ವೇಣೂರು ಬಾಹುಬಲಿ ಮಹಾಮಜ್ಜನಕ್ಕೆ ವಿದ್ಯುಕ್ತ ಚಾಲನೆ

KannadaprabhaNewsNetwork | Published : Feb 23, 2024 1:49 AM

ಸಾರಾಂಶ

ಶುದ್ಧ ನಾರೀಕೇಳದ ನೀರಿನ ಅಭಿಷೇಕವಾದಾಗ ಕಲ್ಪವೃಕ್ಷದ ಸುವಾಸನೆ ಪರಿಸರದಲ್ಲಿ ಹರಡಿತು., ಕಬ್ಬಿನ ರಸದ ಧಾರೆ, ಹಾಲಿನ ನೊರೆ ಭುಜಬಲಿಯ ಅಂಗಾಂಗಳನ್ನು ಮೀಯಿಸಿದಾಗ ಶ್ರಾವಕರು ಪುಳಕಿತರಾದರು. ಬಳಿಕ ಕಲ್ಕ ಚೂರ್ಣ, ಅರಸಿನ ಪುಡಿ, ಕೇಸರಿ ಮಿಶ್ರಿತ ಜಲ, ಚಂದನ ಪುಡಿ, ಶ್ರೀಗಂಧ, ಅಷ್ಟ ಗಂಧದ ಅಭಿಷೇಕ ಮಾಡಲಾಯಿತು. ಭಕ್ತ ಜನರು ಆನಂದೋತ್ಸಾಹದಿಂದ ಜಯಘೋಷ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವೇಣೂರಿನ ತಿಮ್ಮಣ್ಣ ಅಜಿಲರು 1604ರಲ್ಲಿ ಪ್ರತಿಷ್ಠಾಪಿಸಿದ ಬಾಹುಬಲಿ ಮೂರ್ತಿಗೆ ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕವು ಗುರುವಾರ ವಿದ್ಯುಕ್ತವಾಗಿ ಆರಂಭಗೊಂಡಿತು.

ಪಶ್ಚಿಮದಲ್ಲಿ ಸೂರ್ಯನು ಅಸ್ತಮಿಸುತ್ತಿದ್ದಂತೆ ಫಲ್ಗುಣಿ ತೀರದಲ್ಲಿನ ತ್ಯಾಗಮೂರ್ತಿಗೆ 108 ಕಲಶಗಳ ಅಭಿಷೇಕ ಗುರುವಾರ ಸಂಜೆ 7 ಗಂಟೆಗೆ ಆರಂಭಗೊಂಡಿತು. ಜಿನ ಭಕ್ತರ ಹಲವಾರು ವರ್ಷಗಳ ಆಸೆ, ಆಕಾಂಕ್ಷೆ, ನಿರೀಕ್ಷೆಗಳಿಗೆ ಫಲ ದೊರಕಿದ್ದು ಬೋಲೋ ಭಗವಾನನ್‌ ಬಾಹುಬಲಿ ಕೀ ಎಂಬ ಜಯಘೋಷ ವೇಣೂರಿನ ದಶ ದಿಕ್ಕುಗಳಲ್ಲಿ ಪ್ರತಿಧ್ವನಿಸಿತು. ಸರ್ವೇಶ್‌ ಜೈನ್‌ ಮತ್ತು ತಂಡದವರ ಸುಮಧುರ ಸಂಗೀತ ಅಭಿಷೇಕದ ಸಿಂಚನಕ್ಕೆ ಸಾಥ್ ನೀಡಿತು.

ಮೊದಲಿಗೆ 108 ಕಲಶಗಳಿಂದ ಪವಿತ್ರ ನದಿಗಳಿಂದ ತಂದ ಜಲ ಅಭಿಷೇಕವನ್ನು ಸೇವಾಕರ್ತರಾದ ಅಳದಂಗಡಿ ಅರಮನೆ ಡಾ. ಪದ್ಮಪ್ರಸಾದ ಅಜಿಲ ಮತ್ತು ಕುಟುಂಬದವರು ಮಾಡುವ ಮೂಲಕ ಮಹಾ ಮಜ್ಜನಕ್ಕೆ ಚಾಲನೆ ನೀಡಿದರು. ಪಂಚಾಮೃತ ಅಭಿಷೇಕ: ಶುದ್ಧ ನಾರೀಕೇಳದ ನೀರಿನ ಅಭಿಷೇಕವಾದಾಗ ಕಲ್ಪವೃಕ್ಷದ ಸುವಾಸನೆ ಪರಿಸರದಲ್ಲಿ ಹರಡಿತು., ಕಬ್ಬಿನ ರಸದ ಧಾರೆ, ಹಾಲಿನ ನೊರೆ ಭುಜಬಲಿಯ ಅಂಗಾಂಗಳನ್ನು ಮೀಯಿಸಿದಾಗ ಶ್ರಾವಕರು ಪುಳಕಿತರಾದರು.

