ದಾವಣಗೆರೆಯಲ್ಲಿನ ಗಾಂಜಾ ದಂಧೆ, ಪಾರ್ಕ್ ಅಕ್ರಮ ಕಾಮಗಾರಿಯ ವಿರುದ್ಧ ಬಿಜೆಪಿ ಧ್ವನಿ ಎತ್ತಿದ್ದರಿಂದ ಜನರನ್ನು ದಾರಿ ತಪ್ಪಿಸಲು ನಮ್ಮ ವಿರುದ್ಧ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುಳ್ಳು ಆರೋಪ ಮಾಡಿದ್ದಾರೆ. ಅವರು ತಮ್ಮಲ್ಲಿನ ಸಾಕ್ಷ್ಯಾಧಾರ, ದಾಖಲೆಗಳ ಸಮೇತ ಚರ್ಚೆಗೆ ಬರಲಿ. ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸೇರಿದಂತೆ ನಾವೂ ಚರ್ಚೆಗೆ ಸಿದ್ಧ ಎಂದು ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಸವಾಲು ಹಾಕಿದ್ದಾರೆ.

- ಯಶವಂತ ರಾವ್ ಸವಾಲು ಸ್ವೀಕರಿಸಿ, ಕಾಂಗ್ರೆಸ್‌ ಚರ್ಚೆಗೆ ಬರಲಿ: ಎಸ್.ಟಿ.ವೀರೇಶ, ಕೆ.ಪ್ರಸನ್ನ ಪಂಥಾಹ್ವಾನ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಲ್ಲಿನ ಗಾಂಜಾ ದಂಧೆ, ಪಾರ್ಕ್ ಅಕ್ರಮ ಕಾಮಗಾರಿಯ ವಿರುದ್ಧ ಬಿಜೆಪಿ ಧ್ವನಿ ಎತ್ತಿದ್ದರಿಂದ ಜನರನ್ನು ದಾರಿ ತಪ್ಪಿಸಲು ನಮ್ಮ ವಿರುದ್ಧ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುಳ್ಳು ಆರೋಪ ಮಾಡಿದ್ದಾರೆ. ಅವರು ತಮ್ಮಲ್ಲಿನ ಸಾಕ್ಷ್ಯಾಧಾರ, ದಾಖಲೆಗಳ ಸಮೇತ ಚರ್ಚೆಗೆ ಬರಲಿ. ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸೇರಿದಂತೆ ನಾವೂ ಚರ್ಚೆಗೆ ಸಿದ್ಧ ಎಂದು ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಸವಾಲು ಹಾಕಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಟಿ.ವೀರೇಶ, ಹಿಂದಿನಿಂದಲೂ ಕಾಂಗ್ರೆಸ್‌ ಅವಧಿಯ ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ಚರ್ಚೆಗೆ ಯಶವಂತ ರಾವ್ ಜಾಧವ್‌ ಸವಾಲು ಹಾಕಿದರೂ ನೀವ್ಯಾಕೆ ಚರ್ಚೆಗೆ ಮುಂದಾಗಿಲ್ಲ? ಹಳೆ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಪಾಲಿಕೆ ಎದುರಿನ ರೈಲ್ವೆ ಕೆಳಸೇತುವೆ ಮಳೆ ಬಂದಾಗ ನೀರು ನಿಲ್ಲುವುದು ದಶಕಗಳಷ್ಟು ಹಳೆಯ ಸಮಸ್ಯೆ. ಬಿಜೆಪಿ ಅವಧಿಯಲ್ಲಿ ತಾಂತ್ರಿಕ ಪರಿಹಾರ ಕಂಡುಕೊಳ್ಳಲಾಗಿತ್ತು. ಮಣ್ಣನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಕೆಲಸ ಪಾಲಿಕೆಯಿಂದ ಆಗುತ್ತಲೇ ಇದೆ ಎಂದರು.

