಾತನಾಡಿ, ಡಿ. ದೇವರಾಜ ಅರಸು ಅವರು ಮಾಡಿದ ಕಾರ್ಯಗಳೇ ಅಭಿವೃದ್ಧಿಯ ಹರಿಕಾರ ಎಂಬ ಬಿರುದಿಗೆ ಸಾಕ್ಷಿಯಾಗಿವೆ. ಶೋಷಿತ ವರ್ಗಗಳ ಧ್ವನಿಯಾಗಿ ನಿಂತು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಡವರ ಅಭಿವೃದ್ಧಿಗಾಗಿ ಶ್ರಮಿಸಿದಂತವರು ಎಂದು ಹೇಳಿದರು.

ಅರಸುವನ್ನು ಪೂಜಿಸಬೇಕು

ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಡಿ.ದೇವರಾಜ ಅರಸು ಅವರು ತಮ್ಮ ಹೆಸರಿನಲ್ಲೇ ಇರುವಂತೆ ಜನರಿಗೆ ದೇವರ ರೂಪದಲ್ಲಿ ರಾಜನಂತೆ ಆಳ್ವಿಕೆ ನಡೆಸಿ ಅರಸನಂತೆ ಬದುಕಿದ್ದಂತಹ ಚೇತನ ವ್ಯಕ್ತಿ. ಮುಖ್ಯಮಂತ್ರಿ ಆಗಿ ಅಧಿಕಾರ ತೆಗೆದುಕೊಂಡ ನಂತರ ಬಡವರ ಪರ ನಿಂತರು. ರಾಷ್ಟ್ರ ರಾಜಕಾರಣ ಇತಿಹಾಸದಲ್ಲೇ ಉಳುವವನೇ ಭೂಮಿಯ ಒಡೆಯ ಕಾಯ್ದೆಗೆ ಒಪ್ಪಿಗೆ ಸೂಚಿಸಿ ಜಾರಿಗೆ ತಂದಂತಹ ಮೊದಲ ವ್ಯಕ್ತಿಯಾದ್ದಾರೆ. ಅಂತಹ ವ್ಯಕ್ತಿಯನ್ನು ಪೂಜಿಸಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಜಾನಪದ ವಿದ್ವಾಂಸ ಪ್ರೊ.ಹಿ.ಸಿ. ರಾಮಚಂದ್ರೇಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಮೊದಲಾದವರು ಇದ್ದರು.

----

ಕೋಟ್...

ಡಿ. ದೇವರಾಜ ಅರಸು ಅವರು ಭೂ ಸುಧಾರಣೆ ಕಾಯ್ದೆಯಿಂದ ಉಳುವವನೇ ಭೂಮಿಯ ಒಡೆಯ ಎಂದು ಮಾಡಿದ್ದ ಕಾರ್ಯ ಇಂದು ಪ್ರತಿಯೊಬ್ಬ ಬಡವರಿಗೆ ಸಿಕ್ಕಂತಹ ಜ್ಯೋತಿಯಾಗಿದೆ. ಇದರಿಂದ ಬಡವರಿಗೆ ಆರ್ಥಿಕ ಸಬಲೀಕರಣ ಸಿಕ್ಕಂತಾಗಿದೆ. ಇಂತಹ ಕಾಯ್ದೆಯಿಂದ ನಮ್ಮಂತಹ ಅನೇಕ ಬಡವರು ಹಿಂದುಳಿದ ವರ್ಗದ ಜನರಿಗೆ ಸಹಕಾರಿಯಾಗಿದೆ.

- ಡಾ.ಬಿ. ಪುಷ್ಪಾ ಅಮರನಾಥ್, ಉಪಾಧ್ಯಕ್ಷೆ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ

----

ಶತಮಾನಗಳಿಂದ ಬಂದಂತಹ ಜೀತ ಪದ್ಧತಿ, ಜಮೀನ್ದಾರಿ ಪದ್ಧತಿಯನ್ನು ಹೋಗಲಾಡಿಸಿ ಪ್ರತಿಯೊಬ್ಬ ವ್ಯಕ್ತಿಯೂ ಸಮಾನತೆಯಿಂದ ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಟ್ಟಂತವರು ಡಿ. ದೇವರಾಜ ಅರಸು ಅವರು. ಅಂತಹವರ ಗುಣ, ವ್ಯಕ್ತಿತ್ವ ಪ್ರತಿಯೊಬ್ಬ ಯುವ ಪೀಳಿಗೆಗೂ ಮಾದರಿ.

- ಡಾ.ಡಿ. ತಿಮ್ಮಯ್ಯ, ವಿಧಾನಪರಿಷತ್ತು ಸದಸ್ಯ

Share this article