ಬಳಿಕ ಕಲ್ಕ ಚೂರ್ಣ, ಅರಸಿನ ಪುಡಿ, ಕೇಸರಿ ಮಿಶ್ರಿತ ಜಲ, ಚಂದನ ಪುಡಿ, ಶ್ರೀಗಂಧ, ಅಷ್ಟ ಗಂಧದ ಅಭಿಷೇಕ ಮಾಡಲಾಯಿತು. ಭಕ್ತ ಜನರು ಆನಂದೋತ್ಸಾಹದಿಂದ ಜಯಘೋಷ ಮಾಡಿದರು.

ಪ್ರತಿ ಅಭಿಷೇಕದ ಮೊದಲು ಮೂರ್ತಿಯ ಪಾದದ ಬಳಿ ಅರ್ಘ್ಯ, ಮಂತ್ರ, ಆರತಿ, ವಾಲಗ, ಜಲ ಸೇಚನ, ಸಂಗೀತ ಹಾಗೂ ವಿಕ್ಷಕ ವಿವರಣೆ ಇತ್ತು. ಅಭಿಷೇಕದ ನಂತರ ಮೂರ್ತಿಯ ಜಿಡ್ಡು ತೆಗೆಯಲು ಅಶ್ವತ್ಥ, ಮಾವು, ಪಲಾಶ, ಗೋಳಿ, ಬಸಿರಿ, ಅತ್ತಿ, ಆಲ ಮೊದಲಾದ ಮರದ ಕೆತ್ತೆಗಳನ್ನು ಪುಡಿ ಮಾಡಿ ಕುದಿಸಿ ತಯಾರಿಸಿದ ಬೆಚ್ಚಗಿನ ಕಷಾಯದಲ್ಲಿ ನೀರಿನ ಜಳಕ ನಡೆಯಿತು. ಪುಷ್ಪ ವೃಷ್ಟಿ, ಕನಕ ವೃಷ್ಟಿ ನಡೆದ ಬಳಿಕ ಬೃಹತ್ ಮಾಲೆಯನ್ನು ಮಹಾ ಮೂರ್ತಿಗೆ ತೊಡಿಸಲಾಯಿತು. ಕೊನೆಯಲ್ಲಿ ಮಹಾಮಂಗಳಾರತಿಯೊಂದಿಗೆ ಮೊದಲದಿನದ ಮಹಾಭಿಷೇಕ ಸಂಪನ್ನಗೊಂಡಿತು.

ಮೂಡುಬಿದರೆ ಡಾ. ಚಾರುಕೀರ್ತಿ ಭಟ್ಟಾರಕ ಶ್ರೀಗಳು ಮಾರ್ಗದರ್ಶನ ನೀಡಿದರು. ಧರ್ಮಸ್ಧಳ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಉಪಸ್ಥಿತರಿದ್ದರು. ಸಾವಿರಾರು ಮಂದಿ ಅಭಿಷೇಕವನ್ನು ಕಣ್ತುಂಬಿಸಿಕೊಂಡರು.

ಈ ಶತಮಾನದ ಮೂರನೇ ಮಹಾಮಜ್ಜನ

ರಾಜ್ಯದಲ್ಲಿರುವ ಪ್ರಮುಖ ನಾಲ್ಕು ಬಾಹುಬಲಿ ಮೂರ್ತಿಗಳ ಪೈಕಿ 3 ಮೂರ್ತಿಗಳು ಅವಿಭಜಿತ ದ.ಕ. ಜಿಲ್ಲೆಯಲ್ಲಿದ್ದರೆ ಅತಿ ಎತ್ತರದ ಮೂರ್ತಿ ಶ್ರವಣಬೆಳಗೊಳದಲ್ಲಿದೆ. ಕಾರ್ಕಳದಲ್ಲಿ 42 ಅಡಿ, ವೇಣೂರಿನಲ್ಲಿ 35 ಅಡಿ ಹಾಗೂ ಧರ್ಮಸ್ಥಳದಲ್ಲಿ 39 ಅಡಿ ಎತ್ತರದ ಬಾಹುಬಲಿ ಮೂರ್ತಿಗಳಿವೆ.

