ಹನುಮಸಾಗರ: ಸಮೀಪದ ಹನುಮನಾಳ ಹೋಬಳಿ ವ್ಯಾಪ್ತಿಯ ಬರಪೀಡಿತ ಪ್ರದೇಶಗಳ ಕೆರೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ನೂರಾರು ರೈತರು, ರೈತ ಮುಖಂಡರು ಸೋಮವಾರ ಬಾದಿಮನಾಳ ಕ್ರಾಸ್‌ನಲ್ಲಿ ರಸ್ತೆ ತಡೆದು ಬೃಹತ್‌ ಪ್ರತಿಭಟನೆ ನಡೆಸಿದರು.

ಹನುಮನಾಳ ಹೋಬಳಿ ವ್ಯಾಪ್ತಿಯ ಪ್ರಮುಖ ಗ್ರಾಮಗಳಾದ ಬಾದಿಮನಾಳ, ಜಹಗೀರಗುಡದೂರು ಹಾಗೂ ಮಾವಿನಇಟಗಿ ಗ್ರಾಮಗಳ ಕೆರೆಗಳಿಗೆ ಕೃಷ್ಣಾ ಜಲ ಭಾಗ್ಯ ನಿಗಮದ ಯೋಜನೆಯಡಿ ತಾತ್ಕಾಲಿಕ ಸಂಪರ್ಕ ಕಲ್ಪಿಸಿ ಶೇ. 50ರಷ್ಟು ನೀರು ತುಂಬಿಸಲು ಅನುಮತಿ ನೀಡಿ ಒಂದು ವರ್ಷ ಕಳೆದಿದ್ದರೂ ಇದುವರೆಗೂ ಕೆರೆಗಳಿಗೆ ನೀರು ಹರಿಸದಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಬೆಳಗ್ಗೆ ಬಾದಿಮನಾಳ ಕ್ರಾಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ರೈತರು, ಕುಷ್ಟಗಿ–ಬಾದಾಮಿ ಹಾಗೂ ಗುಡೂರ–ಗಜೇಂದ್ರಗಡ ಸಂಪರ್ಕಿಸುವ ಪ್ರಮುಖ ರಸ್ತೆಗಳ ಮೇಲೆ ಬೃಹತ್ ಗಾತ್ರದ ಮರದ ಕೊಂಬೆ ಹಾಕಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಿದರು. ಬಳಿಕ ರಸ್ತೆಯ ಮೇಲೆಯೇ ತಾಡಪಲ್ ಹಾಕಿ ಪ್ರತಿಭಟನೆ ಮುಂದುವರಿಸಿದರು. ರಸ್ತೆ ಸಂಚಾರ ಬಂದ್ ಆಗಿದ್ದರಿಂದ ಎರಡೂ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ವಾಹನಗಳು ಸಾಲುಗಟ್ಟಿ ನಿಂತವು. ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.

ಕೃಷ್ಣಾ ಜಲ ಭಾಗ್ಯ ನಿಗಮದಿಂದ ತಾತ್ಕಾಲಿಕ ಸಂಪರ್ಕ ಕಲ್ಪಿಸಿ ಕೆರೆಗಳಿಗೆ ಶೇ. 50ರಷ್ಟು ನೀರು ತುಂಬಿಸಲು ಅನುಮತಿ ನೀಡಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಅನುಷ್ಠಾನವಾಗದೆ ಉಳಿದಿದೆ. ಈ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಜಾನುವಾರುಗಳಿಗೆ ಹಾಗೂ ಕೃಷಿಗೆ ನೀರಿನ ಸಮಸ್ಯೆ ಎದುರಾಗಿದೆ ಎಂದು ರೈತರು ಹೇಳಿದರು.

ಅಂತರ್ಜಲ ಮಟ್ಟ ಕುಸಿತ:ಈ ಭಾಗದಲ್ಲಿ ಮಳೆ ಅಭಾವದಿಂದ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಬಹುತೇಕ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಹಲವು ಬೋರ್‌ವೆಲ್‌ ಸಂಪೂರ್ಣ ಬತ್ತಿ ಹೋಗಿವೆ. ಪರಿಣಾಮವಾಗಿ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.


ಕೆರೆಗಳಲ್ಲಿ ನೀರು ಸಂಗ್ರಹವಾದರೆ ಅಂತರ್ಜಲ ಮಟ್ಟ ಹೆಚ್ಚಾಗಿ ಸುತ್ತಮುತ್ತಲಿನ ಬೋರ್‌ವೆಲ್‌ಗಳಿಗೆ ನೀರು ದೊರೆಯುವ ಸಾಧ್ಯತೆ ಇದೆ. ಆದರೆ, ಕೆರೆಗಳೇ ಬತ್ತಿ ಹೋಗಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಕೆರೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನೀರು ಹರಿಸುವವರೆಗೆ ಹೋರಾಟ ನಿಲ್ಲದು: ಬಾದಿಮನಾಳ ಕನಕ ಗುರು ಪೀಠದ ಪೀಠಾಧಿಪತಿ ಶಿವಸಿದ್ದೇಶ್ವರ ಸ್ವಾಮೀಜಿ ಹಾಗೂ ವಿವಿಧ ಮುಖಂಡರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಕೆರೆ ತುಂಬಿಸುವ ಯೋಜನೆಯಲ್ಲಿ ಹನುಮನಾಳ ಹೋಬಳಿ ವ್ಯಾಪ್ತಿಯ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಈ ಭಾಗದ ರೈತರು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.ಮಳೆ ಕೈಕೊಟ್ಟಿರುವುದರಿಂದ ಈಗಾಗಲೇ ಅಂತರ್ಜಲ ಮಟ್ಟ ಕುಸಿದಿದೆ. ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ಕೃಷಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮತಿ ದೊರೆತು ಒಂದು ವರ್ಷ ಕಳೆದರೂ ನೀರು ಹರಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಸ್ಥಳಕ್ಕೆ ಭೇಟಿ; ರೈತರ ಪಟ್ಟು

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಕುಷ್ಟಗಿ ತಹಸೀಲ್ದಾರ್ ಅಶೋಕ ಶಿಗ್ಗಾವಿ ಹಾಗೂ ಇಬ್ಬರು ಎಂಜಿನಿಯರ್‌ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ, ರೈತರು ಹಾಗೂ ರೈತ ಮುಖಂಡರು ಅಧಿಕಾರಿಗಳ ಭರವಸೆಗೆ ಒಪ್ಪಲಿಲ್ಲ. ಸಣ್ಣ ನೀರಾವರಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೆರೆಗಳಿಗೆ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಮುಖಂಡರು ಭಾಗಿ: ಹನುಮನಾಳ ಹೋಬಳಿ ವ್ಯಾಪ್ತಿಯ ರೈತರ ಸಮಸ್ಯೆ ಪಕ್ಷಾತೀತವಾಗಿದ್ದು, ಪ್ರತಿಭಟನೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರೈತ ಮುಖಂಡರು ಹಾಗೂ ನೂರಾರು ರೈತರು ಭಾಗವಹಿಸಿದ್ದರು.

ಮುಖಂಡರಾದ ಬಸವರಾಜ ಹಳ್ಳೂರ, ಈರಣ್ಣ ಗಜೇಂದ್ರಗಡ, ಮಹಾಂತೇಶ ಗಣವರಿ, ಕಲ್ಲಪ್ಪ ತಳವಾರ, ಚಂದಪ್ಪ ತಳವಾರ, ಅಶೋಕ ವಾಲಿಕಾರ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.