ಬೆಂಗಳೂರು : ನ್ಯಾ.ನಾಗಮೋಹನದಾಸ್ ಸಮಿತಿ ನಿಗದಿ ಮಾಡಿದಂತೆ ತಮ್ಮ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಶೇ.1ರಷ್ಟು ಮೀಸಲಿಗೆ ಪಟ್ಟು ಹಿಡಿದಿರುವ ಅಲೆಮಾರಿ ಸಮುದಾಯ, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮತ್ತೊಮ್ಮೆ ಆಗ್ರಹಿಸಿದ್ದಾರೆ. ಅದಕ್ಕೆ ಸಿಎಂ, ಶೇ. 1 ಒಳಮೀಸಲಾತಿ ಮರುಸ್ಥಾಪಿಸಲು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಪದಾಧಿಕಾರಿಗಳು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಅಲೆಮಾರಿ ಸಮುದಾಯಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶೇ.1 ಒಳಮೀಸಲಾತಿ ನೀಡುವ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚಿಸುತ್ತೇವೆ. ಅದರ ಜತೆಗೆ ಅಲೆಮಾರಿಗಳ ಬೇಡಿಕೆ ಈಡೇರಿಕೆಗೆ ಸ್ವಲ್ಪ ಕಾಲಾವಕಾಶ ನೀಡುವಂತೆ ತಿಳಿಸಿದರು. ಇದೇ ವೇಳೆ ಒಳ ಮೀಸಲಾತಿ ಹಂಚಿಕೆಗೆ ಸಂಬಂಧಿಸಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಹಿಂಪಡೆಯುವಂತೆ ತಿಳಿಸಿದರು. ಅದಕ್ಕೆ ಮಹಾ ಒಕ್ಕೂಟದ ಪ್ರಮುಖರು, ಪದಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ನ್ಯಾ.ನಾಗ ಮೋಹನದಾಸ್ ಸಮಿತಿ ನಿಗದಿ ಮಾಡಿದಂತೆ ಶೇ.1ರಷ್ಟು ಒಳ ಮೀಸಲಾತಿ ಮರುಸ್ಥಾಪಿಸುವಂತೆ ಅಲೆಮಾರಿಗಳ ಮಹಾ ಒಕ್ಕೂಟದ ಪದಾಧಿಕಾರಿಗಳ ನಿಯೋಗ ಕೋರಿದೆ. ಅವರ ಬೇಡಿಕೆಯನ್ನು ಯಾವ ರೀತಿ ಕಲ್ಪಿಸಬಹುದು ಎಂಬ ಬಗ್ಗೆ ಪರಿಶೀಲಿಸಲಾಗುವುದು. ಅದಕ್ಕಾಗಿ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದರು.ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈಗ ಉಂಟಾಗಿರುವ ಗೊಂದಲಗಳಿಗೂ ಆದ್ಯತೆ ಮೇರೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ಪರಿಹಾರ ಹುಡುಕಿ, ಅಲೆಮಾರಿ ಸಮುದಾಯಗಳಿಗೆ ನ್ಯಾಯ ಒದಗಿಸಲಾಗುವುದು. ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ಅಲೆಮಾರಿ ಸಮುದಾಯಕ್ಕಾಗಿಯೇ ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ವಿಶೇಷ ಅನುದಾನ ನೀಡುವಂತೆಯೂ ಮನವಿ ಸಲ್ಲಿಸಲಾಗಿದೆ. ಅಭಿವೃದ್ಧಿ ನಿಗಮ ಸ್ಥಾಪನೆಗೆ ಯಾವುದೇ ಸಮಸ್ಯೆಯಿಲ್ಲ. ಆದರೂ, ನಿಗಮ ಸ್ಥಾಪನೆ ಮತ್ತು ವಿಶೇಷ ಅನುದಾನ ನೀಡಲು ಸಮಯಾವಕಾಶ ನೀಡುವಂತೆ ಹೇಳಿದ್ದೇನೆ. ಅದರ ಜತೆಗೆ ಒಳ ಮೀಸಲಾತಿ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಅದನ್ನು ಹಿಂಪಡೆಯುವಂತೆ ಅಲೆಮಾರಿ ಸಮುದಾಯದವರಿಗೆ ತಿಳಿಸಿದ್ದೇನೆ ಎಂದರು.ಬ್ಯಾಕ್‌ಲಾಗ್ ಭರ್ತಿ ನಿಲ್ಲಿಸಿ:
ಅಲೆಮಾರಿಗಳ ಮಹಾ ಒಕ್ಕೂಟದ ಅಧ್ಯಕ್ಷ ಶೇಷಣ್ಣ ಮಾತನಾಡಿ, ನ್ಯಾ. ನಾಗಮೋಹನದಾಸ್ ಸಮಿತಿ ಶಿಫಾರಸಿನಂತೆ ಶೇ.1ರಷ್ಟು ಒಳ ಮೀಸಲಾತಿ ನೀಡುವ ಸಂಬಂಧ ಖಚಿತ ತೀರ್ಮಾನ ತೆಗೆದುಕೊಳ್ಳುವವರೆಗೆ ಯಾವುದೇ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದಂತೆ ಹೇಳಿದ್ದೇವೆ. ಒಳಮೀಸಲಾತಿಯ ಎಲ್ಲ ಗೊಂದಲಗಳನ್ನೂ ನಿವಾರಿಸಿಕೊಂಡ ನಂತರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ ಗೊಂದಲಗಳು ಮತ್ತಷ್ಟು ಜಟಿಲವಾಗಲಿವೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಇನ್ನು, ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ವಿಶೇಷ ಅನುದಾನಕ್ಕೂ ಮನವಿ ಮಾಡಲಾಗಿದೆ. ಸಿಎಂ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಇನ್ನು, ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಅರ್ಜಿಯ ಹಿಂಪಡೆವ ಕುರಿತು ಒಕ್ಕೂಟದಲ್ಲಿ ಚರ್ಚಿಸಿ ತಿಳಿಸುತ್ತೇವೆ ಎಂದು ಹೇಳಿದ್ದೇನೆ. ಅಲೆಮಾರಿಗಳಾಗುವ ಅನ್ಯಾಯ ಸರಿಪಡಿಸುವಂತೆ ಹೇಳಲಾಗಿದೆ ಎಂದರು.
ಸಭೆಯಲ್ಲಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಇತರರಿದ್ದರು.
ಒಂದೆಡೆ ಅಲೆಮಾರಿ ಸಮುದಾಯದ ನಾಯಕರು ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸುತ್ತಿದ್ದರೆ, ಮತ್ತೊಂದೆಡೆ ಅಲೆಮಾರಿ ಸಮುದಾಯದ ಕೆಲವರು ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದನ್ನು ಗಮನಿಸಿದ ಪೊಲೀಸರು, ಘೋಷಣೆ ಕೂಗಿದವರನ್ನು ವಶಕ್ಕೆ ಪಡೆದು ವಿಧಾನಸೌಧದಿಂದ ಕರೆದುಕೊಂಡು ಹೋದರು.
ಸರ್ಕಾರದ ಮುಂದಿಟ್ಟಿರುವ ಮನವಿಗಳು:
-ನ್ಯಾ. ನಾಗಮೋಹನ್‌ದಾಸ್ ಶಿಫಾರಸಿನಂತೆ ಒಳ ಮಿಸಲಾತಿ ಜಾರಿಗೊಳಿಸಬೇಕು
- ಅಲೆಮಾರಿಗಳಿಗೆ ನಿಗದಿಯಾಗಿದ್ದ ಒಳ ಮೀಸಲಾತಿ ಪ್ರಮಾಣ ಬೇರೆ ಜಾತಿಗಳೊಂದಿಗೆ ಸೇರಿಸಿದ ನಿರ್ಧಾರ ಹಿಂಪಡೆಯಬೇಕು
-ಅಲೆಮಾರಿಗಳಿಗೆ ಶೇ. 1ರಷ್ಟು ಒಳಮೀಸಲಾತಿ ಕಲ್ಪಿಸಲು ಆದ್ಯತೆ ನೀಡಬೇಕು
- ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ರಚಿಸಬೇಕು
- ಅಲೆಮಾರಿ ಸಮುದಾಯದ ಏಳಿಗೆಗಾಗಿ ವಿಶೇಷ ಅನುದಾನ, ಯೋಜನೆ ಘೋಷಿಸಬೇಕು
ಪ್ರತಿಭಟನೆ ಹಿಂಪಡೆದ ಅಲೆಮಾರಿ ಸಮುದಾಯ
ಶೇ.1 ಒಳಮೀಸಲಾತಿ ನೀಡುವಂತೆ ಆಗ್ರಹಿಸಿ ಹಲವು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಅಲೆಮಾರಿ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲೆಮಾರಿ ಸಮುದಾಯಗಳ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯುವುದಾಗಿ ಅಸ್ಪಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ತಿಳಿಸಿದೆ.