ವೇಣೂರಿನ ಅಜಿಲ ಮನೆತನದವರು ಸ್ಥಾಪಿಸಿದ ಬಾಹುಬಲಿ ಮೂರ್ತಿಗೆ ಇದು ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕ. ಈ ಹಿಂದೆ 2000, 2012ರಲ್ಲಿ ಮಹಾಮಸ್ತಕಾಭಿಷೇಕ ನಡೆದಿತ್ತು. ವೇಣೂರು ವಿಶಿಷ್ಟ ದೀಪಾಲಂಕಾರದಿಂದ ಪ್ರಜ್ವಲಿಸುತ್ತಿದೆ. ಮಾ.1ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ. ಭದ್ರತಾ ವ್ಯವಸ್ಥೆ: ಜಿಲ್ಲಾ ಪೊಲೀಸ್‌ ಇಲಾಖೆ ಸಂಚಾರ ಮತ್ತು ಭದ್ರತೆ ವ್ಯವಸ್ಥೆ ಮಾಡಿದ್ದು, ಓರ್ವ ಡಿವೈಎಸ್ಪಿ ಸ್ಥಳದಲ್ಲಿದ್ದಾರೆ. 7 ಮಂದಿ ಇನ್ಸ್‌ಪೆಕ್ಟರ್‌, 12 ಮಂದಿ ಸಬ್‌ ಇನ್ಸ್‌ಪೆಕ್ಟರ್‌ ಸಮೇತ 275 ಪೊಲೀಸರ ತಂಡ ಹಾಗೂ ಸ್ವಯಂಸೇವಕರು ಕಾರ್ಯನಿರ್ವಹಿಸಲಿರುವರು. ವಾಹನಗಳ ಪಾರ್ಕಿಂಗ್‌ಗೆ ವಸ್ಥೆ ಮಾಡಲಾಗಿದ್ದು, ವೇಣೂರು ಪೇಟೆ ಗೋಳಿಯಂಗಡಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಯಂತ್ರಣ ನಡೆಯಲಿದೆ. ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಇಂದಿನ ಕಾರ್ಯಕ್ರಮಗಳು

ಯುಗಳ ಮುನಿಶ್ರೀಗಳಾದ ಪರಮಪೂಜ್ಯ ಶ್ರೀ ಅಮೋಘ ಕೀರ್ತಿ ಮುನಿ ಮಹಾರಾಜ ಹಾಗೂ ಶ್ರೀ ಅಮರ ಕೀರ್ತಿ ಮುನಿ ಮಹಾರಾಜ, ನರಸಿಂಹರಾಜಪುರ ಜೈನ ಮಠದ ಡಾ.ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಲಕ್ಕವಳ್ಳಿ ಜೈನ ಮಠದ ಶ್ರೀ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ಬೆಳಗ್ಗೆ 8 ಗಂಟೆಯಿಂದ ನಿತ್ಯ ವಿಧಿ ಸಹಿತ ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, ಪಂಚ ಕಲ್ಯಾಣ ಮಂಟಪ ಪ್ರವೇಶ ನಡೆಯಲಿದೆ. ಬಳಿಕ ಯಕ್ಷರಾಧನಾ ಪೂರ್ವಕ ಯಕ್ಷ ಪ್ರತಿಷ್ಠೆ, ಮಧ್ಯಾಹ್ನ ಧ್ವಜಾರೋಹಣ, ಸಂಜೆ ಬ್ರಹ್ಮಸ್ತಂಭದ ಬ್ರಹ್ಮ ಯಕ್ಷ ಪ್ರತಿಷ್ಠೆ, ಅಗ್ರೋದಕ ಮೆರವಣಿಗೆ ಸಹಿತ 108 ಕಲಶಗಳಿಂದ ಮಹಾಮಸ್ತಕಾಭಿಷೇಕ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.

ಮಧ್ಯಾಹ್ನ 3 ಗಂಟೆಗೆ ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ. ವಕ್ಫ್ ಖಾತೆ ಸಚಿವ ಜಮೀರ್ ಅಹಮದ್, ಬ್ಯಾಂಕ್ ಆಫ್ ಬರೋಡ ಮಂಗಳೂರು ಜೋನಲ್ ಹೆಡ್ ಗಾಯತ್ರಿ ಆರ್., ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮಂಗಳೂರು ಎಲ್ ಪಿಜಿ ಪ್ರಾಂತ್ಯದ ಟೆರಿಟರಿ ಮ್ಯಾನೇಜರ್ ಬಿವಾಶ್ ಚಂದ್ರ ಮಂಡಲ್, ಎಂಆರ್‌ಪಿಎಲ್‌ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ, ತುಮಕೂರಿನ ರಾಜೇಂದ್ರ ಕುಮಾರ್ ಜಿ.ಎಸ್.ಭಾಗವಹಿಸಲಿದ್ದಾರೆ. ಎಕ್ಸಲೆಂಟ್ ಮೂಡುಬಿದ್ರೆಯ ಆಡಳಿತ ನಿರ್ದೇಶಕ ಡಾ.ಬಿ. ಸಂಪತ್ ಕುಮಾರ್ ಕನ್ನಡ ಕವಿಗಳು ಕಂಡ ಬಾಹುಬಲಿ ಚಿತ್ರಣ ಈ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು.

Share this article