ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಬಿಜೆಪಿ ಶಾಸಕರ ಅಡ್ಡ ಮತದಾನಕ್ಕೆ ಸಂಬಂಧಿಸಿ ನನಗೂ ಕಾಂಗ್ರೆಸ್ ನಾಯಕರಿಗೂ ಸಂಬಂಧ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ ನನಗೂ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ವ್ಯವಹಾರಿಕ ಸಂಬಂಧ ಅಥವಾ ಸ್ನೇಹಾಚಾರಗಳಾಗಲಿ ಇಲ್ಲ
ಧರ್ಮಸ್ಥಳ : ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಬಿಜೆಪಿ ಶಾಸಕರ ಅಡ್ಡ ಮತದಾನಕ್ಕೆ ಸಂಬಂಧಿಸಿ ನನಗೂ ಕಾಂಗ್ರೆಸ್ ನಾಯಕರಿಗೂ ಸಂಬಂಧ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ ನನಗೂ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ವ್ಯವಹಾರಿಕ ಸಂಬಂಧ ಅಥವಾ ಸ್ನೇಹಾಚಾರಗಳಾಗಲಿ ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಈಗ ಸಿಎಂ ಆದ ಕಾರಣ ಅವರಿಗೆ ಗೌರವ ಕೊಡುತ್ತಿದ್ದೇನೆ. ಅದು ಬಿಟ್ಟರೆ ಬೇರೇನೂ ನಮ್ಮೊಳಗೆ ಇಲ್ಲ. ಈ ಬಗ್ಗೆ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆ ಸತ್ಯಕ್ಕೆ ದೂರ ಎಂದು ತಿಳಿಸಿದರು. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಅಡ್ಡ ಮತದಾನ ಮಾಡಿದ ಶಾಸಕರು ಪಕ್ಷ ದ್ರೋಹಿಗಳು, ನಾನು ಕೂಡ ಹಾಗೆ ಮಾಡಿದ್ದರೆ, ನಾನು ಪಕ್ಷ ವಿರೋಧಿಗಳ ಸಾಲಿಗೆ ಸೇರುತ್ತಿದ್ದೆ. ಆದರೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನನಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದ್ದಾರೆ. ನನ್ನನ್ನು ಸಿಎಂ ಮಾಡಲು ಪಕ್ಷ ಜವಾಬ್ದಾರಿ ನೀಡಿಲ್ಲ, ಆದರೆ ಪಕ್ಷದೊಳಗೆ ಇಂತಹ ವಿದ್ಯಮಾನ ನಡೆದಿರುವುದು ಬೇಸರ ತರಿಸಿದೆ ಎಂದರು.
ಅಡ್ಡ ಮತದಾನ ಕುರಿತಂತೆ ಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದ ಸಮಿತಿ ಇಷ್ಟರಲ್ಲೇ ಪ್ರಾಥಮಿಕ ವರದಿ ನೀಡಲಿದೆ. ನಾನು ದೆಹಲಿಯಲ್ಲಿ ಇದ್ದ ಕಾರಣ ಸಿ.ಟಿ.ರವಿ ತಂಡಕ್ಕೆ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದಕ್ಕೂ ಮೊದಲು ದೆಹಲಿಯಲ್ಲಿ ವರಿಷ್ಠರು ಕೂಡ ಈ ಬಗ್ಗೆ ನಾನು ಹಾಗೂ ವಿಪಕ್ಷ ನಾಯಕ ಅಶೋಕ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸಮಿತಿಯ ವರದಿಯನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಇಂದಲ್ಲ ನಾಳೆ ಸತ್ಯ ಹೊರಗೆ ಬಂದೇ ಬರುತ್ತದೆ ಎಂದರು.
ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರು ಅಡ್ಡ ಮಾತದಾನ ಸಾಧ್ಯತೆ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಅವರು ಒಳ್ಳೆಯ ಉದ್ದೇಶದಿಂದ ಹೇಳಿದ್ದಾರೆ ಎಂದ ಅವರು, ಅಡ್ಡ ಮತದಾನಕ್ಕೆ ನಾನು, ಆರ್.ಅಶೋಕ್, ಶೋಭಾ ಕರಂದ್ಲಾಜೆ ಕಾರಣ ಎಂಬ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಆರೋಪದಲ್ಲಿ ಹುರುಳು ಇಲ್ಲ. ಬಹುಶಃ ಅವರ ಜೊತೆ ನಮ್ಮ ಶಾಸಕರು ಸಂಪರ್ಕದಲ್ಲಿ ಇದ್ದಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸುದ್ದಿಗಾರರಲ್ಲಿ ಪ್ರಶ್ನೆಗೆ ವಿಜಯೇಂದ್ರ ಉತ್ತರಿಸಿದರು.
ಕಾಣಿಕೆ ಅರ್ಪಣೆ
ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ, ವರಿಷ್ಠರ ಬುಲಾವ್ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ವಿಜಯೇಂದ್ರ ದೆಹಲಿಯಲ್ಲಿ ತೆರಳಿದ್ದರು. ಅಲ್ಲಿ ವರಿಷ್ಠರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ ಬಳಿಕ ವಿಜಯೇಂದ್ರ ಗುರುವಾರ ನೇರವಾಗಿ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ ತಡರಾತ್ರಿ ಧರ್ಮಸ್ಥಳ ತಲುಪಿದ್ದರು. ಇಲ್ಲಿನ ಸನ್ನಿಧಿ ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದ ಅವರು, ಶುಕ್ರವಾರ ಬೆಳಗ್ಗೆ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿ, ₹1,001 ಕಾಣಿಕೆ ಅರ್ಪಿಸಿದರು. ನಂತರ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆಶೀರ್ವಾದ ಪಡೆದರು.
ಅಡ್ಡ ‘ಮತ’ದಾರರಿಗೆ ಒಳ್ಳೆಯದು ಆಗಲಿ ಎಂದು ಪ್ರಾರ್ಥನೆ: ಬಿವೈವಿ
ಅಡ್ಡ ಮತದಾನದಿಂದ ಶಾಸಕರನ್ನು ಕಾರ್ಯಕರ್ತರು ಅನುಮಾನದಿಂದ ನೋಡುವಂತಾಗಿದೆ. ಇದರಿಂದ ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ. ಪರಿಷತ್ ಚುನಾವಣೆ ಫಲಿತಾಂಶದ ಮಾರನೇ ದಿನವೇ ನನ್ನ ಮನಸ್ಸು ಘಾಸಿಗೊಂಡಿತ್ತು. ನಾನು ಭಾವನಾತ್ಮಕ ವ್ಯಕ್ತಿ, ಸತ್ಯ ತಿಳಿಯುವುದಕ್ಕಾಗಿಯೇ ನಾನು ಧರ್ಮಸ್ಥಳದಲ್ಲಿ ಶಾಸಕಾಂಗದ ಸಭೆ ನಡೆಸುತ್ತೇನೆ ಎಂದಿದ್ದೆ. ಆದರೆ ಪಕ್ಷದ ನಾಯಕರು, ಹಾಗೆ ಮಾಡುವುದು ಬೇಡ ಎಂದು ಕಿವಿ ಮಾತು ಹೇಳಿದರು. ನಾನು ಈ ಕ್ಷೇತ್ರದ ಪರಮಭಕ್ತನಾಗಿದ್ದು, ಅಂತಹವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ವಿಜಯೇಂದ್ರ ಹೇಳಿದರು.
