ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ವಿಭಿನ್ನ ಪ್ರಯೋಗ

KannadaprabhaNewsNetwork |  
Published : Feb 23, 2024, 01:50 AM IST
 22ಎಚ್‌ಯುಕೆ-2ಎ ಗುಂಪು ಅಧ್ಯಯನ ನಿರತ ವಿದ್ಯಾರ್ಥಿಗಳಿಗೆ ಬಿಇಒ ಪ್ರಭಾವತಿ ಪಾಟೀಲ ಮಾರ್ಗದರ್ಶನ  | Kannada Prabha

ಸಾರಾಂಶ

ಹುಕ್ಕೇರಿ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಕಲು ರಹಿತ ಮತ್ತು ಮಕ್ಕಳಿಗೆ ಭಯ ಮುಕ್ತ ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಮೂಲಕ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪ್ರತಿಯೊಬ್ಬರ ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಬಹುಮುಖ್ಯ ಘಟ್ಟ ಎನಿಸಿದೆ. ವ್ಯಾಸಂಗದ ಪ್ರಮುಖ ಮೆಟ್ಟಿಲುಗಳಲ್ಲಿ ಎಸ್‌ಎಸ್‌ಎಲ್‌ಸಿಗೆ ಪ್ರಮುಖ ಸ್ಥಾನವಿದೆ. ಈ ಪರೀಕ್ಷೆಯನ್ನು ಯಶಸ್ವಿಯಾಗಿ ದಾಟಿದವರು ಉತ್ತಮ ಭವಿಷ್ಯ ಕಟ್ಟಿಕೊಳ್ಳುವುದು ನಿಶ್ಚಿತ. ಆದ್ದರಿಂದ ಪರೀಕ್ಷೆ ಬರೆಯಲು ಸಿದ್ಧರಾಗಿರುವ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಹುಕ್ಕೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಸರತ್ತು ನಡೆಸಿದೆ.

ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಶಿಕ್ಷಣ ಇಲಾಖೆ ಭಿನ್ನ - ವಿಭಿನ್ನ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಮಕ್ಕಳ ಪ್ರಯತ್ನಕ್ಕೆ ಪೂರಕವಾಗಿ ಶಿಕ್ಷಣ ಇಲಾಖೆ ಹತ್ತು - ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ಎಲ್ಲ ರೀತಿಯಲ್ಲಿ ಪರೀಕ್ಷೆಗೆ ಅಣಿಯಾಗುತ್ತಿದೆ. ಜತೆಗೆ ಮಕ್ಕಳ ಪರೀಕ್ಷಾ ಭಯ ನಿವಾರಣೆಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಮೂಲಕ ರಾಜ್ಯದಲ್ಲಿಯೇ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆ ಹೊಂದಿದೆ.2023 - 24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 25 ರಿಂದ ಆರಂಭವಾಗಲಿದ್ದು ದಿನಗಣನೆ ಶುರುವಾಗಿದೆ. ಹುಕ್ಕೇರಿ ತಾಲೂಕಿನಿಂದ ಪರೀಕ್ಷೆ ಬರೆಯಲು ಒಟ್ಟು 7027 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಪರೀಕ್ಷೆ ಎದುರಿಸಲು ಸಜ್ಜಾಗುತ್ತಿದ್ದಾರೆ. ಕಳೆದ 2022-23ನೇ ಸಾಲಿನಲ್ಲಿ ಮಾಡಿರುವ ಶೇ. 68 ಸಾಧನೆಗಿಂತ ಈ ಬಾರಿ ಶೇ. 85ಕ್ಕೂ ಹೆಚ್ಚು ಫಲಿತಾಂಶ ಸಾಧಿಸಲು ಗುರಿ ಹೊಂದಲಾಗಿದೆ.