ಡಾ.ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ, ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿಗಳ ನಿರ್ಮಾಣ ಕೋವಿಡ್ ಹಾವಳಿಯ ಕಾರಣಕ್ಕೆ ವಿಳಂಬವಾಗಿತ್ತು. ನಮ್ಮ ಅವಧಿಯಲ್ಲೇ ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿದ್ದೆವು. ಉಳಿದೆರೆಡು ಪುತ್ಥಳಿ ನಿರ್ಮಾಣ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಗುತ್ತಿಗೆದಾರನಿಗೆ 2024ರಲ್ಲೇ 3 ನೋಟಿಸ್ ನೀಡಿ, ಕ್ರಮ ಕೈಗೊಂಡಿದೆ. ಯಾವುದೇ ಕಾಮಗಾರಿ ಅನುಷ್ಠಾನ ಅಧಿಕಾರಿಗಳ ಕೆಲಸ. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಿದ್ದು, ತಮ್ಮ ವಿರುದ್ಧ ಕಿಕ್ ಬ್ಯಾಕ್ ಪಡೆದ ಆರೋಪ ತೇಜೋವಧೆ ಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಯುವ ಮುಖಂಡ ಕೆ.ಪ್ರಸನ್ನಕುಮಾರ ಮಾತನಾಡಿ, ದಾವಣಗೆರೆ ಅಭಿವೃದ್ದಿಗೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ನಮ್ಮೆಲ್ಲಾ ಹಾಲಿ-ಮಾಜಿ ಶಾಸಕರು, ಹಲವಾರು ನಾಯಕರು, ಸ್ಥಳೀಯ ದಾನಿಗಳು, ಗಣ್ಯರ ಕೊಡುಗೆ ಇದೆ. ರವೀಂದ್ರನಾಥ ಸಚಿವರಿದ್ದಾಗ ಜಿಲ್ಲಾ ಕೇಂದ್ರದ 125ಕ್ಕೂ ಹೆಚ್ಚು ಪಾರ್ಕ್‌ ಒತ್ತುವರಿ ತಡೆಯಲು, ಕಾಂಪೌಂಡ್‌ ನಿರ್ಮಿಸಿ, ಭದ್ರಪಡಿಸಿದ್ದರು. ಮನೆ, ಕಟ್ಟಡಗಳಿಗೆ, ಜನವಸತಿ ಪ್ರದೇಶಕ್ಕೆ ಮಳೆನೀರು ನುಗ್ಗುವುದನ್ನು ತಡೆಯಲು ರಾಜಕಾಲುವೆಗಳಿಗೆ ಕಾಯಕಲ್ಪ ನೀಡಿದ್ದರು ಎಂದರು.

ಜಿಲ್ಲಾಡಳಿತ ಭವನ ನಿರ್ಮಾಣ, ದಾವಣಗೆರೆ ವಿಶ್ವವಿದ್ಯಾನಿಲಯ ಸ್ಥಾಪನೆ, ಪಾಸ್ ಪೋರ್ಟ್‌ ಕಚೇರಿ, ಜಿಲ್ಲಾಸ್ಪತ್ರೆ, ಇಎಸ್ಐ ಆಸ್ಪತ್ರೆ, ಸಿಆರ್‌ಸಿ ಸೆಂಟರ್, ರೈಲ್ವೆ ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ, ಹಳೇ ಬಸ್ಸು ನಿಲ್ದಾಣ ಸೇರಿದಂತೆ ಬಹುತೇಕ ಅಭಿವೃದ್ಧಿ ಕಾಮಗಾರಿ ಬಿಜೆಪಿ ಜನಪ್ರತಿನಿಧಿಗಳು, ನಮ್ಮ ಸರ್ಕಾರದ ಕೊಡುಗೆ. ಇನ್ನು ಸಿಸಿ ರಸ್ತೆಗಳ ನಿರ್ಮಾಣ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಂದ ಅಂತ ದಿನೇಶ ಕೆ. ಶೆಟ್ಟಿ ಹೇಳ್ತಾರೆ. ಆದರೆ, 1951ರಲ್ಲೇ ನಗರಸಭೆ ಅಧ್ಯಕ್ಷರಾಗಿದ್ದ ಸಿ.ಕೇಶವಮೂರ್ತಿ ಸಿಸಿ ರಸ್ತೆಗಳನ್ನು ನಿರ್ಮಿಸಿದ್ದು, ಈಚಿನವರೆಗೂ ಅವು ಅತ್ಯಂತ ಸುಸ್ಥಿತಿಯಲ್ಲಿವೆ ಎಂದ ಅವರು, ನಮ್ಮ ವಿರುದ್ಧ ಮಾಡಿದ ಆರೋಪಕ್ಕೆ ದಿನೇಶ ಕೆ. ಶೆಟ್ಟಿ ತಕ್ಷಣ ಕ್ಷಮೆ ಕೇಳಲಿ ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಶ್ರೀನಿವಾಸ, ಶಿವರಾಜ ಪಾಟೀಲ, ಶಂಕರಗೌಡ ಬಿರಾದಾರ್, ಜಯಪ್ರಕಾಶ ಬಾಬು ಇತರರು ಇದ್ದರು.

- - -

-4ಕೆಡಿವಿಜಿ1: ದಾವಣಗೆರೆಯಲ್ಲಿ ಬಿಜೆಪಿ ಯುವ ಮುಖಂಡರಾದ ಮಾಜಿ ಮೇಯರ್ ಎಸ್.ಟಿ.ವೀರೇಶ, ಕೆ.ಪ್ರಸನ್ನಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.