ಎಸ್‌ಐಆರ್ ನಿಂದ ಚುನಾವಣೆ ಗೆಲ್ಲುವ ತಂತ್ರ ಬಿಜೆಪಿಗರದ್ದು, ಇಷ್ಟು ದಿನ ಧರ್ಮದ ಆಧಾರದ ಮೇಲೆ ಹೊಡಕೊಂಡ್ರು, ರಾಮಮಂದಿರ ಬಿಟ್ಟಾರ, ಈಗ ಎಸ್‌ಐಆರ್ ಹಿಡಿದಾರ, ಎಸ್‌ಐಆರ್ ನಿಂದಲೇ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಅನ್ನೋ ತಂತ್ರವಿದು ಎಂದು ಸಚಿವ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಎಸ್‌ಐಆರ್ ನಿಂದ ಚುನಾವಣೆ ಗೆಲ್ಲುವ ತಂತ್ರ ಬಿಜೆಪಿಗರದ್ದು, ಇಷ್ಟು ದಿನ ಧರ್ಮದ ಆಧಾರದ ಮೇಲೆ ಹೊಡಕೊಂಡ್ರು, ರಾಮಮಂದಿರ ಬಿಟ್ಟಾರ, ಈಗ ಎಸ್‌ಐಆರ್ ಹಿಡಿದಾರ, ಎಸ್‌ಐಆರ್ ನಿಂದಲೇ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಅನ್ನೋ ತಂತ್ರವಿದು ಎಂದು ಸಚಿವ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.ಬಾಗಲಕೋಟೆ ಜಿಲ್ಲೆಯ ಅಮರಾವತಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ರಾಜ್ಯಗಳಲ್ಲಿ ನೇರವಾಗಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಅನ್ನೋದು ಅವರಿಗೆ ಗೊತ್ತಾಗಿದೆ, ಏನಾದರೂ ಮಾಡಿ 2028ಕ್ಕೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಅಂತಿದ್ದಾರೆ, ಅದು ಆಗಲ್ಲ ಬಿಡಿ ಎಂದು ಹೇಳಿದರು.

24 ಸಾವಿರ ಫಾರ್ಮ್‌ ಪ್ರಿಂಟ್ ಆಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳುತ್ತಾರೆ. ಇದು ಬಿಜೆಪಿಗರಿಗೆ ಹೇಗೆ ಗೊತ್ತಾಯ್ತು, ಚುನಾವಣೆ ಆಯೋಗ ಅವರಿಗೆ ಹೇಳ್ತಾ? ಒಂದೊಂದು ಮತಕ್ಷೇತ್ರದಲ್ಲಿ 10-18 ಸಾವಿರ ಮತ ಡಿಲಿಟ್ ಮಾಡ್ರಿ ಎಂದು ಹೇಳಿತಾ? ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ಮತಗಳನ್ನ ಡಿಲಿಟ್ ಮಾಡೋದು ಬಿಜೆಪಿ ತಂತ್ರವಾಗಿದೆ. ಈಗ ಕುತಂತ್ರ ರಾಜಕಾರಣ ಮಾಡ್ತಿರೋದು ಬಿಜೆಪಿ. ರಾಜ್ಯದಲ್ಲಿ ಬಿಜೆಪಿ ಸತ್ತಿದೆಯೋ ಇದೆಯೋ ಅನ್ನೊದು ಗೊತ್ತಾಗಬೇಕಲ್ಲ, ಅದಕ್ಕಾಗಿಯೇ ರಾಜ್ಯದಲ್ಲಿ ಬಿಜೆಪಿ ಪಾದಯಾತ್ರೆ, ಪ್ರತಿಭಟನೆ ಮಾಡುತ್ತಿದೆ ಎಂದು ಹೇಳಿದರು.

ಬಿಜೆಪಿಗೆ ನಮ್ಮ ಸರ್ಕಾರದ ಜನಪರ ಯೋಜನೆ ಸಹಿಸಲಿಕ್ಕೆ ಆಗುತ್ತಿಲ್ಲ, ರಾಜ್ಯದಲ್ಲಿ ಬಿಜೆಪಿ ಕುತಂತ್ರ ರಾಜಕಾರಣ ಯಶಸ್ವಿ ಆಗಲ್ಲ, ಮತ್ತೆ 2028ಕ್ಕೆ ನಾವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಸಚಿವ ಕಾಶಪ್ಪನವರ ವಿಶ್ವಾಸ ವ್ಯಕ್ತಪಡಿಸಿದರು.

ಎಸ್‌ಐಆರ್ ನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ವಿಷಯದಲ್ಲಿ ಕಳ್ಳರು ಯಾರು ಎಂದು ಸ್ಪಷ್ಟವಾಗಿ ಇವತ್ತು ಗೊತ್ತಾಗಿದೆ. ಚುನಾವಣೆ ಆಯೋಗದ ಟೀಂನಲ್ಲಿ ಭಿನ್ನಾಭಿಪ್ರಾಯ ಬಂದಿದೆ. ರಾಜ್ಯದಲ್ಲಿ ಎಸ್‌ಯಆರ್ ವಿಚಾರದಲ್ಲಿ ಕಾಂಗ್ರೆಸ್ ಎಚ್ಚರ ವಹಿಸಿದೆ ಎಂದರು.----ಬಾಕ್ಸ್---

ಬದುಕಿದ್ದವರನ್ನು ಮೃತಪಟ್ಟಿದ್ದಾರೆಂದು ಎಂದ ವಿಜಯಪುರ ಶಾಸಕ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ಮನುಷ್ಯನ ಬಗ್ಗೆ ಏನು ಮಾತಾಡಬೇಕ್ರಿ. ಅದಕ್ಕೆ ತಾಳ ಇಲ್ಲ, ತಂತಿ ಇಲ್ಲ. ತಾಳ ತಂತಿ ಇದ್ದರ ವೀಣೆ ಬಾರಿಸಬಹುದು. ಆ ಗಿರಾಕಿಯದು ಎರಡೂ ಖಲ್ಲಾಸ್ ಆಗಿವೆ. ಸುಮ್ನೆ ಅಲ್ಪಸಂಖ್ಯಾತರಿಗೆ ಸಾಬರು ಅಂತ ಮಾತಾಡೋದು, ಮುಸ್ಲಿಂ ಹೆಣ್ಮಕ್ಕಳಿಗೆ ಬುರ್ಖಾ ಹಾಕಿಕೊಂಡಿದ್ದಾರೆ ಅಂತಾರೆ, ಅದು ಅವರ ವೇಷಭೂಷಣ, ಇವ ಯಾಕೆ ಕೋಟ್ ಹಾಕ್ತಾನ, ಕೇಸರಿ ಕಲರ್ ಹಾಕ್ತಾನ ಅಂತ ಕೇಳಿದರೆ ಏನಾಗುತ್ತದೆ. ಸುಮ್ನೆ ಸಾಬರು ಪಾಕಿಸ್ತಾನ, ಇಂಡಿಯಾ ಇದೇ ಮಾತಾಡೋದು. ಆ ಮುಸ್ಲಿಂ ಜನರು ನಾವು ಮೃತಪಟ್ಟಿಲ್ಲ ಎಂದು ಹೇಳಿದಾಗ ಉತ್ತರ ಕೊಡದೆ ಓಡಿ ಹೋಗಿದಾನೆ. ಹಿಟ್ ಆ್ಯಂಡ್‌ ರನ್ ಕೇಸ್ ಅದು ಅಷ್ಟೇ ಅವನ ಕೆಲಸವಾಗಿದೆ ಎಂದರು.