ವಿಷಯವಾರು ಕಾರ್ಯಾಗಾರ, ಚರ್ಚಾಕೂಟ, ಪಾಸಿಂಗ್ ಪ್ಯಾಕೇಜ್, ಫೋನ್ ಇನ್ ಕಾರ್ಯಕ್ರಮ, ವಸತಿ ಸಹಿತ ತರಬೇತಿ, ಗೂಗಲ್ ಮೀಟ್‌ನಲ್ಲಿ ವೈಯಕ್ತಿಕ ಕಾಳಜಿ, ಕೌನ್ಸೆಲಿಂಗ್, ಟಾಪ್‌ - 10 ಮಕ್ಕಳಿಗೆ ಮಾರ್ಗದರ್ಶನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಬೋಧನೆ ಮತ್ತು ಕಾರ್ಯಾಗಾರ, ಶಾಲೆಗಳಲ್ಲಿ ಸಂಜೆ ಮತ್ತು ಬೆಳಗ್ಗೆ ತರಬೇತಿ, ಪತ್ರ-ಪ್ರಬಂಧ ಮನನ, ಸರಣಿ ಪರೀಕ್ಷೆಗಳ ನಡುವಿನ ಸಾಮ್ಯತೆ ಪರಿಶೀಲನೆ, ಅಂಕಗಳ ಪ್ರಗತಿಗೆ ಸ್ಪರ್ಧೆ ಏರ್ಪಡಿಸುವ ವಿಧಾನ, ಉತ್ತರ ಪತ್ರಿಕೆಗಳ ಹಂಚಿಕೊಳ್ಳುವುದು ಹೀಗೆ ಹಲವು ವಿಭಿನ್ನ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ.

ಸಾಮಾನ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಅಲ್ಲಿ ಕಲಿಯುತ್ತಿರುವ ಮಕ್ಕಳು ಟ್ಯೂಶನ್ ಹಾಗೂ ವಿಶೇಷ ತರಗತಿಗಳ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಾರೆ. ಆದರೆ, ಸರ್ಕಾರಿ ಶಾಲಾ ಮಕ್ಕಳಿಗೆ ಈ ಅವಕಾಶಗಳು ಕಡಿಮೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ವಿಶೇಷ ಪ್ರಯತ್ನಗಳೊಂದಿಗೆ ಮಕ್ಕಳಿಗೆ ಪರೀಕ್ಷೆ ತರಬೇತಿ ನೀಡುತ್ತಿದೆ.

ಹೆಚ್ಚಿನ ಸಂಖ್ಯೆಯ ಮಕ್ಕಳು ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ ವಿಷಯದಲ್ಲಿ ಅನುತ್ತೀರ್ಣರಾಗುತ್ತಿರುವ ಕಾರಣ ಈ ವಿಷಯಗಳಲ್ಲಿ ಮಕ್ಕಳ ಕಡತ ನಿರ್ವಹಿಸಲಾಗುತ್ತಿದೆ. ಗುಂಪು ಅಧ್ಯಯನ, ಘಟಕ ಪರೀಕ್ಷೆ, ರಸ ಪ್ರಶ್ನೆ ಮತ್ತು ವ್ಯಾಕರಣ ರೂಢಿ, ಪಂದ್ಯಗಳ ಕಂಠಪಾಠ, ಗಣಿತದ ಪ್ರಮೇಯಗಳನ್ನು ಬಿಡಿಸುವುದು, ವಿಷಯ ತಜ್ಞರಿಂದ ಪಾಠ ಬೋಧಿಸಲಾಗುತ್ತಿದೆ.

ತಾಲೂಕಿನ 19 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಲ್ಲ ಕೇಂದ್ರಗಳಲ್ಲಿ ಕಡ್ಡಾಯವಗಿ ಸಿಸಿ ಕ್ಯಾಮೆರಾ ಹಾಕಲಾಗಿದ್ದು, ಕಟ್ಟುನಿಟ್ಟಿನಿಂದ ನಕಲು ಮುಕ್ತ ಪರೀಕ್ಷೆ ನಡೆಸಲು ಇಲಾಖೆ ಕ್ರಮ ಕೈಗೊಂಡಿದೆ. ಮಕ್ಕಳು ಯಾವುದೇ ಕಾರಣಕ್ಕೂ ನಕಲು ಮಾಡುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದ್ದು ಪಾಲಕರಿಗೂ ಈ ಬಗ್ಗೆ ತಿಳಿವಳಿಕೆ ಮಾಡಲಾಗಿದೆ.----------

ಕೋಟ್

ಹುಕ್ಕೇರಿ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಕಲು ರಹಿತ ಮತ್ತು ಮಕ್ಕಳಿಗೆ ಭಯ ಮುಕ್ತ ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಮೂಲಕ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ.

- ಪ್ರಭಾವತಿ ಪಾಟೀಲ, ಬಿಇಒ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