ಗದಗ: ಸಾರ್ವಜನಿಕ ಸೇವೆಯೇ ಬಿಜೆಪಿ ಸಂಕಲ್ಪ ಎಂದು ಮಾಜಿ ಸಚಿವ, ಶಾಸಕ ಸುರೇಶಕುಮಾರ ತಿಳಿಸಿದರು.ನಗರದ ಖಾಸಗಿ ರೆಸಾರ್ಟ್‌ನಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಜಿಲ್ಲಾ ಮಟ್ಟದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ- 2026ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಬಿಜೆಪಿ ಸಾರ್ವಜನಿಕವಾಗಿ ಸೇವೆಯೇ ಸಂಕಲ್ಪವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಧಾನಮಂತ್ರಿಯವರು ಸಾಕಷ್ಟು ಯೋಜನೆಗಳನ್ನು ನೀಡಿದ್ದು 4 ಕೋಟಿಗಿಂತ ಹೆಚ್ಚು ಜನ ಪ್ರಧಾನಮಂತ್ರಿ ಆವಾಸ್ ಯೋಜನೆ, ₹17000 ಸಾವಿರ ಕೋಟಿ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಗಳ ಮೂಲಕ 25 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ ಎಂದರು.
12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮುದ್ರಾ ಯೋಜನೆಯಡಿ ₹57 ಕೋಟಿಗೂ ಹೆಚ್ಚು ಸಾಲಗಳ ಸೌಲಭ್ಯ ನೀಡಿದ್ದು, ಇನ್ನೂ ಹಲವಾರು ಯೋಜನೆಗಳನ್ನು ದೇಶದ ಜನರಿಗೆ ನೀಡಿದೆ. ಜಾಗತಿಕ ಉದ್ವಿಗ್ನತೆಗಳು, ವ್ಯಾಪಾರ ಅಡೆತಡೆಗಳು ಮತ್ತು ಬದಲಾಗುತ್ತಿರುವ ಪೂರೈಕೆ ಸರಣಿಗಳ ನಡುವೆ ಭಾರತವು ಕಾರ್ಯತಂತ್ರದ ಸ್ವಾಯತ್ತತೆ, ಶಾಂತಿ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಕಠಿಣ ಪರಿಶ್ರಮದಿಂದ ಆಯಾಸಗೊಳ್ಳದೆ, ಕಠಿಣ ಪರಿಶ್ರಮವು ಬಡ ಜನರ ಮುಖದಲ್ಲಿ ತರುವ ನಗುವನ್ನು ನೋಡಿ ತೃಪ್ತಿಯಲ್ಲಿ ಭಾವನೆಯಲ್ಲಿರುವರು. ವಿಕಸಿತ ಭಾರತಕ್ಕಾಗಿ ಭವಿಷ್ಯದ ಕೃಷಿ ಪರಿಸರ ವ್ಯವಸ್ಥೆ ನಿರ್ಮಿಸಲು ಒಟ್ಟಾಗಿ ಕೆಲಸ ಮಾಡಬೇಕು. ರೈತರ ಸಾಂಪ್ರದಾಯಿಕ ಜ್ಞಾನ, ವಿಜ್ಞಾನದ ಶಕ್ತಿ ಮತ್ತು ಸರ್ಕಾರದ ಬೆಂಬಲ ಒಟ್ಟಿಗೆ ಸೇರಿದಾಗ ರೈತರು ಸಮೃದ್ಧರಾಗುವರು. ಮಾತ್ರವಲ್ಲದೆ, ನಮ್ಮ ಭೂಮಿ ತಾಯಿಯೂ ಆರೋಗ್ಯಕರವಾಗಿರುತ್ತದೆ ಎನ್ನುವ ಭಾವನೆಯನ್ನು ಪ್ರಧಾನಿ ಮೋದಿ ಇಟ್ಟುಕೊಂಡಿದ್ದಾರೆ ಎಂದರು.ಈ ವೇಳೆ ರಾಜ್ಯಸಭಾ ಸದಸ್ಯ ಮಾ. ನಾಗರಾಜ, ಶಾಸಕರಾದ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಕಳಕಪ್ಪ ಜಿ. ಬಂಡಿ, ಪ್ರಶಿಕ್ಷಣ ರಾಜ್ಯ ಸಂಚಾಲಕ ನಾಗಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಆರ್.ಕೆ. ಚವಾಣ, ಫಕ್ಕಿರೇಶ ರಟ್ಟಿಹಳ್ಳಿ ಹಾಗೂ ಬಿಜೆಪಿ ಪ್ರಶಿಕ್ಷಣಾರ್ಥಿಗಳು ಹಾಗೂ ಪ್ರಬಂಧಕರು ಇದ್ದರು.