)
ಮೂಲ್ಕಿ: ಕಿನ್ನಿಗೋಳಿಯ ಬಟ್ಟಕೋಡಿ ಸಮೀಪದಲ್ಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರದ ದಾದಿಯರ ಕೊಠಡಿ ಮೂರು ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದ್ದು, ಆರೋಗ್ಯ ಕೇಂದ್ರದ ಬಾಗಿಲು ಹೆಚ್ಚಿನ ದಿನಗಳಲ್ಲಿ ಮುಚ್ಚಿರುತ್ತದೆ. ಇದಕ್ಕೆ ತಾಗಿಕೊಂಡು ಇರುವ ದಾದಿಯರ ಕೊಠಡಿಯು ದಿನಪೂರ್ತಿ ಬೀಗ ಜಡಿದ ಸ್ಥಿತಿಯಲ್ಲಿದ್ದು, ಅದರೊಳಗೆ ಮೂರು ನಾಯಿಗಳನ್ನು ಕೂಡಿಹಾಕಿ ಬೀಗ ಹಾಕಲಾಗಿದೆ. ತಿಂಗಳ ಹಿಂದೆ, ಬಿಜೆಪಿ ಕಾರ್ಯಕರ್ತರು ಮತಯಾಚನೆಗಾಗಿ ಮನೆ ಮನೆಗೆ ತೆರಳಿದಾಗ, ಈ ಕೊಠಡಿಯೊಳಗೆ ನಾಯಿಗಳು ಇರುವುದನ್ನು ಗಮನಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸದಸ್ಯ ಧನುಷ್ ಶೆಟ್ಟಿಗಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ನಾಯಿಗಳು ಇರುವುದನ್ನು ತಿಳಿಸಿದ್ದು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಆಡಳಿತ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ, ಆಯುಷ್ಮಾನ್ ಆರೋಗ್ಯ ಕೇಂದ್ರದ ನಿರ್ವಹಣೆಯಲ್ಲಿನ ಲೋಪ ಸರಿಪಡಿಸಬೇಕು ಎಂದು ಧನುಷ್ ಶೆಟ್ಟಿಗಾರ್ ಒತ್ತಾಯಿಸಿದ್ದಾರೆ.